ನವದೆಹಲಿ: ಬೆಂಗಳೂರಿನಲ್ಲಿನ ಅವ್ಯವಸ್ಥೆಗೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ(ಬಿಡಿಎ) ಮತ್ತು ರಾಜ್ಯ ಸರ್ಕಾರ  ಕಾರಣ ಎಂದು ಸುಪ್ರಿಂ ಕೋರ್ಟ್ ಅಭಿಪ್ರಾಯಪಟ್ಟಿದೆ.


COMMERCIAL BREAK
SCROLL TO CONTINUE READING

ಕೋಟಾ ಶಿವರಾಂ ಕಾರಂತ್ ಲೇ ಔಟ್ ಪ್ರಕರಣದ ವಿಚಾರವಾಗಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಯಾವುದೇ ಕಾರಣಕ್ಕೂ ಲೇ ಔಟ್ ಗಾಗಿ ಮೀಸಲಿಟ್ಟಿರುವ 650 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುವ ನಡೆಯನ್ನು ಹಿಂತೆಗೆದುಕೊಳ್ಳಬಾರದು ಎಂದು ಆದೇಶಿಸಿದೆ.


2008 ರಲ್ಲಿ ಬಡಾವಣೆ ನಿರ್ಮಾಣಕ್ಕಾಗಿ ಪ್ರಸ್ತಾಪಿಸಲ್ಪಟ್ಟಿರುವ ಭೂಮಿ ವಿಚಾರದಲ್ಲಿ ರಾಜಕೀಯ ಪ್ರಭಾವಕ್ಕೆ ಅಥವಾ ಇತರ ಕಾರಣಗಳಿಂದಾಗಿ ಲೇ ಔಟ್ ನ ಬಹುತೇಕ ಭಾಗವನ್ನು ಸ್ವಾಧೀನ ಪ್ರಕ್ರಿಯೆಯಿಂದ ಹೊರಗಿಟ್ಟಿರುವುದಕ್ಕೆ ಕೋರ್ಟ್  ಕಿಡಿಕಾರಿದೆ.


ಈ ವಿಚಾರವಾಗಿ ನ್ಯಾಯಮೂರ್ತಿ ಅರುಣ್ ಮಿಶ್ರಾ ಎಸ್ ಅಬ್ದುಲ್ ನಜೀರ್ ಒಳಗೊಂಡ ಪೀಠವು  ಮಾಜಿ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಕೆ.ಎನ್.ಕೇಶವನಾರಾಯಣ ಅವರನ್ನು ಬಿಡಿಎ ಮತ್ತು  ಸರ್ಕಾರಿ ಅಧಿಕಾರಿಗಳ ನಡುವೆ ಇರುವ ಫಿಕ್ಸಿಂಗ್ ವಿಚಾರವಾಗಿ ತನಿಖೆ ನಡೆಸಲು ಆದೇಶ ನೀಡಿತ್ತು.  ಈ ವಿಷಯವನ್ನು ಯಾವುದೇ ರೀತಿಯ ಒತ್ತಡದ ಕಾರಣಕ್ಕೆ ಸುಮ್ಮನೆ ಬಿಡುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.


ಈಗ ಕೋರ್ಟ್ ರಾಜ್ಯ ಸರ್ಕಾರ ಮತ್ತು ಬಿಡಿಎಗೆ ಭೂಸ್ವಾಧೀನ ಪ್ರಕ್ರೀಯೆಯನ್ನು ಮುಂದುವರೆಸಲು ನಿರ್ದೇಶಿಸಿದೆ. ಅಲ್ಲದೆ ಮೂರು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ತಿಳಿಸಿದೆ. ಇನ್ನು ಮುಂದುವರೆದು ಭೂ ಸ್ವಾಧೀನ ಪ್ರಕ್ರಿಯೆ ಕ್ರಮ ಯೋಜಿತವಾಗಿದೆ ನಗರದ ಅಭಿವೃದ್ಧಿಗೆ ಅವಶ್ಯಕವಾಗಿದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.


2008 ಡಿಸೆಂಬರ್ 30 ರಂದು ಬಡಾವಣೆಯ ಯೋಜನೆಯ ಅನುಗುಣವಾಗಿ 45 % ಭೂಮಿಯನ್ನು  ರಸ್ತೆ ಆಟದ ಮೈದಾನಕ್ಕೆ ಉಪಯೋಗಿಸಬೇಕು ಉಳಿದ 55% ರಷ್ಟು ಭೂಮಿಯನ್ನು ಮನೆ ನಿರ್ಮಾಣಕ್ಕೆ ಮೀಸಲಿಡಬೇಕು ಎನ್ನುವಂತೆ ಯೋಜನೆಯನ್ನು  ರೂಪಿಸಲಾಗಿತ್ತು . ಭೂಮಿ ಕಳೆದು ಕೊಂಡ ರೈತರು ಬಡಾವಣೆಯ ಭೂಮಿ ಅಥವಾ ಭೂ ಸ್ವಾಧೀನ ಕಾನೂನಿನಡಿಯಲ್ಲಿ ಅಡಿಯಲ್ಲಿ ನಿಗಧಿಪಡಿಸಿದ ಪರಿಹಾರದ ಮೊತ್ತವನ್ನು ಪಡೆದುಕೊಳ್ಳಬೇಕು ಎನ್ನುವ ಆಯ್ಕೆಯನ್ನು ನೀಡಲಾಗಿತ್ತು.


ಅಲ್ಲದೆ ಈಗ ಬಡಾವಣೆಯ ವಿಚಾರವಾಗಿ ನ್ಯಾಯಮೂರ್ತಿ ಕೇಶವನಾರಾಯಣ ಅವರಿಗೆ ತನಿಖೆಯ ವರದಿಯನ್ನು ಸಾಧ್ಯವಾದಷ್ಟು ಬೇಗ ಕೋರ್ಟ್ ಗೆ ಸಲ್ಲಿಸಬೇಕು ಎಂದು ಸುಪ್ರಿಂಕೋರ್ಟ್ ತಿಳಿಸಿದೆ.