ಬೆಂಗಳೂರು: ಕೆಪಿಜೆಪಿಯಿಂದ ಹೊರಬಂದಿರುವ ನಟ ಹಾಗೂ ನಿರ್ದೇಶಕ ಉಪೇಂದ್ರ ‘ಪ್ರಜಾಕೀಯ’ ಕಲ್ಪನೆಯಡಿ ಹೊಸ ಪಕ್ಷ ಕಟ್ಟಲು ಚಿತ್ರ ನಿರ್ಧರಿಸಿದ್ದಾರೆ. 


COMMERCIAL BREAK
SCROLL TO CONTINUE READING

ಕಳೆದ ಎರಡು ದಿನಗಳಿಂದ ಕೆಪಿಜೆಪಿಯಲ್ಲಿ ನಡೆದ ಆಂತರಿಕ ಭಿನ್ನಾಭಿಪ್ರಾಯ ಹಿನ್ನೆಲೆಯಲ್ಲಿ ಮಂಗಳವಾರ ತಮ್ಮ ರೆಸಾರ್ಟ್​ನಲ್ಲಿ ಸಭೆ ಕರೆದಿದ್ದ ಉಪೇಂದ್ರ ಅವರು, ಕೆಪಿಜೆಪಿಗೆ ವಿದಾಯ ಹೇಳುತ್ತಿರುವುದಾಗಿ ತಿಳಿಸಿದ್ದಾರೆ. 


ಇದರೊಂದಿಗೆ ಉಪೇಂದ್ರ ಅವರು ಕೆಪಿಜೆಪಿಯಿಂದ ಹೊರನಡೆದಿದ್ದು, ಬೇರೆ ಪಕ್ಷದಲ್ಲಿ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ. 'ಪ್ರಜಾಕೀಯ' ಹೆಸರಿನ ಪಕ್ಷವನ್ನು ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಸುವುದಾಗಿ ತಿಳಿಸಿದ್ದಾರೆ. 


ಈಗಾಗಲೇ ಕೆಪಿಜೆಪಿಯಡಿ ಸ್ಪರ್ಧೆಗಿಳಿಯಲು ಸಜ್ಜಾಗಿದ್ದ ತಮ್ಮ ಸ್ನೇಹಿತರು, ಅಭಿಮಾನಿಗಳು ಮತ್ತು ಅಭ್ಯರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಪ್ರಜಾಕೀಯ ಹೆಸರಿನಲ್ಲಿ ಹೊಸ ಪಕ್ಷ ಸ್ಥಾಪನೆಗೆ  ತತ್‌ಕ್ಷಣದಿಂದಲೇ ಪ್ರಕ್ರಿಯೆ ಆರಂಭಿಸುವುದಾಗಿ ಘೋಷಿಸಿದರು. 


ಕಾರ್ಮಿಕ ಸಮವಸ್ತ್ರದಲ್ಲಿ ಬಂದಿದ್ದ ಉಪೇಂದ್ರ ಅವರು, "ಪ್ರಜಾಕಿಯದ ಕಲ್ಪನೆಯಡಿ ಇದುವರೆಗೂ ಕೆಪಿಜೆಪಿ ಪಕ್ಷದಡಿ ಕೆಲಸ ಮಾಡಲಾಗುತ್ತಿತ್ತು. ಆದರೆ ಕೆಪಿಜೆಪಿ ಜೊತೆ ಉಂಟಾದ ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ಪಕ್ಷದಿಂದ ಹೊರಬರಲು ನಿರ್ಧರಿಸಿದೆ. ಇದೀಗ ಪ್ರಜಾಕಿಯ ಪಕ್ಷ ಹುಟ್ಟುಹಾಕಲು ಎಲ್ಲಾ ತಯಾರಿ ನಡೆಸಿದ್ದು, ಪ್ರಜಾಕೀಯದಡಿ ನಾವು ಅಂದುಕೊಂಡಿರುವ ಕೆಲಸ ಮುಂದುವರಿಸಲಿದ್ದೇವೆ. ಹಾಗೆಯೇ ಚುನಾವಣೆ ಒಳಗೆ ಪಕ್ಷ ನೋಂದಣಿಯಾದರೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಂಡಿತ" ಎಂದು ಅವರು ಹೇಳಿದರು. 


ಕಳೆದ ಆರು ತಿಂಗಳ ಹಿಂದಷ್ಟೇ ರಿಯಲ್ ಸ್ಟಾರ್ ನಟ ಉಪೇಂದ್ರ ಅವರು 'ಕರ್ನಾಟಕ ಪ್ರಜ್ಞಾವಂತರ ಜನತಾಪಕ್ಷ'ದ ಮೂಲಕ ಕರ್ನಾಟಕ ರಾಜ್ಯ ರಾಜಕೀಯ ಪ್ರವೇಶಿಸಿದ್ದರು.