ಬೆಂಗಳೂರು:‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ತಡರಾತ್ರಿ ಕಾರ್ಯಾಚರಣೆಗೆ ತೊಡಗಿ ರೈತರಿಗೆ ತೊಂದರೆ ಕೊಡುತ್ತಿದ್ದ ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ. ಅಲ್ಲದೆ ತಡರಾತ್ರಿಯಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರಿಗೆ ಕರೆ ಮಾಡಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯ ಮಾಡಿದರು.


COMMERCIAL BREAK
SCROLL TO CONTINUE READING

ಹೊಸಕೋಟೆ, ಕೋಲಾರ, ಮಾಲೂರು, ಚಿಂತಾಮಣಿ, ಚಿಕ್ಕಬಳ್ಳಾಪುರ, ದೇವನಹಳ್ಳಿ ಮತ್ತಿತರ ಕಡೆಯ ರೈತರು (Farmers) ತಾವು ಬೆಳೆದ ತರಕಾರಿ, ಹಣ್ಣು, ಹೂವು ಉತ್ಪನ್ನಗಳನ್ನು ತಂದು ಬೆಂಗಳೂರಿನ ಹೊರವಲಯದ ಕೆ.ಆರ್.‌ ಪುರ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಇದು ಮೊದಲಿಂದಲೂ ನಡೆದುಕೊಂಡು ಬರುತ್ತಿತ್ತು‌. ಆದರೆ ಈಗ ದಿಢೀರನೆ ಅಧಿಕಾರಿಗಳು ರೈತರಿಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಅವಕಾಶ ನೀಡದೆ ತೊಂದರೆ ಕೊಡುತ್ತಿದ್ದರು. ಅವರ ವಾಹನಗಳನ್ನು ತಡೆದು ಹಿಂಸೆ ನೀಡುತ್ತಿದ್ದರು‌.


ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಶುಕ್ರವಾರ ಮಧ್ಯರಾತ್ರಿ 12.15 ಗಂಟೆ ಸುಮಾರಿಗೆ ಕೆ.ಆರ್.‌ ಪುರ ಮಾರುಕಟ್ಟೆಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರೈತರ ಸಮಸ್ಯೆ ಆಲಿಸಿದರಲ್ಲದೆ, ಅವರಿಗೆ ನೆರವಾಗುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಲ್ಲಿಂದಲೇ ಮನವಿ ಮಾಡಿದರು. 


ಹಲವಾರು ರೈತರು  ತಮಗಾಗುತ್ತಿರುವ ಈ ತೊಂದರೆ ಬಗ್ಗೆ ಡಿ.ಕೆ. ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ನಿವೇದಿಸಿಕೊಂಡಿದ್ದರು. ಶಿವಕುಮಾರ್ ಅವರ ಭೇಟಿ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ ಹಾಗೂ ಹೊಸಕೋಟೆ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾರಾಯಣಗೌಡ ಜತೆಗಿದ್ದರು.