ಬೆಂಗಳೂರು: ಅಕ್ರಮದ ಗೂಡು ಎಂಬ ಆರೋಪ ಹೊತ್ತಿರುವ ಜೈಲುಗಳಲ್ಲಿ ಪಾರದರ್ಶಕತೆ ತರಲು ರಾಜ್ಯ ಕಾರಾಗೃಹ ಹಾಗೂ ಸುಧಾರಣಾ ಇಲಾಖೆ ಮುಂದಾಗಿದೆ. ಈ ಹಿನ್ನೆಲೆ ಬೆಂಗಳೂರು ನಗರ ಸಂಚಾರ ಪೊಲೀಸರ ಮಾದರಿಯಲ್ಲಿ ಜೈಲು ಸಿಬ್ಬಂದಿಗೂ ಬಾಡಿವೋರ್ನ್ ಕ್ಯಾಮೆರಾ ನೀಡಲಾಗಿದೆ‌. ಜೈಲಿನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನು ತಡೆಯಲು ಹಾಗೂ ಆಡಳಿತದಲ್ಲಿ ಸುಧಾರಣೆ ತರಲು‌ ರಾಜ್ಯದ 8‌ ಕೇಂದ್ರ ಕಾರಾಗೃಹಗಳು ಹಾಗೂ‌ 1 ಜಿಲ್ಲಾ ಕಾರಾಗೃಹದ ಸಿಬ್ಬಂದಿಗೆ ಬಾಡಿವೋರ್ನ್ ಕ್ಯಾಮೆರಾ ನೀಡಲಾಗಿದೆ.


COMMERCIAL BREAK
SCROLL TO CONTINUE READING

ಬೆಂಗಳೂರು‌ ಪರಪ್ಪನ ಅಗ್ರಹಾರ ಜೈಲಿಗೆ 20, ಮೈಸೂರು, ಶಿವಮೊಗ್ಗ, ವಿಜಯಪುರ, ಬೆಳಗಾವಿ, ಬಳ್ಳಾರಿ, ಕಲಬುರಗಿ, ಧಾರವಾಡ ಸೆಂಟ್ರಲ್ ಜೈಲುಗಳಿಗೆ ತಲಾ 10 ಕ್ಯಾಮೆರಾ‌ ಒದಗಿಸಲಾಗಿದೆ‌. ಮಂಗಳೂರು ಜಿಲ್ಲಾ ಜೈಲು 5 ಸೇರಿ ಪ್ರಾಥಮಿಕ ಹಂತವಾಗಿ ಒಟ್ಟು 90 ಬಾಡಿವೋರ್ನ್ ಕ್ಯಾಮೆರಾಗಳನ್ನ ನೀಡಲಾಗಿದೆ.‌ ಭವಿಷ್ಯದಲ್ಲಿ ಹಂತ-ಹಂತವಾಗಿ ಬಾಡಿವೋರ್ನ್ ಕ್ಯಾಮೆರಾ ನೀಡುವ ಚಿಂತನೆ ನಡೆಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಮೆರಾ ಖರೀದಿಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.


ಪರಿವರ್ತನೆ ಕೇಂದ್ರವಾಗಬೇಕಿದ್ದ ಜೈಲುಗಳು‌‌ ಪ್ರಸ್ತುತ ಅಕ್ರಮದ ತಾಣವಾಗಿ ಮಾರ್ಪಡಾಗಿವೆ. ಜೈಲಿಗೆ ಹೋಗುವ ಆರೋಪಿಗಳು ಜಾಮೀನಿನ‌ ಮೇಲೆ ಹೊರಬಂದಾಗ ಇನ್ನಷ್ಟು ಅಪರಾಧ ಎಸಗಲು ಜೈಲುಗಳು ಸ್ಫೂರ್ತಿ ನೀಡುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಜೈಲಲ್ಲಿ ಡ್ರಗ್ಸ್ ಸೇವನೆ, ಮೊಬೈಲ್ ಬಳಕೆ‌‌ ಹಾಗೂ ಅನೈತಿಕ ಚಟುವಟಿಕೆಗಳು ಮಾಮೂಲಿಯಾಗಿಬಿಟ್ಟಿವೆ.‌ ಪ್ರತಿ ಬಾರಿಯೂ ಜೈಲುಗಳ ಮೇಲೆ‌ ಪೊಲೀಸರು ದಾಳಿ ನಡೆಸಿದಾಗಲೂ ಅವ್ಯವಹಾರ ನಡೆಸುತ್ತಿರುವುದು ಬಹಿರಂಗಗೊಂಡಿವೆ. ಸೆರೆಮನೆಯಲ್ಲಿ ಅಕ್ರಮದ ವಾಸನೆ ಬಡಿದರೂ ಏನೂ ಗೊತ್ತಿಲ್ಲದವರಂತೆ ಜೈಲು ಸಿಬ್ಬಂದಿ ವರ್ತಿಸಿರುವುದು ಅನುಮಾನಗಳಿಗೆ ಪುಷ್ಠಿ ಕೊಡುವಂತಿದೆ.


ಇದನ್ನೂ ಓದಿ: ಹುಚ್ಚ ವೆಂಕಟ್ ಹೆಸರಲ್ಲಿ ಡಿಕೆಶಿ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ


ಇತ್ತೀಚೆಗಷ್ಟೇ ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ‌ ಪ್ರಕರಣ‌ದ ಆರೋಪಿಗಳು ಕುಟುಂಬಸ್ಥರೊಂದಿಗೆ ವಿಡಿಯೋ ಕಾಲ್ ಮಾಡಿ ಸಿಕ್ಕಿಬಿದ್ದಿದ್ದು ಅವ್ಯವಹಾರಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಹೀಗಾಗಿ ಜೈಲಿನಲ್ಲಿ‌ ಅಕ್ರಮ ತಡೆಯಲು ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರಲು ಬಾಡಿವೋರ್ನ್ ಕ್ಯಾಮೆರಾ ಸಹಕಾರಿಯಾಗುವ ಸಾಧ್ಯತೆ ಇದೆ.


ಸದ್ಯ 90 ಬಾಡಿವೋರ್ನ್ ಕ್ಯಾಮೆರಾಗಳನ್ನು ನೀಡಲಾಗಿದ್ದು, ಖೈದಿಗಳ ಬಗ್ಗೆ‌ ನಿಗಾವಹಿಸುವ ಜೈಲು ವಾರ್ಡನ್ ಸೇರಿ ಇನ್ನಿತರ ಸಿಬ್ಬಂದಿಗೆ ಕ್ಯಾಮೆರಾ ಧರಿಸಿ ಗಸ್ತು ತಿರುಗುವಂತೆ ಸೂಚಿಸಲಾಗಿದೆ. ಕರ್ತವ್ಯದಲ್ಲಿರುವ ಸಿಬ್ಬಂದಿ ಕ್ಯಾಮೆರಾ ಧರಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಉದ್ದೇಶಪೂರ್ವಕವಾಗಿ ಕ್ಯಾಮೆರಾ ಆಫ್ ಮಾಡುವುದು ಕಂಡುಬಂದರೆ ಅಂತಹ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಎಲ್ಲಾ ಜೈಲು ಮುಖ್ಯ ಅಧೀಕ್ಷಕರಿಗೆ ಸೂಚಿಸಿದ್ದಾರೆ. ಕ್ಯಾಮೆರಾಗಳ ನಿರ್ವಹಣೆಗಾಗಿ ಆಯಾ ಜೈಲುಗಳಲ್ಲಿ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಿ ಮಾನಿಟರಿಂಗ್ ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.


‘ಜೈ ಭೀಮ್ʼ ಮತ್ತು ‘ಜನ ಗಣ ಮನ’ ಸಿನಿಮಾಗಳು ನನ್ನ ಮನ ಕಲಕಿವೆ: ಎಚ್‌ಡಿಕೆ


ಇದರಿಂದ ಮಾಡದ ತಪ್ಪಿಗೆ ಅಧಿಕಾರಿಗಳು ಕೋರ್ಟ್- ಕೇಸ್ ಎಂದು ಅಲೆದಾಡುವ ಪರಿಸ್ಥಿತಿಯು ನಿರ್ಮಾಣವಾಗಿದೆ. ‌ಜೈಲಿನಲ್ಲಿ‌ ಸಹ ಕೈದಿಗಳ ಮೇಲೆ ಹಲ್ಲೆ, ಸಿಬ್ಬಂದಿ ಜೊತೆ ಅನುಚಿತ ವರ್ತನೆ ತೋರಿದಾಗ ಸೆರೆಯಾದ ದೃಶ್ಯವನ್ನು ಕೋರ್ಟ್ ಮುಂದೆ ತೋರಿಸಿ ಅಧಿಕಾರಿಗಳು ಸಮರ್ಥಿಸಿಕೊಳ್ಳಬಹುದಾಗಿದೆ. ಜೊತೆಗೆ ಒಂದೆ ಕಡೆ ಕೂತು ಸಿಬ್ಬಂದಿ ಕಾರ್ಯದ ಬಗ್ಗೆ ಗಮನಿಸಲು ಈ ಕ್ಯಾಮೆರಾ ನೆರವಾಗಲಿದೆ.


ಮತ್ತೊಂದೆಡೆ ಜೈಲು ಸಿಬ್ಬಂದಿ‌ ಸಹ ಹಣದಾಸೆಗಾಗಿ ಖೈದಿಗಳ ಜೊತೆ ಅಕ್ರಮದಲ್ಲಿ ಭಾಗಿಯಾಗಿರುವ ನಿರ್ದಶನಗಳಿವೆ. ಜೈಲಿನಲ್ಲಿದ್ದುಕೊಂಡೇ‌ ಖೈದಿಗಳು ಪರೋಕ್ಷವಾಗಿ ಅಪರಾಧ ಕೃತ್ಯಗಳ ಭಾಗಿಯಾಗದಂತೆ ಹಾಗೂ ಸಿಬ್ಬಂದಿಯ ಅಧಿಕಾರದ ದುರ್ಬಳಕೆ ತಡೆಯಲು ಬಾಡಿವೋರ್ನ್ ಕ್ಯಾಮೆರಾಗಳು ನೆರವಾಗಲಿದೆ. ಮುಂದಿ‌ನ ದಿನಗಳಲ್ಲಿ ಸರ್ಕಾರದಿಂದ ಅನುಮತಿ ಪಡೆದು ಹೆಚ್ಚಿನ ಸಂಖ್ಯೆಯ‌ ಸಿಬ್ಬಂದಿಗೂ ಕ್ಯಾಮೆರಾ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.


ಇನ್ನೂ ಜೈಲು ಸಿಬ್ಬಂದಿ ತಪಾಸಣೆ ಬಿಗಿಗೊಳಿಸಿದರೂ ಖೈದಿಗಳ ಮೊಬೈಲ್‍ಅನ್ನು ಜೈಲಿನೊಳಗೆ ತರಿಸಿಕೊಂಡು ಪರೋಕ್ಷವಾಗಿ ಹೊರಗಿನ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಈಗಾಗಲೇ ಜಾಮರ್ ಅಳವಡಿಸಿದರೂ ಸಹ ಪ್ರಯೋಜನವಾದಂತಿಲ್ಲ. ಈ ಹಿಂದೆ ಅಳವಡಿಸಿದ ಜಾಮರ್‍ಗಳು 2G ಜಾಮರ್‍ಗಳಾಗಿದ್ದು, ಪ್ರಸ್ತುತ 4G ನೆಟ್ ವರ್ಕ್ ಸಹಕರಿಸುವ ಮೊಬೈಲ್ ಗಳು ಬಂದಿರುವುದರಿಂದ‌ ಜೈಲಿನಲ್ಲಿ ನೆಟ್ ವರ್ಕ್ ಸಿಗುವಂತಾಗಿದೆ. ಹೀಗಾಗಿ 2G ಬದಲಿಗೆ 5G ಮಾದರಿ ಜಾಮರ್ ಅಳವಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.‌


ರಾಜ್ಯದ ಎಲ್ಲಾ ಜೈಲುಗಳಲ್ಲಿ 201 ಜಾಮರ್ ಗಳನ್ನು ಅಳವಡಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ 5G ಜಾಮರ್ ಗಳನ್ನು ಅಳವಡಿಸಲು ಅನುಮತಿ ದೊರೆತಿದ್ದು, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನ (ಬಿಇಎಲ್) ಸಂಬಂಧಪಟ್ಟ ಅಧಿಕಾರಿಗಳು ಸರ್ವೇ ಪೂರ್ಣಗೊಳಿಸಿದ್ದಾರೆ. ಜೈಲಿನ ಸುತ್ತಮುತ್ತ ನಿವಾಸಿಗಳಿಗೆ ತೊಂದರೆಯಾಗದಂತೆ ಅಧ್ಯಯನ ನಡೆಸಿದ್ದಾರೆ. ಇನ್ನೊಂದು ವರ್ಷದಲ್ಲಿ ಸೆಂಟ್ರಲ್ ಜೈಲಿನಲ್ಲಿ 5G ಮಾದರಿಯ 5 ಜಾಮರ್ ಗಳನ್ನು ಹಾಕುತ್ತಾರೆಂಬ ಮಾಹಿತಿ‌ ದೊರೆತಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.