ಬೆಂಗಳೂರು : ಕರ್ನಾಟಕ ರಾಜಕಾರಣದ ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಅಫ್ಜಲಪುರ ಶಾಸಕ ಮಾಲಿಕಯ್ಯ ವೆಂಕಯ್ಯ ಗುತ್ತೇದಾರ್ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ. ಇದರಿಂದ ಕಾಂಗ್ರೆಸ್'ಗೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮತಗಳು ಒಡೆಯುವ ಭೀತಿ ಎದುರಾಗಿದೆ.


COMMERCIAL BREAK
SCROLL TO CONTINUE READING

ಇಂದು ಬೆಳಿಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಬಿಜೆಪಿ ಸೇರುತ್ತಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಸದಸ್ಯತ್ವ ಮತ್ತು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಗುತ್ತೇದಾರ್ ತಿಳಿಸಿದ್ದಾರೆ.


"ನನಗೆ ಸಚಿವ ಸ್ಥಾನ ನೀಡಿಲ್ಲ ಎನ್ನುವ ಕಾರಣಕ್ಕಾಗಿ ನಾನು ಪಕ್ಷ ತೊರೆಯುತ್ತಿಲ್ಲ. ಆದರೆ ಕಾಂಗ್ರೆಸ್ ನಲ್ಲಿ ನಡೆದ ಕೆಲವು ಒಳಗಿನ ವಿದ್ಯಮಾನಗಳು ನನಗೆ ಬೇಸರ ಉಂಟುಮಾಡಿವೆ. ಯಾವ ಪಕ್ಷ ಸೇರುವುದು ಎಂಬ ಗೊಂದಲದಲ್ಲಿದ್ದೆ. ಕಡೆಗೆ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿ ಬಿಜೆಪಿ ಸೇರಲು ನಿರ್ಧರಿಸಿದ್ದೇನೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಮಾರ್ಚ್ 30 ಮತ್ತು 31 ರಂದು ಮೈಸೂರಿಗೆ ಭೇಟಿ ನೀಡಲಿದ್ದು, ಅವರ ಉಪಸ್ಥಿತಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದೇನೆ" ಎಂದು ಗುತ್ತೇದಾರ್ ಹೇಳಿದ್ದಾರೆ. 


ಈಡಿಗ ಸಮುದಾಯಕ್ಕೆ ಸೇರಿದ ಗುತ್ತೀದಾರ್ ಅವರು 1985, 1989, 1994, 1999, 2008, 2013 ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಅಫಜಲಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದಾರೆ. 2013ರಲ್ಲಿ ಗುತ್ತೇದಾರ್ 5,238 ಮತಗಳ ಅಂತರದಿಂದ ಜಯಗಳಿಸಿದ್ದರು. ಗುತ್ತೇದಾರ್ 38,093 ಮತಗಳನ್ನು ಪಡೆದಿದ್ದರೆ, ಕೆಜೆಪಿಯಿಂದ ಸ್ಪರ್ಧಿಸಿದ್ದ ಎಂ.ವೈ.ಪಟೀಲ್ 32,855 ಮತಗಳನ್ನು ಪಡೆದಿದ್ದರು.


ಕರ್ನಾಟಕ ವಿಧಾನಸಭೆ ಚುನಾವಣೆಗೆ ಇದೇ ಮೇ 12ರಂದು ಮತದಾನ ನಡೆಯಲಿದ್ದು, ಮೇ 15ರಂದು ಫಲಿತಾಂಶ ಹೊರಬೀಳಲಿದೆ.