ಗ್ರಾಮೀಣ ಮೂಲ ಸೌಲಭ್ಯಕ್ಕೆ ಒತ್ತು ನೀಡುವಂತೆ ಸೂಚಿಸಿದ ಸಚಿವ ಕೃಷ್ಣ ಬೈರೇಗೌಡ
ನೋವಿನಲ್ಲಿ ಇರುವಂತಹ ಜನರಿಗೆ ಸ್ಪಂದಿಸುವುದು ಸರ್ಕಾರದ ಪ್ರಥಮ ಆದ್ಯತೆ- ಸಚಿವ ಕೃಷ್ಣ ಬೈರೇಗೌಡ
ಮಡಿಕೇರಿ: ಜಿಲ್ಲೆಯಾದ್ಯಂತ ಮಳೆ ಹಾನಿಯಿಂದ ತೀವ್ರ ಹಾನಿಗೊಳಗಾದ ಪ್ರದೇಶದಲ್ಲಿ ಗ್ರಾಮೀಣ ರಸ್ತೆ, ಕುಡಿಯುವ ನೀರು ಮತ್ತು ಉದ್ಯೋಗ ಈ ಮೂರು ಕಾರ್ಯಗಳನ್ನು ಆದ್ಯತೆ ಮೇರೆಗೆ ಶೀಘ್ರದಲ್ಲಿ ಕಾರ್ಯ ನಿರ್ವಹಿಸುವಂತೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ ಕೃಷ್ಣ ಬೈರೇಗೌಡ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಮಳೆ ಹಾನಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾ. ಪಂ. ವ್ಯಾಪ್ತಿಯಲ್ಲಿ ತೀವ್ರ ಹಾನಿಗೊಳಗಾದ ರಸ್ತೆಗಳನ್ನು ಆದ್ಯತೆ ಮೇರೆಗೆ ಸರಿಪಡಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯಾದ್ಯಂತ ಮಳೆಯಿಂದ ಹಾನಿಗೊಳಗಾದ ಗ್ರಾ.ಪಂ.ವ್ಯಾಪ್ತಿಯ ವಿವರಗಳನ್ನು ಹಾಗೂ ಹಾನಿ ಪ್ರದೇಶದಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ ಕೃಷ್ಣ ಬೈರೇಗೌಡ ಅವರು ಮಾಹಿತಿ ಪಡೆದರು. ಅಲ್ಲದೆ, ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ದಿನಂಪ್ರತಿ ವಿದ್ಯಾಭ್ಯಾಸಕ್ಕೆ ಬರುವಂತಹ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ವಸತಿ ವ್ಯವಸ್ಥೆಯನ್ನು ಆಯಾಯ ನಗರ ವ್ಯಾಪ್ತಿಯಲ್ಲಿ ಕಲ್ಪಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದುವರೆಗೂ ಸಂಪರ್ಕ ಸಾಧಿಸಲು ಸಾಧ್ಯವಾಗದಂತಹ ಗ್ರಾ.ಪಂ.ವ್ಯಾಪ್ತಿಗಳಲ್ಲಿ ಡ್ರೋಣ್ ಕ್ಯಾಮರಾ ಬಳಸಿ ಹಾನಿಗೊಳಗಾದ ಮನೆ, ಆಸ್ತಿಗಳ ನಷ್ಟದ ವಿವರಗಳನ್ನು ಕಲೆ ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಕಿರಿದಾದ ಜಾಗದಲ್ಲಿ ಆಧುನಿಕ ಚಿಕ್ಕ ಹಿಟಾಚಿಗಳನ್ನು ಬಳಸಿ ಸುಸ್ಥಿತಿಯಲ್ಲಿರುವ ರಸ್ತೆಗಳ ಮೇಲೆ ಬರೆ ಕುಸಿತದಿಂದ ಉಂಟಾದ ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತರಾಗುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದರು.
ಪ್ರತೀ ಗ್ರಾಮ ಪಂಚಾಯಿತಿಗೆ ಒಬ್ಬರು ಅಭಿಯಂತರರನ್ನು ನಿಯೋಜಿಸಲು ಜಿಲ್ಲಾ ಪಂಚಾಯಿತ್ ಸಿಇಒ ಅವರಿಗೆ ಸೂಚನೆ ನೀಡುತ್ತಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಭಿಯಂತರರುಗಳು ಸಮನ್ವಯ ಸಾಧಿಸಿಕೊಂಡು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.
ತೀವ್ರ ಮಳೆಹಾನಿಯಿಂದ ಜಿಲ್ಲೆಯ ಜನರು ಅಪಾರ ತೊಂದರೆಗೊಳಗಾಗಿದ್ದು, ಸರ್ಕಾರವು ಅಗತ್ಯ ನೆರವು ನೀಡಲಿದ್ದು, ನೋವಿನಲ್ಲಿ ಇರುವಂತಹ ಜನರಿಗೆ ಸ್ಪಂದಿಸುವುದು ಸರ್ಕಾರದ ಪ್ರಥಮ ಆದ್ಯತೆ. ಸರ್ಕಾರವು ಜಿಲ್ಲೆಯ ಜನರೊಂದಿಗೆ ಇರುವುದಾಗಿ ಅವರು ತಿಳಿಸಿದರು.
ಅಧಿಕಾರಿಗಳು ತಮ್ಮ ಮನೆಯ ಕೆಲಸದಂತೆ ಪ್ರೇರಣೆಯಿಂದ ಪರಿಹಾರ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡು ಜನರಿಗೆ ದೈರ್ಯ ತುಂಬುವುದರೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸಿ ಶೀಘ್ರದಲ್ಲಿ ಜಿಲ್ಲೆಯು ಮೊದಲಿನಂತಾಗುವಂತೆ ಕಾರ್ಯ ಪ್ರವೃತರಾಗುವಂತೆ ಕೃಷ್ಣಬೈರೇಗೌಡ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಕೆ.ಜಿ. ಬೋಪಯ್ಯ ಸಹ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಜಿ..ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಇತರರು ಉಪಸ್ಥಿತರಿದ್ದರು.