ಸಿದ್ಧಗಂಗಾ ಶ್ರೀಗಳ ಹುಟ್ಟೂರು ದತ್ತು ತೆಗೆದುಕೊಳ್ಳುಲು ರಾಜ್ಯ ಸರ್ಕಾರ ನಿರ್ಧಾರ
ಸಿದ್ಧಗಂಗಾ ಶ್ರೀಗಳ ಹುಟ್ಟೂರಾದ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರವನ್ನು ದತ್ತು ತೆಗೆದುಕೊಂಡು ಅಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
ಬೆಂಗಳೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟೂರನ್ನು ದತ್ತು ತೆಗೆದುಕೊಳ್ಳಳು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು, ಸಿದ್ಧಗಂಗಾ ಶ್ರೀಗಳ ಹುಟ್ಟೂರಾದ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರವನ್ನು ದತ್ತು ತೆಗೆದುಕೊಂಡು ಅಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ಏಪ್ರಿಲ್ 1, 1908ರಲ್ಲಿ ಮಾಗಡಿ ತಾಲೂಕಿನ ವೀರಾಪುರದ ಶ್ರೀಯುತ ಹೊನ್ನೇಗೌಡ ಮತ್ತು ತಾಯಿ ಗಂಗಮ್ಮನವರಿಗೆ ಶಿವಣ್ಣನಾಗಿ ಶ್ರೀಗಳು ಜನಿಸಿದರು. ವೀರಾಪುರದಲ್ಲಿಯೇ ಇದ್ದ ಕೂಲಿಮಠದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶ್ರೀಗಳ ಶೈಕ್ಷಣಿಕ ಜೀವನ ಆರಂಭಿಸಿದ ಅವರು, ಬಳಿಕ ಪ್ರಾಥಮಿಕ ಶಾಲೆಗಾಗಿ ಪಕ್ಕದ ಪಾಲನಹಳ್ಳಿಯ ಶಾಲೆಗೆ ದಾಖಲಾದರು. ತುಮಕೂರು ಬಳಿ ಇರುವ ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿದರು. 1927-30ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಪಡೆದರು.
1930ರಲ್ಲಿ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾದ ನಂತರ ಉದ್ಧಾನ ಶ್ರೀಗಳು ಎಲ್ಲರ ಸಮ್ಮುಖದಲ್ಲಿ ಶ್ರೀಗಳನ್ನು ಮಠದ ಉತ್ತರಾಧಿಕಾರಿಯನ್ನಾಗಿ ನೇಮಿಸಿದರು. ಅಂದಿನಿಂದ ಇಂದಿನವರೆಗೆ ಶ್ರೀ ಕ್ಷೇತ್ರದ ಅಭಿವೃದ್ಧಿಯ ಜತೆಗೆ ಸಮಾಜದ ಕಲ್ಯಾಣಕ್ಕಾಗಿ ಸತತ 88 ವರ್ಷಗಳ ಸುದೀರ್ಘ ಸೇವೆ ಸಲ್ಲಿಸುತ್ತಾ, ವಿಶ್ವದ ಗಮನ ಸೆಳೆದ ಶ್ರೀ ಶಿವಕುಮಾರ ಸ್ವಾಮೀಜಿ ಸಿದ್ಧಗಂಗಾ ಮಠವನ್ನು ವಿದ್ಯಾದಾನ ಮತ್ತು ಜಂಗಮ ಕ್ಷೇತ್ರವಾಗಿ ಮುನ್ನಡೆಸಿದರು.