ಮೈಸೂರು: ಆಂದೋಲನ ಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಏಷ್ಯಾ ಖಂಡದಲ್ಲೇ ಅತಿ ವೇಗವಾಗಿ ಬೆಳೆದ ಅಪರೂಪದ ಪತ್ರಿಕೆ ಎಂಬ ಕೀರ್ತಿ-ಗೌರವಗಳನ್ನು  ತಮ್ಮ ಪತ್ರಿಕೆಗೆ ತಂದು ಕೊಟ್ಟವರು ಎಂದು ಸ್ಮರಿಸಿದ್ದಾರೆ.                



COMMERCIAL BREAK
SCROLL TO CONTINUE READING


ಮೂಲತಃ ಧಾರವಾಡ ಜಿಲ್ಲೆಯವರಾದ ರಾಜಶೇಖರ ಕೋಟಿ ಅವರನ್ನು ಮೈಸೂರಿಗರು ನಮ್ಮವರು ಎನ್ನುವಷ್ಟರ ಮಟ್ಟಿಗೆ ಮೈಸೂರಿನವರಾಗಿದ್ದಾರೆ ! ರಾಜಶೇಖರ ಕೋಟಿ ಅವರದು ಬಹು ಮುಖ ಪ್ರತಿಭೆ. ಸಣ್ಣ ಪತ್ರಿಕೆಗಳ ತವರೆನಿಸಿದ್ದ ಮೈಸೂರಿನಲ್ಲಿ ಆಂದೋಲನ ಪತ್ರಿಕೆಯನ್ನು ಪ್ರಾರಂಭಿಸಿ ಅಚ್ಚುಮೊಳೆ ಜೋಡಿಸುವುದರಿಂದ ಸಂಪಾದಕರವರೆಗೆ ಎಲ್ಲಾ ಕಾರ್ಯವನ್ನೂ ನಿರ್ವಹಿಸಿ ಬೃಹದಾಕಾರವಾಗಿ ಬೆಳೆದವರು. 


ಸದಾ ಸುದ್ದಿಗಾಗಿ ಬೇಟೆ ನಡೆಸಿ ತಮ್ಮ ವಿಶೇಷ ವರದಿಗಾರಿಕೆಯ ಶೈಲಿಯಿಂದ ಕನ್ನಡ ಪತ್ರಿಕಾ ರಂಗದಲ್ಲಿ   ಸಂಚಲನ ಮೂಡಿಸಿದವರು. ಪತ್ರಿಕಾ ದರ ಸಮರದ ಸಂದರ್ಭದಲ್ಲಿ ರಾಜ್ಯ ಮಟ್ಟದ ಪತ್ರಿಕೆಗಳ  ಜೊತೆಗೇ ಸ್ಪರ್ಧೆಗೆ ಇಳಿದು ತಮ್ಮ ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಕಾಯ್ದುಕೊಂಡು ಹೊಸ ಆಂದೋಲನವನ್ನೇ ಸೃಷ್ಠಿಸಿದವರು ಎಂದು ಸಿಎಂ ಕೋಟಿ ಅವರನ್ನು ಹೊಗಳಿದ್ದಾರೆ. 


ಮೈಸೂರಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಬಸ್ ತಂಗುದಾಣಗಳನ್ನು ನಿರ್ಮಿಸಿ ಅವರು ತಮ್ಮ ಸಾಮುದಾಯಿಕ ಜವಾಬ್ದಾರಿ ಮೆರೆದಿದ್ದಾರೆ. ಅಪಘಾತಗಳು ಸಂಭವಿಸಿದಾಗ ಕೇವಲ ಸುದ್ದಿ ಪ್ರಕಟಿಸುವುದು ಮಾತ್ರವಲ್ಲ, ಗಾಯಾಳುಗಳ ಚಿಕಿತ್ಸೆಗೆ ಆರ್ಥಿಕ ನೆರವು ಕಲ್ಪಿಸುವಲ್ಲಿಯೂ ರಾಜಶೇಖರ ಕೋಟಿ ಅವರು ಮಾನವೀಯತೆ ತೋರಿದ್ದಾರೆ. ಅಲ್ಲದೆ, ಪತ್ರಿಕೋದ್ಯಮದಲ್ಲಿ ರಾಜ್ಯದೆಲ್ಲೆಡೆ ತಮ್ಮದೇ ಆದ ಶಿಷ್ಯಕೋಟಿಯನ್ನು ಹುಟ್ಟು ಹಾಕಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಮುನ್ನಾ ದಿನವೇ ಕನ್ನಡ-ಪರ ಕಾರ್ಯಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ರಾಜಶೇಖರ ಕೋಟಿ ಅವರು ಇಹಲೋಕ ತ್ಯಜಿಸಿರುವುದು ನನ್ನಲ್ಲಿ ಏಕ ಕಾಲಕ್ಕೆ ದುಃಖ ಹಾಗೂ ನೋವನ್ನು ಉಂಟು ಮಾಡಿದೆ ಎಂದು ಸಿದ್ದರಾಮಯ್ಯ ಅವರು ಬಣ್ಣಿಸಿದ್ದಾರೆ.


ಕಾಡುಗಳ್ಳ ವೀರಪ್ಪನ್‍ನ ಚಲನ-ವಲನ ಕುರಿತ ರೋಚಕ ಸುದ್ದಿಗಳನ್ನು ಪ್ರಕಟಿಸಿ ತನಿಖಾ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆದವರು. ಸಮಾಜವಾದಿ ಚಿಂತನೆಗಳ ತಳಹದಿಯಲ್ಲಿ ಪತ್ರಿಕೆಯನ್ನು ಬೆಳೆಸಿ ಶೋಷಿತರ ಕೋಟಿ ದನಿಯಾಗಿದ್ದರು ಎಂದು ಕೋಟಿ ಅವರ ಚಿಂತನೆಗಳನ್ನು ಸಿದ್ದರಾಮಯ್ಯ ಸ್ಮರಿಸಿದ್ದಾರೆ.


ನೆರೆಯ ಚಾಮರಾಜನಗರ, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳಿಗೂ ತಮ್ಮ ಪತ್ರಿಕೆಯ ವರದಿ ಹಾಗೂ ಪ್ರಸಾರ ವಿಸ್ತರಿಸಿ ತಮ್ಮ ಪತ್ರಿಕೆಗೆ ಪ್ರಾದೇಶಿಕ ಪತ್ರಿಕೆಯ ಸ್ಥಾನ ದೊರಕಿಸಿ ಕೊಟ್ಟವರು ಕೋಟಿ.  ಇಷ್ಟು ಮಾತ್ರವಲ್ಲದೆ ತಮ್ಮ ಪತ್ರಿಕೆಯ ಓದುಗರಿಂದ ದೇಣಿಗೆ ಸಂಗ್ರಹಿಸಿ ಕಾರ್ಗಿಲ್ ಯುದ್ಧದ ಸಂತ್ರಸ್ತರಿಗೆ, ಗುಜರಾತ್ ಭೂಕಂಪ ಸಂತ್ರಸ್ತರಿಗೆ ತಮಿಳು ನಾಡಿನ ಸುನಾಮಿ ಸಂತ್ರಸ್ತರಿಗೆ ಹಾಗೂ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವು ಕಲ್ಪಿಸಿದ್ದಾರೆ.                         


ಇವೆಲ್ಲವೂ  ರಾಜಶೇಖರ ಕೋಟಿ ಅವರಲ್ಲಿದ್ದ ಸಾಮಾಜಿಕ ಕಳಕಳಿ ಮತ್ತು ಕಾಳಜಿಗೆ ಸಾಕ್ಷಿ. ಅಷ್ಟೇ ಅಲ್ಲ ! ತಮ್ಮ ಆಂದೋಲನ ಪತ್ರಿಕೆಯ ಮೂಲಕ ರಾಜಶೇಖರ ಕೋಟಿ ಅವರು ಗಳಿಸಿಕೊಂಡಿದ್ದ  ಜನಪ್ರಿಯತೆ ಹಾಗೂ ವಿಶ್ವಾಸಕ್ಕೆ ನಿದರ್ಶನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಟಿ ಅವರ ಕೆಲಸಗಳನ್ನು ಸ್ಮರಿಸಿದ್ದಾರೆ.