ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮಹದಾಯಿ ವಿವಾದವನ್ನು ಕೂಡಲೇ ಇತ್ಯರ್ಥಗೊಳಿಸುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಇದೇ ಜನವರಿ 25 ರಂದು ಕರ್ನಾಟಕ  ಬಂದ್ ಗೆ ಕರೆ ನೀಡಿವೆ.


COMMERCIAL BREAK
SCROLL TO CONTINUE READING

ಜ.28ರಂದು ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಜನವರಿ 25ರಂದು ಬೃಹತ್ ಪ್ರತಿಭಟನೆ ಮತ್ತು ಬಂದ್ ಹಮ್ಮಿಕೊಳ್ಳುವುದರೊಂದಿಗೆ ಮೋದಿ ಅವರಿಗೆ ಕಪ್ಪುಬಾವುಟ ಪ್ರದರ್ಶಿಸಲು ನಿರ್ಧರಿಸಲಾಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. 


ಈ ಕುರಿತು ಮಾತನಾಡಿದ ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಮತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಈ ಮೊದಲು ಜ. 27ಕ್ಕೆ ಬಂದ್‌ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ, ಸಾಲುಸಾಲು ರಜೆಗಳಿರುವುದರಿಂದ ಎರಡು ದಿನ ಮೊದಲು ಅಂದರೆ 25ಕ್ಕೇ ಬಂದ್‌ ಆಚರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಈ ಬಾರಿ ಹೋರಾಟ ಬೃಹತ್ ಪ್ರಮಾಣದಲ್ಲಿ ಹಮ್ಮಿಕೊಳ್ಳಲಿದ್ದು, ಎಲ್ಲಾ ಕನ್ನಡ ಸಂಘಟನೆಯವರಿಗೆ ಕರೆ ಕೊಟ್ಟಿದ್ದೇನೆ. ಕನ್ನಡಿಗರ ಶಕ್ತಿ ಪ್ರದರ್ಶನ ಏನೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿಕೊಡಲಿದ್ದೇವೆ ಎಂದು ಹೇಳಿದರು. 


ಅಂದು ಬೆಳಿಗ್ಗೆ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ಹೊರಡಲಿದೆ. ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಚಿತ್ರರಂಗ ಸೇರಿದಂತೆ ರಾಜ್ಯದ ನೂರಾರು ಕನ್ನಡಪರ ಸಂಘಟನೆಗಳು ಕೈಜೋಡಿಸಿವೆ. 


ಬಿಜೆಪಿಯ 75 ದಿನಗಳ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ರಾಷ್ಟ್ರಿಯ ಅಧ್ಯಕ್ಷ ಅಮಿತ್ ಶಾ ನವೆಂಬರ್ 2ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಚಾಲನೆ ನೀಡಿದ್ದರು. ಯಾತ್ರೆಯ ಸಮಾರೋಪ ಸಮಾರಂಭ ಜನವರಿ 28ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ.