ಬೆಂಗಳೂರು: ಭಾರೀ ಕುತೂಹಲ ಮೂಡಿಸಿದ್ದ ಕರ್ನಾಟಕದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ಇಂದು ನಡೆದ ಉಪಚುನಾವಣೆಯಲ್ಲಿ ಮೈತ್ರಿ ಸರ್ಕಾರ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ನಾಯಕತ್ವಕ್ಕೆ ಮತ್ತಷ್ಟು ಬಂಡಾಯದ ಬಿಸಿ ಮುಟ್ಟುವಂತಾಗಿದೆ.


COMMERCIAL BREAK
SCROLL TO CONTINUE READING

ಬಳ್ಳಾರಿ, ಮಂಡ್ಯ ಲೋಕಸಭಾ ಕ್ಷೇತ್ರಗಳು ಮತ್ತು ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಯಡಿಯೂರಪ್ಪ ಅವರ ತವರು ಜಿಲ್ಲೆಯಾದ ಶಿವಮೊಗ್ಗ-ಬೈಂದೂರು ಲೋಕಸಭಾ ಕ್ಷೇತ್ರವೊಂದರಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ. ತೀವ್ರ ಜಿದ್ದಾ ಜಿದ್ದಿ ಕ್ಷೇತ್ರವಾಗಿದ್ದ, ಜನಾರ್ಧನರೆಡ್ಡಿ ಭದ್ರ ಕೋಟೆಯಂತಿದ್ದ ಬಳ್ಳಾರಿಯಲ್ಲಿಯೂ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಇದರಿಂದಾಗಿ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. 


ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ 6,28,365 ಮತ ಪಡೆದು ಗೆಲುವು ಸಾಧಿಸಿದ್ದರೆ, ಬಿಜೆಪಿಯ ಜೆ.ಶಾಂತಾ 3,85,204 ಮತ ಗಳಿಸಿ ಪರಾಜಯಗೊಂಡಿದ್ದಾರೆ. ಈ ಮೂಲಕ 2,43,161 ಮತಗಳ ಅಂತರದಿಂದ ವಿ.ಎಸ್.ಉಗ್ರಪ್ಪ ಭರ್ಜರಿ ಗೆಲುವು ಸಾಧಿಸಿದ್ದಾರೆ. 


ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಲ್.ಶಿವರಾಮೇಗೌಡ ಬರೋಬ್ಬರಿ 5,69,347 ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಇನ್ನು, ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಅವರು 2,44,404 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಈ ಮೂಲಕ 3,24,943 ಮತಗಳ ಅಂತರದಲ್ಲಿ ಜೆಡಿಎಸ್ ಭರ್ಜರಿ ಗೆಲುವು ಸಾಧಿಸಿದೆ. 


ಶಿವಮೊಗ್ಗ-ಬೈಂದೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 5,43,306 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮಧುಬಂಗಾರಪ್ಪ 4,91,158 ಮತಗಳನ್ನು ಪಡೆದರೆ, ಜೆಡಿಯು ಅಭ್ಯರ್ಥಿ ಮಹಿಮಾ ಪಟೇಲ್ 8,713 ಮತಗಳನ್ನು ಪಡೆದಿಡು ಸೋಲನುಭವಿಸಿದ್ದಾರೆ. 


ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು 1,25,043 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ 15,906 ಮತಗಳನ್ನು ಗಳಿಸುವ ಮೂಲಕ ಪರಾಭವಗೊಂಡಿದ್ದಾರೆ.


ಜಮಖಂಡಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ 97,017 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಅವರು 57,537 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ವಿರುದ್ಧ ಭಾರೀ ಅಂತರದಿಂದ  ಭರ್ಜರಿ ಗೆಲುವು ಸಾಧಿಸಿದ್ದಾರೆ.