ʼಧರ್ಮʼರಾಜಕಾರಣದ ಲೋಪ : ಸುಪ್ರೀಂ ಕೋರ್ಟ್ ಆಕ್ಷೇಪ
ಹಿಂದೂಗಳ ಶೃದ್ದಾ ಕೇಂದ್ರವನ್ನು ಹಾಳು ಮಾಡಲು ಕ್ರಿಶ್ಚಿಯನ್ ಮಿಷನರಿಗಳು ಪ್ರಯತ್ನಿಸುತ್ತಿವೆ. ಅದಕ್ಕೆ ಆಂದ್ರ ಪ್ರದೇಶದ ಹಿಂದಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಬೆಂಬಲವಿದೆ. ಹೀಗಾಗಿ ಹಿಂದೂಧರ್ಮದ್ವೇಷವೇ ಲಾಡು ಮೂಲಕ ದೇವಸ್ಥಾನದ ಪಾವಿತ್ರ್ಯತೆ ಹರಣಕ್ಕೆ ಕಾರಣ ಎನ್ನುವ ಹೇಳಿಕೆಯನ್ನು ಕೊಡುತ್ತಾ ಇಡೀ ಪ್ರಕರಣವನ್ನು ಅನ್ಯಧರ್ಮ ದ್ವೇಷದತ್ತ ತಿರುಗಿಸುವ ಪ್ರಯತ್ನವೂ ನಡೆಯಿತು.
ಬೆಂಗಳೂರು : "ದೇವರನ್ನು ರಾಜಕೀಯದಿಂದ ಹೊರಗಿಡಬೇಕು" ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಧರ್ಮಾಂಧತೆಯೇ ಪ್ರಭುತ್ವದ ಅಸ್ತಿತ್ವದ ಆಧಾರಸ್ಥಂಭವಾದ ಈ ದೇಶದಲ್ಲಿ ಧರ್ಮವನ್ನು ಬಿಟ್ಟು ರಾಜಕೀಯ ಮಾಡಬೇಕೆಂಬುದು ಕಷ್ಟಸಾಧ್ಯ.
ನಮ್ಮದು ಚುನಾವಣಾ ಕೇಂದ್ರಿತ ರಾಜಕೀಯ ವ್ಯವಸ್ಥೆ. ಹೇಗಾದರೂ ಮಾಡಿ ಮತದಾರರ ಒಲವು ಗಳಿಸಿ ಅಧಿಕಾರ ಹಿಡಿಯುವುದೇ ರಾಜಕೀಯ ಪಕ್ಷ ಹಾಗೂ ವ್ಯಕ್ತಿಗಳ ಗುರಿ. ಅದಕ್ಕಿರುವ ಸುಲಭ ದಾರಿ ಜನರ ಭಾವನೆಗಳನ್ನು ಪ್ರಚೋದಿಸುವುದು. ಅದಕ್ಕೆ ಜನರ ನಂಬಿಕೆ ಆಚಾರ ವಿಚಾರಗಳ ಸುತ್ತ ಧಾರ್ಮಿಕ ಭಾವಗಳ ಹುತ್ತ ಕಟ್ಟಿ ಮತಾಂಧತೆಯ ಪುಂಗಿ ಊದುವುದು. ಧರ್ಮ ಅಪಾಯದಲ್ಲಿದೆ ಎಂದು ಹುಯಿಲೆಬ್ಬಿಸಿ ಜನರ ಭಾನನೆಗಳು ಬುಸುಗುಟ್ಟುವ ಹಾಗೆ ಮಾಡುವುದು. ಆ ಮೂಲಕ ಶತ್ರುಪಕ್ಷ, ವಿರೋಧಿ ಪಡೆಗಳ ಮೇಲೆ ಜನರನ್ನು ಎತ್ತಿಕಟ್ಟಿ, ಕೋಮು ಸೌಹಾರ್ಧತೆಯನ್ನು ಹಾಳುಮಾಡಿ, ಹೊತ್ತಿ ಉರಿಯುವ ಧರ್ಮಾಂಧತೆಯ ಬೆಂಕಿಯಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದು.
ದೇವರು ಧರ್ಮಗಳನ್ನು ಬಿಟ್ಟರೆ ಹಿಂದುತ್ವವಾದಿಗಳ ರಾಜಕೀಯಕ್ಕೆ ಅಸ್ತಿತ್ವವಿಲ್ಲ. ಮೌಲ್ಯಾಧಾರಿತ ರಾಜಕಾರಣ, ಜನಪರ ಅಭಿವೃದ್ಧಿ ಆಡಳಿತ ಎನ್ನುವುದೆಲ್ಲಾ ಈಗ ಬರೀ ತೋರಿಕೆಯ ಮಾತುಗಳು. ಆಳುವ ವರ್ಗದವರ ಅಸಲಿ ಆಟ ಏನೆಂದರೆ ಅದು ಧರ್ಮರಾಜಕಾರಣ.
ಉದಾಹರಣೆಗೆ ತಿರುಪತಿ ದೇವಸ್ಥಾನದ ಲಡ್ಡು ವೇಳೆ ವಿವಾದ. ದಕ್ಷಿಣ ಭಾರತದ ಈ ಪ್ರಸಿದ್ದ ತಿರುಪತಿ ದೇವಸ್ಥಾನವು ಕೊಟ್ಯಾಂತರ ಭಕ್ತರ ಶೃದ್ದಾ ಕೇಂದ್ರವಾಗಿದೆ. ಆ ದೇವಸ್ಥಾನದ ಪ್ರಸಾದವಾದ ಲಡ್ಡು ಪ್ರಮುಖ ಆಕರ್ಷಣೆಯಾಗಿದೆ. ಆದರೆ ಯಾವಾಗ ಈ ಲಡ್ಡು ಪ್ರಸಾದದ ಸುತ್ತಲು ವ್ಯಾಪಾರಿ ಆಸಕ್ತಿ, ರಾಜಕೀಯ ಹಿತಾಸಕ್ತಿ ಹಾಗೂ ಆಸ್ತಿಕರ ಭಕ್ತಿಗಳು ಸೇರಿದವೋ ಆಗ ಅಲ್ಲಿ ವಿವಾದ ವಿಕೋಪಕ್ಕೆ ಹೋಯಿತು.
ಯಾವಾಗ ಹಾಲಿ ಮುಖ್ಯಮಂತ್ರಿಯಾದ ಚಂದ್ರಬಾಬು ನಾಯ್ಡುರವರು 'ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿ ಅಪವಿತ್ರಗೊಳಿಸಲಾಗಿದೆ' ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದರೋ ಆ ಕ್ಷಣದಿಂದ ದೇಶದ ಸಕಲ ಮಾಧ್ಯಮಗಳ ಚಿತ್ತ ಲಡ್ಡು ಪ್ರಸಾದದ ಸುತ್ತ ತಿರುಗಿತು. ಹಸು ಹಂದಿ ಮೀನಿನ ಕೊಬ್ಬನ್ನು ಬಳಸಿದ ಲಡ್ಡು ತಿನ್ನಿಸಿ ಅಸಂಖ್ಯಾತ ಭಕ್ತರ ಆಕ್ರೋಶಕ್ಕೆ ಕಾರಣವಾಯ್ತು. ಕಳಪೆ ಗುಣಮಟ್ಟದ ತುಪ್ಪವನ್ನು ಬಳಸಿದ್ದಕ್ಕೆ, ಆ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಸೇರಿಸಿದ್ದಕ್ಕೆ, ಅಂತಹ ಕಲಬೆರಕೆ ತುಪ್ಪವನ್ನು ಲಡ್ಡು ತಯಾರಿಕೆಯಲ್ಲಿ ಬಳಸಿದ್ದಕ್ಕೆ ದೇವಸ್ಥಾನದ ಪಾವಿತ್ರ್ಯತೆ ಹಾಳಾಯಿತು ಎಂದು ಪ್ರಚಾರ ಮಾಡಲಾಯ್ತು. ಆದ ಅಪಚಾರಕ್ಕೆ ಬದಲಾಗಿ ಶುದ್ದೀಕರಣ ಪ್ರಹಸನಗಳನ್ನೂ ಮಾಡಲಾಯ್ತು. ಆಂದ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ ಶುದ್ದೀಕರಣಕ್ಕಾಗಿ ಜಪ ತಪ ವೃತಗಳನ್ನೂ ಮಾಡಿ ತಮ್ಮ ಹಿಂದುತ್ವವನ್ನು ವೈಭವೀಕರಿಸುವ ಧರ್ಮರಾಜಕೀಯ ನಾಟಕವನ್ನೂ ಪ್ರದರ್ಶಿಸಲಾಯ್ತು.
ಹಿಂದೂಗಳ ಶೃದ್ದಾ ಕೇಂದ್ರವನ್ನು ಹಾಳು ಮಾಡಲು ಕ್ರಿಶ್ಚಿಯನ್ ಮಿಷನರಿಗಳು ಪ್ರಯತ್ನಿಸುತ್ತಿವೆ. ಅದಕ್ಕೆ ಆಂದ್ರ ಪ್ರದೇಶದ ಹಿಂದಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಬೆಂಬಲವಿದೆ. ಹೀಗಾಗಿ ಹಿಂದೂಧರ್ಮದ್ವೇಷವೇ ಲಾಡು ಮೂಲಕ ದೇವಸ್ಥಾನದ ಪಾವಿತ್ರ್ಯತೆ ಹರಣಕ್ಕೆ ಕಾರಣ ಎನ್ನುವ ಹೇಳಿಕೆಯನ್ನು ಕೊಡುತ್ತಾ ಇಡೀ ಪ್ರಕರಣವನ್ನು ಅನ್ಯಧರ್ಮ ದ್ವೇಷದತ್ತ ತಿರುಗಿಸುವ ಪ್ರಯತ್ನವೂ ನಡೆಯಿತು. ಆಂದ್ರದ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವೆ ಇರುವ ದ್ವೇಷರಾಜಕಾರಣಕ್ಕೆ ತಿರುಪತಿ ದೇವಸ್ಥಾನದ ಲಾಡು ಪ್ರಕರಣವನ್ನು ಬಳಸಲಾಯ್ತು.
ತಿರುಪತಿಯ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿದೆ ಎಂದು ಆಂದ್ರದ ಸಿಎಂ ಚಂದ್ರಬಾಬು ನಾಯ್ಡುರವರಿಗೆ ಗೊತ್ತಾಗಿದ್ದರೆ ಅದನ್ನು ಬಹಿರಂಗಪಡಿಸುವ ಮುನ್ನ ಆಂತರಿಕ ತನಿಖೆಗೆ ಆದೇಶಿಸಬೇಕಿತ್ತು. ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಬೇಕಿತ್ತು. ಬಹಳ ಸೂಕ್ಷ್ಮವಾದ ಭಾವನಾತ್ಮಕ ವಿಚಾರವನ್ನು ಸಾಕ್ಷಾಧಾರಗಳಿಲ್ಲದೇ ಬಯಲುಗೊಳಿಸಿದರೆ ಕೋಟ್ಯಾಂತರ ಭಕ್ತಾದಿಗಳು ಆಘಾತಕ್ಕೊಳಗಾಗುತ್ತಾರೆ ಎನ್ನುವ ಕನಿಷ್ಟ ಕಾಳಜಿ ಮುಖ್ಯಮಂತ್ರಿಯಾದವರಿಗೆ ಇರಬೇಕಿತ್ತು. ಯಾಕೆಂದರೆ ತನ್ನ ರಾಜ್ಯದ ಪ್ರಜೆಗಳ ಹಿತವನ್ನು ಕಾಪಾಡುವುದು ಮುಖ್ಯಮಂತ್ರಿಯಾದವರ ಕರ್ತವ್ಯವೂ ಆಗಿತ್ತು. ಅಕಸ್ಮಾತ್ ಕಳಪೆ ಗುಣಮಟ್ಟದ ತುಪ್ಪ ಬಳಕೆಯಾಗಿದ್ದರೆ ಟೆಂಡರ್ ಕ್ಯಾನ್ಸಲ್ ಮಾಡಿಸಿ ಉತ್ತಮ ಗುಣಮಟ್ಟದ ತುಪ್ಪ ಸರಬರಾಜಿಕೆ ವ್ಯವಸ್ಥೆ ಮಾಡಬೇಕಿತ್ತು. ಆದರೆ ಮುಂದಾಗಬಹುದಾದ ದುಷ್ಪರಿಣಾಮಗಳ ಅರಿವಿಲ್ಲದೇ ಮುಖ್ಯಮಂತ್ರಿಯಾದವರೇ ಮಾಧ್ಯಮಗಳ ಮುಂದೆ ತಿರುಪತಿ ಲಡ್ಡುವಿನಲ್ಲಿ ಹಸು ಹಂದಿ ಮಾಂಸದ ಕೊಬ್ಬು ಬಳಸಲಾಗಿದೆ ಎಂದು ಹೇಳಿ ಜನರ ಆತಂಕಕ್ಕೆ ಕಾರಣವಾಗಿದ್ದು ಖಂಡಿತಾ ಅಕ್ಷಮ್ಯ. ತಿರುಪತಿ ದೇವರನ್ನು, ತಿಮ್ಮಪ್ಪನ ಪ್ರಸಾದವನ್ನು ನೆಪವಾಗಿಟ್ಟುಕೊಂಡು ರಾಜಕೀಯ ಮಾಡಿದ್ದೇ ಮಹಾಪರಾದ.
ಅದಕ್ಕೇ ಸುಪ್ರೀಂ ಕೋರ್ಟ್ ಆಂದ್ರದ ಸಿಎಂ ಚಂದ್ರಬಾಬು ನಾಯ್ಡುಗೆ ಚಾಟಿ ಬೀಸಿ ಹೇಳಿದ್ದು "ದೇವರನ್ನು ರಾಜಕೀಯದಿಂದ ಹೊರಗಿಡಿ" ಎಂದು. 'ಧರ್ಮದ ಜೊತೆ ರಾಜಕೀಯವನ್ನು ಬೆರೆಸಲು ಅನುಮತಿಸುವುದಿಲ್ಲಾ' ಎಂದು. ತಿರುಪತಿ ಲಾಡುವಿನಲ್ಲಿ ಪ್ರಾಣಿಜನ್ಯ ಕೊಬ್ಬು ಬಳಕೆಯಾಗಿದ್ದರ ಕುರಿತು ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ಪೀಠವು ಚಂದ್ರಬಾಬು ನಾಯ್ಡುರವರ ಆರೋಪದ ಸಮರ್ಥನೆಗೆ ಪುರಾವೆಗಳ ಕೊರತೆ ಇರುವುದನ್ನು ಗಮನಿಸಿಯೇ ವಿವಾದಾತ್ಮಕ ವಿಷಯದ ಕುರಿತು ಮುಖ್ಯಮಂತ್ರಿ ನಾಯ್ಡು ಸಾರ್ವಜನಿಕ ಹೇಳಿಕೆ ಕೊಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿತು.
"ನೀವು ಸಾಂವಿಧಾನಿಕ ಮುಖ್ಯಮಂತ್ರಿ ಹುದ್ದೆಯನ್ನು ಹೊಂದಿರುವಾಗ ದೇವರನ್ನು ರಾಜಕೀಯದಿಂದ ದೂರವಿಡಬೇಕೆಂದು ನಾವು ನಿರೀಕ್ಷಿಸುತ್ತೇವೆ. ನೀವು ಈಗಾಗಲೇ ತನಿಖೆಗೆ ಆದೇಶಿಸಿದ್ದರೆ ಮಾಧ್ಯಮಗಳಿಗೆ ಹೋಗಿ ಹೇಳಿಕೆ ನೀಡುವ ಅಗತ್ಯವೇನಿತ್ತು? ಜುಲೈನಲ್ಲಿ ಲ್ಯಾಬ್ ವರದಿ ಬಂದಿದೆ. ನಿಮ್ಮ ಹೇಳಿಕೆ ಸೆಪ್ಟಂಬರ್ ನಲ್ಲಿ ಬಂದಿದೆ ಹಾಗೂ ಲ್ಯಾಬ್ ವರದಿ ಸ್ಪಷ್ಟವಾಗಿಲ್ಲ" ಎಂದು ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ನ್ಯಾ.ಕೆ.ವಿ.ವಿಶ್ವನಾಥನ್ ಅವರ ಪೀಠವು ಸೆ.30 ರಂದು ಮಹತ್ತರವಾದ ಹೇಳಿಕೆ ನೀಡಿತು.
ನ್ಯಾಯಾಲಯದ ಈ ಹೇಳಿಕೆ ಧರ್ಮಾಧಾರಿತ ರಾಜಕೀಯ ಮಾಡುವ ಎಲ್ಲಾ ವ್ಯಕ್ತಿಗಳು ಹಾಗೂ ಪಕ್ಷಗಳಿಗೂ ಅನ್ವಯಿಸುವಂತಿದೆ. ದೇವರು ಹಾಗೂ ಧರ್ಮವನ್ನು ರಾಜಕೀಯದಿಂದ ದೂರವಿಡಬೇಕೆಂಬುದು ಈ ದೇಶದ ಪ್ರಜ್ಞಾವಂತರ ಬಯಕೆಯಾಗಿದೆ. ಆದರೆ.. ಧರ್ಮರಾಜಕಾರಣವನ್ನೇ ಅಧಿಕಾರದ ಪಟ್ಟಕ್ಕೆ ಮೆಟ್ಟಲು ಮಾಡಿಕೊಂಡ ಪಾಲಿಟಿಕಲ್ ಪಾರ್ಟಿಗಳಿಗೆ ಹಾಗೂ ಆ ಪಕ್ಷಗಳ ಹಿಂದಿರುವ ಹಿಂದುತ್ವವಾದಿ ಶಕ್ತಿಗಳಿಗೆ ಸರ್ವೋಚ್ಚ ನ್ಯಾಯಾಲಯದ ಕಳಕಳಿ ಅರ್ಥವಾಗುವುದಿಲ್ಲ. ಹಾಗೂ ಧರ್ಮರಕ್ಷಣೆಯ ಹೆಸರಲ್ಲಿ ಮತೀಯ ಮಾಡುವುದನ್ನೂ ಬಿಡುವುದಿಲ್ಲ. ಸ್ವತಃ ತಿರುಪತಿ ತಿಮ್ಮಪ್ಪನೇ ಪ್ರತ್ಯಕ್ಷನಾಗಿ ದೇವರ ಹೆಸರಲ್ಲಿ ಧರ್ಮರಾಜಕಾರಣ ಮಾಡಕೂಡದೂ ಎಂದರೂ ಕೇಳುವ ಪರಿಸ್ಥಿತಿಯಲ್ಲಿ ಹಿಂದುತ್ವವಾದಿಗಳಿಲ್ಲ.
ಶಶಿಕಾಂತ ಯಡಹಳ್ಳಿ
ಅಂಕಣಕಾರರು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.