ಬೆಂಗಳೂರು: ಪಕ್ಷ ಸಂಘಟನೆಗಾಗಿ ಆಗಸ್ಟ್ ೨೦ ರಿಂದ ರಾಜ್ಯಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳುತ್ತಿರುವುದಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಚಾರ, ವಿಕಾಸ, ವಿಶ್ವಾಸ ಧ್ಯೇಯ ವಾಕ್ಯದೊಂದಿಗೆ ಜೆಡಿಎಸ್ ಆಗಸ್ಟ್ 20ರಿಂದ ಪಾದಯಾತ್ರೆ ಆರಂಭಿಸಲಿದೆ. ಮೊದಲ ಹಂತದ ಪಾದಯಾತ್ರೆ ನಂಜನಗೂಡಿನಿಂದ ಆರಂಭಗೊಳ್ಳಲಿದ್ದು, ಕಾವೇರಿಯಿಂದ ತುಂಗಭದ್ರೆವರೆಗೆ 1,475 ಕಿ.ಮೀ ಹಾಗೂ ಎರಡನೇ ಹಂತದಲ್ಲಿ ತುಂಗಭದ್ರೆಯಿಂದ ಮಲಪ್ರಭೆವರೆಗೆ ನಡೆಯಲಿದೆ ಎಂದು ತಿಳಿಸಿದರು.


ಆಗಸ್ಟ್ 20 ರಂದು ಹಿಂದುಳಿದ ವರ್ಗದ ನಾಯಕ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆಯಿದ್ದು, ಅಂದೇ ಪಾದಯಾತ್ರೆಗೆ ಚಾಲನೆ ಕೊಡಲಾಗುತ್ತಿದೆ. ಮೊದಲ ಹಂತದಲ್ಲಿ ನಂಜನಗೂಡು, ಮಳವಳ್ಳಿ, ಕೊಳ್ಳೇಗಾಲ, ಬೆಂಗಳೂರು, ಹೋಸಕೋಟೆ, ಕೋಲಾರ, ಚಿಂತಾವಣಿ, ಕುಣಿಗಲ್, ತುಮಕೂರು, ನೆಲಮಂಗಲ, ಮೈಸೂರು, ಮಡಿಕೇರಿ, ಸುಳ್ಯ, ಮಂಗಳೂರು, ಹಾಸನ, ಬೇಲೂರು, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹರಿಹರ ವರೆಗೆ ಪಾದಯಾತ್ರೆ ನಡೆಯಲಿದೆ. ಎರಡನೇ ಹಂತದ ಪಾದಯಾತ್ರೆ ಡಿಸೆಂಬರ್ 2020ರ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿದೆ ಎಂದು ಹೇಳಿದರು.


ಇದೆ ಸಂದರ್ಭದಲ್ಲಿ ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಿದ ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಅವರು 5 ವರ್ಷಗಳ ಕಾಲ ಸಿಎಂ ಆಗಿರಬೇಕು. ಮೈತ್ರಿ ಸರ್ಕಾರಕ್ಕೆ ಯಾವುದೇ ತೊದರೆ ಆಗದ ರೀತಿಯಲ್ಲಿ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಪಕ್ಷವನ್ನು ಬಲಗೊಳಿಸಿ ಮುನ್ನಡೆಸುವತ್ತ ಕಾರ್ಯಕರ್ತರು ಗಮನಹರಿಸಬೇಕು ಎಂದು ದೇವೇಗೌಡರು ಹೇಳಿದರು.