ಬಿಜೆಪಿ ಜೊತೆ ಹೋದರೆ ಕುಮಾರಸ್ವಾಮಿಗೆ ಬಹಿಷ್ಕಾರ: ಹೆಚ್.ಡಿ.ದೇವೇಗೌಡ
![ಬಿಜೆಪಿ ಜೊತೆ ಹೋದರೆ ಕುಮಾರಸ್ವಾಮಿಗೆ ಬಹಿಷ್ಕಾರ: ಹೆಚ್.ಡಿ.ದೇವೇಗೌಡ ಬಿಜೆಪಿ ಜೊತೆ ಹೋದರೆ ಕುಮಾರಸ್ವಾಮಿಗೆ ಬಹಿಷ್ಕಾರ: ಹೆಚ್.ಡಿ.ದೇವೇಗೌಡ](https://kannada.cdn.zeenews.com/kannada/sites/default/files/styles/zm_500x286/public/2018/04/30/167495-devgowda.png?itok=0kTlBSmG)
ಈ ಬಾರಿ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿ ಜೊತೆ ಹೆಚ್.ಡಿ.ಕುಮಾರಸ್ವಾಮಿ ಮೈತ್ರಿ ಮಾಡಿಕೊಂಡರೆ ಅವರನ್ನು ಕುಟುಂಬದಿಂದಲೇ ಬಹಿಷ್ಕರಿಸುವುದಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಬೆಂಗಳೂರು : ಈ ಬಾರಿ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿ ಜೊತೆ ಹೆಚ್.ಡಿ.ಕುಮಾರಸ್ವಾಮಿ ಮೈತ್ರಿ ಮಾಡಿಕೊಂಡರೆ ಅವರನ್ನು ಕುಟುಂಬದಿಂದಲೇ ಬಹಿಷ್ಕರಿಸುವುದಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಇಂದು NDTV ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ದೇವೇಗೌಡರು, 'ಕಳೆದ ಬಾರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ಈಗಾಗಲೇ ತಪ್ಪು ಮಾಡಿದ್ದಾರೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳಿಂದ ಪಾಠ ಕಲಿತಿದ್ದಾಗಿದೆ ಎಂದು ಹೇಳಿದ್ದಾರೆ. ಒಂದು ವೇಳೆ ನಿಮ್ಮ ಮಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ತಂದೆಯಾಗಿ ನೀವು ಏನು ಮಾಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು ಅಂತಹ ಸಂದರ್ಭ ಬರಲು ಸಾಧ್ಯವೇ ಇಲ್ಲ. ಒಂದು ವೇಳೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಕುಮಾರಸ್ವಾಮಿಯನ್ನು ಕುಟುಂಬದಿಂದಲೇ ಬಹಿಷ್ಕಾರ ಹಾಕುತ್ತೇವೆ. ಇಡೀ ಕುಟುಂಬ ಅವರ ಸಂಪರ್ಕ ಕಳೆದುಕೊಳ್ಳುತ್ತದೆ ಎಂದು ಖಡಕ್ಕಾಗಿ ದೇವೇಗೌಡರು ಉತ್ತರಿಸಿದ್ದಾರೆ.
ಮುಂದುವರೆದು, ಒಂದು ವೇಳೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕೆಂದರೂ ಕುಮಾರಸ್ವಾಮಿ ನನ್ನ ಒಪ್ಪಿಗೆ ಪಡೆಯಲೇ ಬೇಕು. ನನ್ನ ಒಪ್ಪಿಗೆ ಇಲ್ಲದೆ ಮೈತ್ರಿ ಮಾಡಿಕೊಂಡಿದ್ದೇ ಆದರೆ, ಕುಟುಂಬದಿಂದ ಕುಮಾರಸ್ವಾಮಿ ಬಹಿಷ್ಕಾರ ಖಂಡಿತ ಎಂದು ದೇವೇಗೌಡರು ಉತ್ತರಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಅವರು, ಬಿಜೆಪಿ ಕಾಂಗ್ರೆಸ್ ಜೊತೆ ಅಧಿಕಾರ ಹಂಚಿಕೊಳ್ಳೋದು ವ್ಯರ್ಥ. ಅಂತಹ ಸಂದರ್ಭ ಉದ್ಭವಿಸುವುದೇ ಇಲ್ಲ ಎಂದಿದ್ದಾರೆ.