ನವದೆಹಲಿ : ಇತ್ತೀಚಿಗೆ ನಡೆದ ಗುಜರಾತ್ ವಿಧಾಸಭಾ ಚುನಾವಣಾ ಪ್ರಚಾರದ ನಂತರ ಮುಂಬರಲಿರುವ ಕರ್ನಾಟಕ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಣಾಳಿಕೆ ರಚಿಸುವಂತೆ ಹಾಗೂ ಪ್ರಚಾರ ಕಾರ್ಯಕ್ರಮಗಳನ್ನು ರೂಪಿಸುವಂತೆ ಪಕ್ಷದ ನಾಯಕರಿಗೆ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈಗಾಗಲೇ ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಚುನಾವಣಾ ತಯಾರಿ ನಡೆದಿದ್ದು,  ಚುನಾವಣೆ ಮುಂಚಿತವಾಗಿ ಪ್ರಣಾಳಿಕೆ ಹೊರತರಲು ಸಿದ್ಧತೆ ನಡೆಸಿದೇ ಎಂದು ಕಾಂಗ್ರೇಸ್ ಹಿರಿಯ ನಾಯಕರು ತಿಳಿಸಿದ್ದಾರೆ. 


ಕರ್ನಾಟಕ ಜನತೆಯ ನಿರೀಕ್ಷೆಗಳನ್ನು ಪ್ರತಿಬಿಂಭಿಸುವಂತಹ ಪ್ರಣಾಳಿಕೆಯನ್ನು ಹೊರತರಲು ಪಕ್ಷದ ನಾಯಕ ರಾಹುಲ್ ಗಾಂಧಿ ತಿಳಿಸಿದ್ದು, ಎಲ್ಲಾ ವರ್ಗದವರಿಂದ ಕಾಂಗ್ರೆಸ್ ಪ್ರತಿಕ್ರಿಯೆ ಪಡೆಯಲಿದೆ ಎಂದು ಎಐಸಿಸಿ ಕರ್ನಾಟಕ ಕಾರ್ಯದರ್ಶಿ ಮಧು ಗೊಡ್ ಯಕ್ಷಿ ಹೇಳಿದ್ದಾರೆ.


ಇದೆ ರೀತಿ ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ವರ್ಷ ಟೆಲಿಕಾಂ ಉದ್ಯಮಿ ಸ್ಯಾಮ್ ಪಿತ್ರೋಡ ಗುಜರಾತ್ನ ಐದು ನಗರಗಳಾದ ವಡೋದರಾ, ಅಹಮದಾಬಾದ್, ರಾಜ್ಕೋಟ್, ಜಾಮ್ನಗರ್ ಮತ್ತು ಸೂರತ್ ನಿವಾಸಿಗಳೊಂದಿಗೆ ಸಂವಾದ ನಡೆಸಿದ್ದರು. ನಂತರ ತಯಾರಿಸಲಾದ ಚುನಾವಣಾ ಪ್ರಣಾಳಿಕೆಯು ಶಿಕ್ಷಣ, ಆರೋಗ್ಯ, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಉದ್ಯೋಗಾವಕಾಶ ಮತ್ತು ಪರಿಸರ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿತ್ತು. 


"ಕಚೇರಿಯಲ್ಲಿ ಪಕ್ಷದ ನಾಯಕರು ಕೂತು ಪ್ರಣಾಳಿಕೆ ಸಿದ್ಧಪಡಿಸುವುದಕ್ಕಿಂತ, ರಾಜ್ಯಾದ್ಯಂತ ಪ್ರವಾಸ ಮಾಡಿ ಜನರ ಅಗತ್ಯತೆಗಳನ್ನು ಮನಗಂಡು ನಂತರ ಪ್ರಣಾಳಿಕೆ ತಯಾರಿಸುವ ಅಭ್ಯಾಸ ನಿಜಕ್ಕೂ ಉತ್ತಮವಾದದ್ದು ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ. 


ಅಂತೆಯೇ ಕರ್ನಾಟಕದಲ್ಲಿ ಪಕ್ಷವು ಸಾಮಾಜಿಕ-ಆರ್ಥಿಕ ಅಂಶಗಳಿಗೆ ಆದ್ಯತೆ ನೀಡುವ ಮೂಲಕ ಅಭಿವೃದ್ಧಿಗಾಗಿ ಚಿಂತನೆ ನಡೆಸಿದೆ. ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಇದುವರೆಗೂ ಉತ್ತಮ ಆಡಳಿತ ನಡೆಸಿದ್ದು ಜನಪರ ಯೋಜನೆಗಳಾದ ಅನ್ನಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ, ಇಂದಿರಾ ವಸ್ತ್ರ ಭಾಗ್ಯ, ಇಂದಿರಾ ಕ್ಯಾಂಟೀನ್ ಮೊದಲಾದವುಗಳನ್ನು ಕಾರ್ಯಗತಗೊಳಿಸಿದೆ ಎಂದು ಅವರು ಹೇಳಿದರು.


ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಸದ್ಯದಲ್ಲೇ ಚುನಾವಣೆ ನಡೆಯಲಿದ್ದು, ದಿನಾಂಕ ಇನ್ನೂ ನಿಗದಿಯಾಗಬೇಕಿದೆ. ಆದರೂ ಈಗಾಗಲೇ ಚುನಾವಣಾ ಪ್ರಚಾರ ರಾಜ್ಯಾದ್ಯಂತ ಭರದಿಂದ ಸಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ ದಾಳಿ ಪ್ರತಿದಾಳಿ ನಡೆಸಿವೆ.


ಒಟ್ಟಾರೆ ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ ಹೆಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷು ಮೂರನೇ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದ್ದು, ತ್ರಿಕೋನ ಸ್ಪರ್ಧೆ ಏರ್ಪಡಲಿದೆ.