ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದ್ದ ಕಂಪ್ಲಿ ಶಾಸಕ ಗಣೇಶ್ ಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.


COMMERCIAL BREAK
SCROLL TO CONTINUE READING

ಗುಜರಾತಿನ ಸೋಮನಾಥಪುರದಲ್ಲಿ ಬುಧವಾರ ಬಂಧನಕ್ಕೆ ಒಳಗಾಗಿದ್ದ ಗಣೇಶ್ ಅವರನ್ನು ಇಂದು ಮಾಗಡಿ ಪೊಲೀಸರು ರಾಮನಗರದ ಸಿಜೆಎಂ ನ್ಯಾಯಾಲಯಕ್ಕೆ ಹಾಜರಿ ಪಡಿಸಿದರು. ವಿಚಾರಣೆ ನಡೆಸಿದ ನ್ಯಾ. ಅನಿತಾ.ಎಂ ಗಣೇಶ್, ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಈ ಮೂಲಕ ಗಣೇಶ್ ಪರಪ್ಪನ ಅಗ್ರಹಾರದ ಜೈಲು ಪಾಲಾಗಿದ್ದಾರೆ.


ರೆಸಾರ್ಟ್ ರಾಜಕೀಯದ ಬೆಳವಣಿಗೆ ಹಿನ್ನೆಲೆಯಲ್ಲಿ ಜನವರಿ 20ರಂದು ಕಂಪ್ಲಿ ಶಾಸಕ ಗಣೇಶ್, ತಮ್ಮದೇ ಪಕ್ಷದ ಮತ್ತೊಬ್ಬ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಬಗ್ಗೆ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಮೇಲೆ ಗಣೇಶ್ ತಲೆ ಮರೆಸಿಕೊಂಡಿದ್ದರು.