ನಮ್ಮ ಪರ ತೀರ್ಪು: ವಿಶ್ವನಾಥ್ ವಿಶ್ವಾಸ
ಹಿಂದಿನ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್, ಸೋ ಕಾಲ್ಡ್ ಬುದ್ದಿಜೀವಿಯಾಗಿ ತೆಗೆದುಕೊಂಡ ತೀರ್ಮಾನ ನಿಯಮಾವಳಿಗಳ ವಿರುದ್ಧವಾದುದಾಗಿದೆ- ಎಚ್. ವಿಶ್ವನಾಥ್
ನವದೆಹಲಿ: ಸುಪ್ರೀಂಕೋರ್ಟ್ ನಲ್ಲಿ ನಮ್ಮ ಪರವಾಗಿ ಬರುತ್ತೆ ಎಂಬ ನಂಬಿಕೆ ಇಟ್ಟುಕೊಂಡಿದ್ದೇವೆ ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ್ ಭರವಸೆ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸುವ ಹಿನ್ನೆಲೆಯಲ್ಲಿ ಮಂಗಳವಾರವೇ ದೆಹಲಿಗೆ ಬಂದಿಳಿದ ಎಚ್. ವಿಶ್ವನಾಥ್, ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್, ಸೋ ಕಾಲ್ಡ್ ಬುದ್ದಿಜೀವಿಯಾಗಿ ತೆಗೆದುಕೊಂಡ ತೀರ್ಮಾನ ನಿಯಮಾವಳಿಗಳ ವಿರುದ್ಧವಾದುದಾಗಿದೆ. ಅವರು ತೆಗೆದುಕೊಂಡ ನಿರ್ಧಾರ ಕರ್ನಾಟಕದಲ್ಲಿ ಶಾಸಕರ ವೇದಿಕೆಯನ್ನು ಬೆತ್ತಲೆ ಮಾಡಿತು. ಆದರೂ ನಮಗೆ ನ್ಯಾಯ ದೊರಕುವ ವಿಶ್ವಾಸ ಮತ್ತು ನಂಬಿಕೆ ಇದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಚುನಾವಣೆ ನಡೆಯುವ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ಜನ ಕಾನೂನನ್ನು ಎತ್ತಿ ಹಿಡಿತಾರೆ ಎಂಬ ವಿಶ್ವಾಸ ಕೂಡ ಇದೆ. ಇನ್ನೊಂದು ಪ್ರಶ್ನೆಗೆ ಜೆಡಿಎಸ್ ಶಾಸಕರು ಪಕ್ಷ ಬಿಡುವ ವಿಚಾರ ನನಗೆ ಮಾಹಿತಿ ಇಲ್ಲ. ನಾನು ಹುಣಸೂರು ಕ್ಷೇತ್ರದಿಂದ ಗೆದ್ದು ಬಂದವನು. ಮತ್ತೆ ನನಗೆ ಜಯ ಸಿಗುತ್ತೆ, ಸಿಗಲೇಬೇಕು ಎಂದರು.