ಬೆಂಗಳೂರು: ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಸಂಘಗಳ ಒಕ್ಕೂಟ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.  ನಗರದ ಆನಂದ್‍ರಾವ್ ವೃತ್ತದಲ್ಲಿ ಕಳೆದ 100 ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದ ಕನ್ನಡ ಪರ ಸಂಘಟನೆಗಳು ಸರ್ಕಾರದ ಗಮನ ಸೆಳೆಯುವ ಸಲುವಾಗಿ ಈ ಬಂದ್‍ಗೆ ಕರೆ ನೀಡಿವೆ.


COMMERCIAL BREAK
SCROLL TO CONTINUE READING

ಈ ಬಂದ್‌ಗೆ ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಮಹಿಳಾ ಹೋರಾಟಗಾರ್ತಿಯರು, ಓಲಾ, ಊಬರ್ ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಷನ್, ಲಾರಿ ಮಾಲೀಕರ ಸಂಘ, ಆಟೋ ಚಾಲಕರ ಸಂಘ, ಖಾಸಗಿ ವಾಹನ ಮಾಲೀಕರ ಸಂಘ, ಸರ್ಕಾರಿ ವಾಹನ ಚಾಲಕರ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಸೇರಿದಂತೆ  700ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಇನ್ನೂ ಕೆಲವು ಸಂಘಟನೆಗಳು ಬಂದ್‍ಗೆ ಬೆಂಬಲ ನೀಡದೆ ತಟಸ್ಥವಾಗಿವೆ.


ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಸಂಘಗಳ ಒಕ್ಕೂಟ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರುನಾಡು ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸ್ಥಬ್ದವಾಗಿರಲಿದೆ. ಕರ್ನಾಟಕ ಸಂಘಟನೆಗಳು ಬೆಂಗಳೂರಿನ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೂ ಬೃಹತ್ ಪ್ರತಿಭಟನಾ ಜಾಥಾ ನಡೆಸಲು ತೀರ್ಮಾನಿಸಿದ್ದವು. ಆದರೆ  ಬೆಂಗಳೂರು ನಗರ ಪೊಲೀಸ್ ಆಯುಕ್ತರು ಟೌನ್ ಹಾಲ್ ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್ ವರೆಗೆ ಪ್ರತಿಭಟನೆ ಜಾಥ ನಡೆಯಲಿದೆ.


ಏತನ್ಮಧ್ಯೆ, ಕರ್ನಾಟಕ ಬಂದ್ ನಮ್ಮ ಮೆಟ್ರೋ ಸಂಚಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ. ನಮ್ಮ ಮೆಟ್ರೋ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿರುವ  ಬಿಎಂಆರ್‌ಸಿಎಲ್ ಅಧಿಕಾರಿಗಳು ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಸಂಚಾರ ಬಂದ್ ವೇಳೆ ಎಂದಿನಂತೆ ಸಂಚರಿಸಲಿವೆ ಎಂದು ಸಾರಿಗೆ ನಿಗಮಗಳು ಸ್ಪಷ್ಟಪಡಿಸಿವೆ. 


ಇಂದು ಏನಿರುತ್ತೆ?


  • ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಸಂಚಾರ(ಪರಿಸ್ಥಿತಿ ವಿಕೋಪಗೊಂಡರೆ ಸ್ಥಗಿತ ಸಾಧ್ಯತೆ)

  • ನಮ್ಮ ಮೆಟ್ರೋ

  • ಆಸ್ಪತ್ರೆಗಳು, ಮೆಡಿಕಲ್ ಶಾಪ್

  • ಸರ್ಕಾರಿ ಕಛೇರಿಗಳು

  • ಆ್ಯಂಬುಲೆನ್ಸ್ ಸೇವೆ

  • ಹಾಲು, ಪೇಪರ್

  • ವಿಮಾನ, ರೈಲು

  • ಚಿತ್ರಮಂದಿರ

  • ಬ್ಯಾಂಕ್

  • ಹೋಟೆಲ್, ಶಾಪಿಂಗ್ ಮಾಲ್


ಇಂದು ಏನಿರಲ್ಲ?


  • ಬಟ್ಟೆ ಅಂಗಡಿ

  • ತರಕಾರಿ, ಹೂ-ಹಣ್ಣು

  • ಏರ್ ಪೋರ್ಟ್ ಟ್ಯಾಕ್ಸಿ ಬಂದ್

  • ಓಲಾ, ಊಬರ್ ಟ್ಯಾಕ್ಸಿ ಸಂಚಾರ ಬಂದ್

  • ಆಟೋಗಳು ಇಂದು ರಸ್ತೆಗಿಳಿಯುವುದಿಲ್ಲ