ಕೋಲಾರ: ಕೋಲಾರ ಜಿಲ್ಲೆಯ ಕೆಜಿಎಫ್‌ ಮೀಸಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಭಕ್ತವತ್ಸಲಂ (70) ಹೃದಯಾಘಾತದಿಂದ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಕೆಜಿಎಫ್‌ನ ರಾಬರ್ಟ್‌ಸನ್‌ ಪೇಟೆಯಲ್ಲಿ ವಾಸವಿದ್ದ ಅವರಿಗೆ ಮನೆಯಲ್ಲಿ ರಾತ್ರಿ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿತ್ತು. ನಂತರ ಕುಟುಂಬ ಸದಸ್ಯರು ಅವರನ್ನು ಜಿಲ್ಲಾ ಕೇಂದ್ರದ ಆರ್‌.ಎಲ್‌. ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ರಾತ್ರಿ 11 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


ಕೆಜಿಎಫ್‌ ನಗರಸಭಾ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಭಕ್ತವತ್ಸಲಂ 1983ರಲ್ಲಿ ಎಐಎಡಿಎಂಕೆ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು. 1985ರ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಪುನಃ 1989ರಲ್ಲಿ ಎಐಎಡಿಎಂಕೆ ಪಕ್ಷದಿಂದ 2ನೇ ಬಾರಿಗೆ ಮತ್ತು 1999ರಲ್ಲಿ 3ನೇ ಬಾರಿಗೆ ಶಾಸಕರಾದರು. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಎಐಎಡಿಎಂಕೆ ತೊರೆದು ಜೆಡಿಎಸ್‌ ಸೇರಿದ ಅವರು 2008, 2013 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದರು. 


ಎಂ.ಭಕ್ತವತ್ಸಲಂ 5 ಬಾರಿ ನಗರಸಭೆ ಅಧ್ಯಕ್ಷರಾಗಿ ಮತ್ತು ಒಂದು ಬಾರಿ ಕೆಜಿಎಫ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.