ಕಾವೇರಿ ಸಂಕಷ್ಟಕ್ಕೆ ಪರಿಹಾರವಾಗಿರುವ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಲಿ: ಡಿಕೆಶಿ ಆಗ್ರಹ
DK Shivakumar On Cauvery Water Dispute : ಸಂಕಷ್ಟದ ಪರಿಸ್ಥಿತಿಯಲ್ಲಿ ಕಾವೇರಿ ಸಮಸ್ಯೆಗೆ ಮೇಕೆದಾಟು ಯೋಜನೆಯೊಂದೇ ಪರಿಹಾರವಾಗಿದೆ. ನ್ಯಾಯಾಲಯ ಈ ವಿಚಾರವಾಗಿ ಕೆಳಹಂತದಲ್ಲೇ ಪರಿಹಾರ ಕಂಡುಕೊಳ್ಳಲು ಸೂಚನೆ ನೀಡಿದ್ದು, ಈಗ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅಗತ್ಯ ಎಲ್ಲ ಇಲಾಖೆಗಳ ಅನುಮತಿ ನೀಡಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಒತ್ತಾಯಿಸಿದರು.
ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ನಂತರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಕಾವೇರಿ ನೀರಿನ ವಿಚಾರವಾಗಿ ಮಾಧ್ಯಮಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡು ಪಾಲಿನ ನೀರು ಹರಿಸಲು ನಾವು ಬದ್ಧರಾಗಿದ್ದೇವೆ. ನಿನ್ನೆ ನಡೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸಹ, ನಿಮ್ಮ ಪಾಲಿನ ನೀರು ನಿಮಗೆ ಸಿಗಲಿದೆ, ಹೀಗಿರುವಾಗ ಕರ್ನಾಟಕದವರು ಎಷ್ಟಾದರೂ ಆಣೆಕಟ್ಟೆ ಕಟ್ಟಿಕೊಳ್ಳಲಿ ಬಿಡಿ. ನೀವೇಕೆ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದೀರಿ? ಈ ವಿಚಾರವಾಗಿ ಕೆಳಹಂತದಲ್ಲೇ ತೀರ್ಮಾನ ಮಾಡಿ ಎಂದು ತಿಳಿಸಿದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಸ್ನೇಹಿತರು ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಒತ್ತಡ ಹಾಕಲಿ ಎಂದು ಆಗ್ರಹಿಸಿದರು.
ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು 24 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆಗ್ರಹ ಮಾಡಿತ್ತು. ನಮ್ಮ ಅಧಿಕಾರಿಗಳು ತಾಂತ್ರಿಕ ಸಮಿತಿ ಮುಂದೆ, ನಾವು ಕೇವಲ 3 ಸಾವಿರ ಕ್ಯೂಸೆಕ್ ನೀರು ಬಿಡಲಷ್ಟೇ ಶಕ್ತವಾಗಿದ್ದೇವೆ ಎಂದು ಸಮರ್ಥವಾಗಿ ವಾದ ಮಂಡಿಸಿದರು. ಇದರ ಪರಿಣಾಮವಾಗಿ 10 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಪ್ರಾಧಿಕಾರ ಮೊದಲು ಆದೇಶ ನೀಡಿತು. ನಂತರ 5 ಸಾವಿರ ಕ್ಯೂಸೆಕ್ ಗೆ ಇಳಿಕೆಯಾಗಿದೆ ಎಂದರು.
ಇದನ್ನೂ ಓದಿ : ಸಚಿವನಾಗಿ ಕೆಲವು ವಿಚಾರ ಬಿಚ್ಚಿಡಲು ಆಗುವುದಿಲ್ಲ, ಪರಿಣಾಮದ ಅರಿತು ಮಾತನಾಡಬೇಕು : ಡಿಸಿಎಂ ಡಿ.ಕೆ ಶಿವಕುಮಾರ್
ನಾವು ಉತ್ತಮ ಮಳೆ ನಿರೀಕ್ಷೆ ಮಾಡಿದ್ದೆವು. ಆದರೆ ಮಳೆ ಅಭಾವ ಎದುರಾಗಿದೆ. ಈ ಮಧ್ಯೆ ಮಂಡ್ಯ ಹಾಗೂ ಇತರೆ ಭಾಗದ ರೈತರ ಬೆಳೆ ಉಳಿಸುವ ಉದ್ದೇಶದಿಂದ ಜಮೀನಿಗೆ ನೀರು ಹರಿಸಿ ಅವರ ರಕ್ಷಣೆ ಮಾಡಿದ್ದೇವೆ. ನಾವು ಮೇಲ್ಮನವಿ ಸಲ್ಲಿಸುವ ಮುನ್ನ ಸರ್ವಪಕ್ಷ ಸಭೆ ಮಾಡಿ ಚರ್ಚೆ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ವಿಚಾರಣೆಗೂ ಮುನ್ನ ಸರ್ವಪಕ್ಷ ನಾಯಕರ ಸಭೆ ಮಾಡಿದ್ದೆವು. ಆದರೆ ನ್ಯಾಯಾಲಯ ಎರಡೂ ರಾಜ್ಯಗಳ ಅರ್ಜಿ ಹಾಗೂ ಎರಡೂ ರಾಜ್ಯಗಳ ರೈತರ ಅರ್ಜಿಗಳನ್ನು ತಿರಸ್ಕರಿಸಿ, ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದರು.
ಆ ಮೂಲಕ ಈ ತಿಂಗಳು 27 ರವರೆಗೂ ನೀರು ಹರಿಸುವ ಪರಿಸ್ಥಿತಿ ಬಂದಿದೆ. ಈ ಹಿಂದೆ ಬಿಜೆಪಿ, ದಳದ ಸರ್ಕಾರ ಇದ್ದಾಗಲೂ ಇಂತಹ ಪರಿಸ್ಥಿತಿ ಎದುರಾಗಿತ್ತು. ಆಗಲೂ ರಾಜ್ಯ ನೀರು ಹರಿಸಿದೆ. ಬಿಜೆಪಿ ಸರ್ಕಾರ ಈ ಹಿಂದೆ ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ 10 ಸಾವಿರ ಕ್ಯೂಸೆಕ್ ನೀರು ಹರಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಕೆ ಮಾಡಿದ್ದ ದಾಖಲೆಯೂ ನಮ್ಮ ಬಳಿ ಇದೆ. ಆದರೂ ಇಂದು ಯಡಿಯೂರಪ್ಪನವರು ಹಾಗೂ ಬೊಮ್ಮಾಯಿ ಅವರು ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಈ ಪರಿಸ್ಥಿತಿಯಲ್ಲಿ ರಾಜಕಾರಣ ಮಾತನಾಡಲು ನನಗೆ ಇಚ್ಛೆ ಇಲ್ಲ. ನಾನು ರಾಜಕಾರಣ ಮಾಡಬಹುದು. ಎಲ್ಲರಿಗೂ ಉತ್ತರ ನೀಡುವಷ್ಟು ಶಕ್ತಿ ಜನ ನಮಗೆ ನೀಡಿದ್ದಾರೆ. ಕುಮಾರಣ್ಣ, ಯಡಿಯೂರಪ್ಪ, ಬೊಮ್ಮಾಯಿ ಅವರ ಪ್ರತಿ ಮಾತಿಗೂ ಅವರ ಸರ್ಕಾರದ ಸಮಯದಲ್ಲಿ ಏನಾಗಿತ್ತು ಎಂದು ದಾಖಲೆ ಸಮೇತ ಉತ್ತರ ನೀಡಬಲ್ಲೆ ಎಂದು ಹೇಳಿದರು.
ಚಿತ್ರರಂಗ, ಕನ್ನಡಪರ ಸಂಘಟನೆಗಳು ಈಗ ಬಹಳ ಚೆನ್ನಾಗಿ ರೋಷಾವೇಶ ತೋರುತ್ತಿವೆ. ಬಹಳ ಸಂತೋಷ. ಅವರ ವಿಚಾರಗಳು ಈಗ ಹೊರಗೆ ಬರುತ್ತಿರುವುದಕ್ಕೆ ಸಂತೋಷವಾಗಿದೆ. ಆದರೆ ನಾವು ಮೇಕೆದಾಟು ಯೋಜನೆಗೆ ಆಗ್ರಹಿಸಿ ನೀರಿಗಾಗಿ ನಾವು ಹೆಜ್ಜೆ ಹಾಕಿದಾಗ ಇವರೆಲ್ಲ ಎಲ್ಲಿದ್ದರು, ಎಲ್ಲಿಗೆ ಹೋಗಿದ್ದರು? ಆಗಲೂ ಕೆಲವು ಸ್ವಾಮೀಜಿಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದರು. ನಾನು ಆ ಹೋರಾಟವನ್ನು ನನ್ನ ಸ್ವಾರ್ಥಕ್ಕೆ ಮಾಡಿದ್ದೆನಾ? ಆಗ್ಯಾಕೆ ಇವರು ಧ್ವನಿ ಎತ್ತಲಿಲ್ಲ? ಎಂದರು.
ಇದನ್ನೂ ಓದಿ : ಸಂಕಷ್ಟ ಹಂಚಿಕೆ ಸೂತ್ರ ಅನಿವಾರ್ಯ: ಸಚಿವ ಎನ್. ಚಲುವರಾಯಸ್ವಾಮಿ
ವಿರೋಧ ಪಕ್ಷದಲ್ಲಿರುವವರು ನಮ್ಮನ್ನು ದೂಷಣೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ರಾಜ್ಯದ ಜನರು ಹಾಗೂ ರೈತರ ರಕ್ಷಣೆಗೆ ಬದ್ಧವಾಗಿದ್ದು, ನಮ್ಮ ಕಾನೂನು ತಜ್ಞರ ವಾದ ನಮಗೆ ತೃಪ್ತಿ ಇದೆ. ಕುಮಾರಸ್ವಾಮಿ ಹಾಗೂ ಬೊಮ್ಮಾಯಿ ಅವರು ಯಾವ ವಕೀಲರನ್ನು ನೇಮಿಸಿದ್ದರೋ ಅದೇ ವಕೀಲರನ್ನು ಇಟ್ಟುಕೊಂಡೇ ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ನಾವು ವಿಳಂಬವಾಗಿ ಹೋರಾಟ ಮಾಡಿಲ್ಲ. ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಅದಕ್ಕೇ ಆದ ಪ್ರಕ್ರಿಯೆಗಳಿವೆ. ಕೆಳ ಹಂತದಲ್ಲಿ ನಮಗೆ ನ್ಯಾಯ ಸಿಗಲಿಲ್ಲ ಎಂದಾಗ ನಾವು ಉನ್ನತ ನ್ಯಾಯಾಲಯದ ಮೊರೆ ಹೋಗಬೇಕು. ಸುಪ್ರೀಂ ಕೋರ್ಟ್ ಎರಡು ಬಾರಿಯೂ ನಾನು ಈ ವಿಚಾರದಲ್ಲಿ ತಲೆ ಹಾಕುವುದಿಲ್ಲ ಎಂದು ಹೇಳಿದೆ. ಮತ್ತೆ ಪ್ರಾಧಿಕಾರದ ಬಳಿ ಚರ್ಚೆ ಮಾಡಲು ಹೇಳಿದೆ. ಈಗ ಮರುಪರಿಶೀಲನೆ ಅರ್ಜಿ ಹಾಕಿದರೂ ಇಷ್ಟೇ ತಾನೇ ಆಗುವುದು ಎಂದು ಹೇಳಿದರು.
ತಮ್ಮ ರಾಜ್ಯ ರಾಜಸ್ಥಾನದಲ್ಲೂ ಇದೇ ಪರಿಸ್ಥಿತಿ ಇಂದೆ ಎಂದು ಕೇಂದ್ರ ಜಲಶಕ್ತಿ ಸಚಿವರು ಹೇಳುತ್ತಿದ್ದರು. ದೇಶದಲ್ಲಿ ಮಳೆ ಬಾರದೇ ಇದ್ದಾಗ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಾವೇರಿ ಕೊಳ್ಳದಲ್ಲಿ ಈ ವರ್ಷದ ಆಗಸ್ಟ್ ತಿಂಗಳ ಮಳೆ ಕೊರತೆ ಕಳೆದ 130 ವರ್ಷಗಳಲ್ಲೇ ದಾಖಲೆ ಮಟ್ಟದ್ದಾಗಿದೆ. ಈ ಹಿಂದೆ ಕೆಆರ್ ಎಸ್ ನಲ್ಲಿ ಹೋಮ, ಹವನ ಮಾಡಿಸಿದ ಘಟನೆಗಳನ್ನು ನಾವು ನೋಡಿದ್ದೇವೆ ಎಂದು ಹೇಳಿದರು.
ನಮ್ಮ ರಾಜ್ಯದ ಬಿಜೆಪಿಯ ಕೇಂದ್ರ ಸಚಿವರು ಸರ್ವಪಕ್ಷ ಸಂಸದರ ಸಭೆಯಲ್ಲಿ ಏನು ಹೇಳಬೇಕೋ ಅದನ್ನು ಹೇಳಿದರು. ಹೊರಗೆ ಮಾಧ್ಯಮಗಳ ಮುಂದೆ ಬಂದು ರಾಜಕಾರಣ ಹೇಳಿಕೆ ನೀಡಿದರು. ಇಲ್ಲೂ ಸರ್ವಪಕ್ಷಗಳ ಸಭೆಯಲ್ಲಿ ವಿರೋಧ ಪಕ್ಷಗಳದು ಇದೇ ಧೋರಣೆ. ಅವರ ರಾಜಕಾರಣ ಅವರು ಮಾಡಲಿ ಎಂದು ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.