ಬೆಂಗಳೂರು: ನ್ಯಾಯಾಲಯದ ಆದೇಶವನ್ನು ಮೀರಿ ಕಳ್ಳತನದಿಂದ ಕಾವೇರಿಯನ್ನು ಹರಿ ಬಿಟ್ಟರೆ ಪಾಪದ ರೈತ ಇನ್ಯಾರ ಮೊರೆ ಹೋಗಬೇಕು ಹೇಳಿ? ನಮ್ಮ ನಾಡಿಗೆ ದ್ರೋಹ ಬಗೆದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ... ಧಿಕ್ಕಾರ..! ಎಂದು ಬಿಜೆಪಿ ಟೀಕಿಸಿದೆ.


COMMERCIAL BREAK
SCROLL TO CONTINUE READING

ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಬುಧವಾರ ಸರಣಿ ಟ್ವೀಟ್ ಮೂಲಕ ತೀವ್ರ ವಾಗ್ದಾಳಿ ನಡೆಸಿದೆ. ‘ಅಸಮರ್ಥ #ATMSarkaraದ ಪರಿಣಾಮವಾಗಿ ಕೆ‌ಆರ್‌ಎಸ್‌ನಲ್ಲಿ ನೀರಿನ ಮಟ್ಟ 100 ಅಡಿಗಿಂತ ಕೆಳಗೆ ಇಳಿಯೋ ಅಪಾಯದಲ್ಲಿದೆ. ಬಂಗಾರದ ಬೆಳೆ ಭಸ್ಮವಾಗುವ ಆತಂಕದಲ್ಲಿ ನಮ್ಮ ರೈತರಿದ್ದಾರೆ. ಇನ್ನೇನು ಕೆಲವೇ ತಿಂಗಳು ಕಳೆದರೆ ಬೆಂಗಳೂರಲ್ಲಿ ಕುಡಿಯೋ ನೀರಿಗೂ ತತ್ವಾರ ಶುರುವಾಗೋದಿದೆ. ನಿಯಮಗಳನ್ನು ಮಾತನಾಡುವವರಿಗಾದರೂ ಇದನ್ನು ಅರ್ಥ ಮಾಡಿಸಬಹುದು. ಆದರೆ ನಿಯತ್ತೇ ಇಲ್ಲದವರಿಗೆ ಅರ್ಥಮಾಡಿಸೋದು ಹೇಗೆ?’ ಎಂದು ಪ್ರಶ್ನಿಸಿದೆ.


‘ಕರ್ನಾಟಕದಲ್ಲಿ ದುರಾದೃಷ್ಟವಶಾತ್ 10 ವರ್ಷದ ಬಳಿಕ ಮತ್ತೆ ಬರದ ಛಾಯೆ ಆವರಿಸಿದೆ. ಮುಂಗಾರಿನಲ್ಲಿ ಬಂದ ಅಲ್ಪ ಮಳೆಯನ್ನೇ ನಂಬಿ ಕಾವೇರಿ ಒಡಲಿನ ಎರಡೂ ಮಡಿಲುಗಳಲ್ಲಿ ರೈತರು ಬಿತ್ತನೆ ಮಾಡಿ ಬೆಳೆಗಾಗಿ ಕಾಯುತ್ತಿದ್ದಾರೆ. ಆದರೆ ಅನ್ನ, ಹಣ, ಬೆಳಕು ಎಂದೆಲ್ಲಾ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಕ್ಕಿಯ ಪ್ರತಿ ಅಗಳಿನಿಂದ ಹಿಡಿದು ಕಾವೇರಿ ನೀರಿನ ಪ್ರತಿ ಹನಿಯವರೆಗೂ ರಾಜ್ಯದ ಜನತೆಗೆ ಮತ್ತು ಅನ್ನದಾತ ರೈತನಿಗೆ ಮಾಡಿದ್ದು ನಯವಂಚನೆ..!’ ಎಂದು ಬಿಜೆಪಿ ಟೀಕಿಸಿದೆ.


ಇದನ್ನೂ ಓದಿ: ಮಂಡ್ಯದಲ್ಲಿ ಮತ್ತಷ್ಟು ʼಕಾವೇರಿʼದ ರೈತರದ ಪ್ರತಿಭಟನೆ


‘ಅಧಿಕಾರದ ಲಾಲಸೆ, ದುರಾಸೆಗೆ ಬಿದ್ದ ಕಾಂಗ್ರೆಸ್, ಯಾವ ಯೋಜನೆಯನ್ನು ಹೇಗೆ ಅನುಷ್ಠಾನ ಮಾಡಬೇಕೆಂಬ ಕಿಂಚಿತ್ತೂ ಪರಿಕಲ್ಪನೆ ಇಲ್ಲದೆ ಮನಸೋಯಿಚ್ಛೆ ಯೋಜನೆಗಳನ್ನು ಘೋಷಿಸಿತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಆ ಯಾವ ಯೋಜನೆಯನ್ನೂ ಸರಿಯಾಗಿ ಅನುಷ್ಠಾನ ಮಾಡದೆ ರಾಜ್ಯದ ಜನತೆಯ ಕಿವಿ ಮೇಲೆ ಹೂ ಇಡಲಾಯಿತು..! ಮನೆಯ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ಕೊಡುತ್ತೇವೆಂದು ಕನ್ನಡಿಗರನ್ನು ನಂಬಿಸಿ ವಂಚಿಸಲಾಯಿತು. ಇದರ ಜತೆಗೆ ಅಕ್ಕಿಯಲ್ಲೂ ಸಿದ್ದರಾಮಯ್ಯರ ಭಂಡ ಸರ್ಕಾರದ ಒಣ ರಾಜಕೀಯ ಬೇರೆ. ಆದರೆ ಜನತೆ ಇದಕ್ಕೆ ಸೊಪ್ಪು ಹಾಕವುದಿಲ್ಲ ಎಂದು ತಿಳಿದವೆಂದು ಹಣ ತಿಂದು ಹೊಟ್ಟೆ ತುಂಬಿಸ್ಕೊಳಿ ಅಂತಾ ಬರೇ 170 ರೂ. ಕೊಟ್ಟು ನಕ್ಕುಬಿಟ್ಟಿತು ಘನತವೆತ್ತ #ATMSarkara ..! ಕ್ಷಮಿಸಲ್ಲಾ ಸ್ವಾಮಿ, ನಿಮ್ಮನ್ನ ಜನ ಕ್ಷಮಿಸಲ್ಲ’ ಎಂದು ಕುಟುಕಿದೆ.


‘ರಾಜ್ಯದ ಮನೆಮನೆಗೂ 200 ಯೂನಿಟ್ ಫ್ರೀ ವಿದ್ಯುತ್ ಅಂತಾ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬರೆದ ಇಂಕೇ ಇನ್ನೂ ಮಾಸಿಲ್ಲ, ಆಗ್ಲೇ ಮೋಸ ಮಾಡ್ಬಿಟ್ಟಿತ್ತು. ಉಚಿತ 200 ಯೂನಿಟ್ ಕೊಡೋದಲ್ಲ, ಬದಲಾಗಿ #ATMSarkara ತಂದಿರೋ ಲೋಡ್ ಶೆಡ್ಡಿಂಗ್ ಅನ್ನೋ ಭೂತ ಇದ್ದಿದ್ದನ್ನೂ ಕಿತ್ತುಕೊಂಡಿದೆ. ಲೋಡ್ ಶೆಡ್ಡಿಂಗ್ ಮೂಲಕ ಕರೆಂಟೇ ಇಲ್ಲದಂತೆ ಮಾಡಿದ್ದರೂ ಕೂಡ ವಿದ್ಯುತ್ ದರ ಮಾತ್ರ ಶಾಕ್ ಹೊಡಿಯುತ್ತಿದೆ. ಹೊಸ ಹೊಸಾ ಸ್ಲ್ಯಾಬುಗಳನ್ನು ಮಾಡಿ ಒಂದೇ ಸಲಕ್ಕೆ ಸಾವಿರಾರು ರೂ. ಜಡಿದದ್ದನ್ನು ಗಮನಿಸೋಕಾಗದಷ್ಟು ಕನ್ನಡಿಗರು ದಡ್ಡರಲ್ಲ. ಬದಲಾಗಿ ಇವನ್ನೆಲ್ಲಾ ನೆನಪಿಟ್ಟು ಕಾದು ಕೂರುವ ಗುಣದವರು ನಮ್ಮವರು’ ಎಂದು ಬಿಜೆಪಿ ಟ್ವೀಟ್ ಮಾಡಿದೆ.


‘ಇದರ ನಡುವೆ ಶಕ್ತಿ ಹೆಸರಲ್ಲಿ ಮಹಿಳೆಯರಿಗೆ ಉಚಿತ ಅಂತಾ ಹೇಳಲಾಯ್ತು, ಆದರೆ ಸಾರಿಗೆ ನಿಗಮಗಳು ಹಳ್ಳ ಹಿಡಿದವು. ಪಾಲಿಗೆ ಬರಬೇಕಾದ ದುಡ್ಡು ಈ ಸರ್ಕಾರ 3 ತಿಂಗಳಾದರೂ ಇನ್ನೂ ನೀಡಿಲ್ಲ. ಇದರಿಂದಾಗಿ ಸಾರಿಗೆ ನಿಗಮ ಸಂಕಷ್ಟದ ಕಡೆಗೆ ಸಾಗ್ತಾ ಇದೆ. ಸಾರಿಗೆ ನೌಕರರು ಸರಿಯಾದ ಸಮಯಕ್ಕೆ ಸಂಬಳ ಸಿಗದೆ ಡಿಪೋದಲ್ಲೇ ಕಾಲ ಕಳೆದರು. ದುರಸ್ತಿಗೂ ದುಡ್ಡಿಲ್ಲದೆ ರಸ್ತೆಗಿಳಿತಾ ಇರೋ ಬಸ್ಸುಗಳು ಯಮನ ಕಿಂಕರರ ಸ್ವರೂಪಗಳಾಗುತ್ತಿವೆ. ಇದರ ನಡುವೆ ಎಲ್ಲಾ ಇಲಾಖೆಗಳಲ್ಲೂ ವರ್ಗಾವಣೆ ದಂಧೆ ಮಿತಿ ಮೀರಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟು ಮರಳಿನಂತ ಮಾಫಿಯಾಗಳು ರಾಜ್ಯದಲ್ಲಿ ವಿಜೃಂಭಿಸುತ್ತಿವೆ’ ಎಂದು ಬಿಜೆಪಿ ಟೀಕಿಸಿದೆ.


ಇದನ್ನೂ ಓದಿ: ಬೆಂಗಳೂರು, ತುಮಕೂರು ಸೇರಿದಂತೆ 14 ಸ್ಥಳಗಳಲ್ಲಿ ಮೆಗಾ ರೇಡ್‌


‘ಇಷ್ಟೆಲ್ಲಾ ಆದಮೇಲೂ  ಗಾಯದ ಮೇಲೆ ಉಪ್ಪು ಸುರಿಯೋದು ಅಂತಾರಲ್ಲಾ, ಅದನ್ನೇ ಕಾಂಗ್ರೆಸ್ ಸರ್ಕಾರ ಮಾಡ್ತಿದೆ. ನಮ್ಮ ರೈತರ ಕಣ್ಣೆದುರೇ ಕಾವೇರಿಯನ್ನು ತಮಿಳುನಾಡಿಗೆ ಹರಿಬಿಟ್ಟು, ಸಂಕಟವನ್ನು 100 ಪಟ್ಟು ಹೆಚ್ಚು ಮಾಡಿದೆ. ಕಾವೇರಿ ನ್ಯಾಯಾಧಿಕರಣವೇ ನಿಗದಿ ಮಾಡಿದ್ದಕ್ಕಿಂತಲೂ 2 ಪಟ್ಟು ನೀರನ್ನು ಈಗಾಗಲೇ ಹರಿಬಿಟ್ಟಿದ್ದಾರೆ. ರಾಜ್ಯದ ರೈತರ ಹಿತಕ್ಕಿಂತಲೂ, ಕಾಂಗ್ರೆಸ್ ಸ್ನೇಹಿತರಾದ ಸ್ಟಾಲಿನ್ ಅವರಿಗೆ ಅನುಕೂಲ ಮಾಡಿಕೊಡುವುದು ಸಿದ್ದರಾಮಯ್ಯರ ಗುರಿ. ಹಾಗಾಗಿ ಈಗ ಪ್ರತಿನಿತ್ಯವೂ 15,000 ಕ್ಯೂಸೆಕ್ಸ್ ನೀರನ್ನು ಬಿಡಲಾಗ್ತಾ ಇದೆ. ಅಲ್ಲದೆ 32 tmc ನೀರು ಬಿಡಬೇಕು ಅನ್ನೋ ನ್ಯಾಯಾಧಿಕರಣದ ಆದೇಶವನ್ನೂ ಮೀರಿ 60 tmc ನೀರನ್ನು ತಮಿಳುನಾಡಿಗೆ ಹರಿಸಲಾಗ್ತಿದೆ. ಅಂದ್ಹಾಗೆ 60 tmc ಅಂದ್ರೆ ಎಷ್ಟು ಗೊತ್ತಾ? ಸುಮಾರು 4 ಲಕ್ಷ ಹೆಕ್ಟೇರ್‌ ಬೆಳೆಗೆ ಆಗೋವಷ್ಟು ನೀರು..!’ ಎಂದು ಬಿಜೆಪಿ ಕುಟುಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.