ಬೆಂಗಳೂರು:   ಲಾಕ್‍ಡೌನ್ ಕಾರಣದಿಂದ ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆತರಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.‌ ವಿಜಯಭಾಸ್ಕರ್ (TM Vijayabhaskar) ಅವರಿಗೆ ಪತ್ರ ಬರೆದಿದ್ದಾರೆ. ಪತ್ರದ ಪೂರ್ಣ ವಿವರ ಈ ಕೆಳಗಿನಂತಿದೆ.


COMMERCIAL BREAK
SCROLL TO CONTINUE READING

ಕೋವಿಡ್ 19 (Covid-19)ರಿಂದಾಗಿ ದೇಶದಲ್ಲಿ ಎದುರಾಗಿರುವ ಆರ್ಥಿಕ ಮುಗ್ಗಟ್ಟಿನ ವಿಚಾರ ಎಲ್ಲರಿಗೂ ತಿಳಿದಿದೆ. ಜತೆಗೆ ಈ ಸಂಕಷ್ಟದ ಪರಿಸ್ಥಿತಿಯಿಂದ ತತ್ತರಿಸಿರುವ ವಲಸೆ ಕಾರ್ಮಿಕರ (Immigrants Workers) ಬಡ ಕಾರ್ಮಿಕರ ಪರಿಸ್ಥಿತಿ ಎಷ್ಟು ಹೀನಾಯವಾಗಿದೆ ಎಂಬುದೂ ಕೂಡ ನಮಗೆ ಅರಿವಿದೆ. ಅನೇಕ ರಾಜ್ಯ ಸರ್ಕಾರಗಳು ಬೇರೆ ರಾಜ್ಯಗಳಲ್ಲಿ ಸಿಲುಕಿರುವ ತಮ್ಮ ಜನರನ್ನು ವಾಪಸ್ ಕರೆತರಲು ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿದೆ. ಅದೇರೀತಿ ಬೇರೆ ರಾಜ್ಯಗಳಲ್ಲಿ ಉದ್ಯೋಗ, ಕೆಲಸ ಮಾಡುತ್ತಿರುವ ಅನೇಕ ಕನ್ನಡಿಗರು ಸಿಲುಕಿಕೊಂಡು ಪರದಾಡುತ್ತಿದ್ದಾರೆ. 


ಅದರಲ್ಲಿ ಅನೇಕರು ಕುಟುಂಬದಿಂದ ದೂರ ಉಳಿದು ತಾವೇ ಬದುಕುತ್ತಿದ್ದಾರೆ. ಅವರು ಈ ಸಮಯದಲ್ಲಿ ಭವಿಷ್ಯದ ಬಗ್ಗೆ ಯೋಚಿಸುವ ಮುನ್ನ ಅವರು ತಮ್ಮ ಊರಿಗೆ ಮರಳಲು ಇಚ್ಛಿಸುತ್ತಿದ್ದಾರೆ. 


ಅದೇ ರೀತಿ ಸಾವಿರಾರು ಬೇರೆ ರಾಜ್ಯಗಳ ಜನರು ಕರ್ನಾಟಕವನ್ನು ಕರ್ಮಭೂಮಿಯನ್ನಾಗಿ ಪರಿಗಣಿಸಿ ಈ ನಾಡನ್ನು ಎರಡನೇ ತವರನ್ನಾಗಿ ಪರಿಗಣಿಸಿದ್ದಾರೆ. ಆದರೆ ಅವರು ಈಗ ತಮ್ಮ ರಾಜ್ಯಗಳಲ್ಲಿ ಸಿಲುಕಿದ್ದಾರೆ. ಹೀಗಾಗಿ ಅವರು ಇಲ್ಲಿಗೆ ಬಂದು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.


ಹಣಕಾಸಿನ ಕೊರತೆ, ಭಾವನಾತ್ಮಕ ವಿಚಾರ, ವೈಯಕ್ತಿಕ ಕಾರಣಗಳಿಂದಾಗಿ ತಮ್ಮ ರಾಜ್ಯಗಳಿಗೆ ಮರಳಲು ಬಯಸುತ್ತಿರುವವರನ್ನು ಬೇರೆ ರಾಜ್ಯ ಸರ್ಕಾರಗಳು ವಾಪಸ್ ಕರೆಸಿಕೊಳ್ಳುತ್ತಿವೆ. ಆದರೆ ಈ ವಿಚಾರದಲ್ಲಿ ಕರ್ನಾಟಕ ರಾಜ್ಯ ಮಾತ್ರ ಕನ್ನಡಿಗರು ಮಾಡುತ್ತಿರುವ ಮನವಿಯನ್ನು ಪರಿಗಣಿಸದೇ ವಿಭಿನ್ನವಾಗಿ ವರ್ತಿಸುತ್ತಿದೆ. ಬೇರೆ ರಾಜ್ಯಗಳಲ್ಲಿ ಸಿಲುಕಿರುವ ನಮ್ಮರಾಜ್ಯದ ಜನರನ್ನು ವಾಪಸ್ ಕರೆತರಲು ರೈಲು ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರವಾಗಿ ನಾನು ಮನವಿ ಮಾಡುತ್ತೇನೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರದ ಕನ್ನಡಿಗರನ್ನು ಕೈ ಬಿಡಬಾರದು.


ಈ ನಿಟ್ಟಿನಲ್ಲಿ ನಮ್ಮ ಪಕ್ಷ ರೈಲ್ವೇ ಪ್ರಯಾಣದ ವೆಚ್ಚ ಭರಿಸಲು ಸಿದ್ಧವಿದೆ. ನಮ್ಮ ಜನರನ್ನು ಮತ್ತೆ ಮನೆಗೆ ವಾಪಸ್ ಕರೆತರಲು ರಾಜ್ಯ ಸರ್ಕಾರ ಕೇಂದ್ರ ರೈಲ್ವೇ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಉತ್ತಮ ನಿರ್ಧಾರಕ್ಕೆ ಬರಬೇಕು. ಇದು ಒಂದು ಬಾರಿ ಮಾಡಬಹುದಾದ ಪ್ರಯತ್ನವಾಗಿದೆ.


ಈ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಹಾಗೂ ಕನ್ನಡಿಗರ ಘನತೆಯನ್ನು ಉಳಿಸಲು ತಾವುಗಳು ಮುತುವರ್ಜಿ ವಹಿಸಿ ಆದಷ್ಟು ಬೇಗ ಕ್ರಮ ಕೈಗೊಳ್ಳುವ ಭರವಸೆ ಹೊಂದಿದ್ದೇವೆ ಎಂದು ಬರೆದಿದ್ದಾರೆ.