ಮೈಸೂರು : ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವಿನ ಸೈದ್ಧಾಂತಿಕ ಹೋರಾಟ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.


COMMERCIAL BREAK
SCROLL TO CONTINUE READING

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ 4ನೇ ಹಂತದ ರಾಜ್ಯ ಪ್ರವಾಸದಲ್ಲಿ ಇಂದು ಮೈಸೂರಿನಲ್ಲಿ ರೋಡ್ ಶೋ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಈ ಬಾರಿಯ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ಸೈದ್ಧಾಂತಿಕ ಹೋರಾಟವಾಗಿದ್ದು, ಪ್ರತಿಯೊಂದು ಬೂತ್'ನಲ್ಲಿಯೂ ಕಾಂಗ್ರೆಸ್, ಬಿಜೆಪಿಗೆ ಸ್ಪರ್ಧೆ ನೀಡಿ, ಕಾಂಗ್ರೆಸ್ ಬಲ ಏನು ಎಂಬುದನ್ನು ಸಾಬೀತುಪಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 



ಮುಂದುವರೆದು ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿಗಾಗಿ 4 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ. ಇದರಲ್ಲಿ ನೂತನ ಪಶುವೈದ್ಯಕೀಯ ಕಾಲೇಜು, ನೂತನ ಇಎಸ್ಐ ಆಸ್ಪತ್ರೆ, ಜಿಲ್ಲಾಡಳಿತ ಕಚೇರಿ, ಜಯದೇವ ಹೃದ್ರೋಗ ಆಸ್ಪತ್ರೆ ಮೊದಲಾದವುಗಳ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ಯಾವ ಸರ್ಕಾರವೂ ಮೈಸೂರು ನಗರಾಭಿವೃದ್ಧಿಗೆ ಇಷ್ಟೊಂದು ಅನುದಾನ ನೀಡಿರಲಿಲ್ಲ ಎಂದು ಹೇಳಿದರು.


ಪ್ರಧಾನಿ ನರೇಂದ್ರ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು. ಆದರೆ ನಾಲ್ಕು ವರ್ಷಗಳಾದರೂ ಯಾವುದೇ ಉದ್ಯೋಗ ಸೃಷ್ಟಿಯಾಗಿಲ್ಲ. ಮೋದಿ ಅವರು ಹೋದ ಕಡೆಯೆಲ್ಲಾ ಸುಳ್ಳು ಹೇಳುತ್ತಾರೆ. ದೊಡ್ಡ ದೊಡ್ಡ ಉದ್ಯಮಿಗಳ ಪರವಾಗಿ ಬಿಜೆಪಿ ಕೆಲಸ ಮಾಡುತ್ತಿದೆ ಎಂದು ರಾಹುಲ್ ಆರೋಪಿಸಿದರು. 


ಏಷ್ಯದಲ್ಲೇ ಅತಿ ದೊಡ್ಡ ಹನಿ ನೀರಾವರಿ ಯೋಜನೆ, ರಾಷ್ಟ್ರದಲ್ಲೇ ಅತಿ ಹೆಚ್ಚು ಉದ್ಯೋಗಸೃಷಿ ಮಾಡಿದ ರಾಜ್ಯ, ಏಶಿಯಾದಲ್ಲೇ ಅತಿ ದೊಡ್ಡ ಸೋಲಾರ್ ವಿದ್ಯುತ್ ತಯಾರಿಕಾ ಘಟಕ ಇವೆಲ್ಲವನ್ನೂ ನಿರ್ಮಿಸಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಸಾಧನೆ ಮಾಡಿದೆ. ಕಾಂಗ್ರೆಸ್ ಪಕ್ಷ ಬಿಜೆಪಿಯಂತೆ ಪೊಳ್ಳು ಭರವಸೆಗಳನ್ನು ನೀಡುವುದಿಲ್ಲ. ನುಡಿದಂತೆ ನಡೆಯುತ್ತದೆ ಎಂದರು. 



ಇದಕ್ಕೂ ಮುನ್ನ ಇತ್ತೀಚಿಗೆ ನಿಧನರಾದ ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ರಾಹುಲ್ ಗಾಂಧಿ ಸ್ಮರಿಸಿದರು. ಮುಂದುವರೆದು, ಈ ಬಾರಿಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದ್ದು, 2019ರ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.