`ವಿಶ್ವಾಸ` ಗೆದ್ದ `ಕುಮಾರ`
ಬೆಂಗಳೂರು: ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆಯೂ ಸಹಿತ ಹೆಚ್ ಡಿ ಕುಮಾರಸ್ವಾಮಿಯವರು ವಿಶ್ವಾಸಮತ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಮೊನ್ನೆಯಷ್ಟೇ ಅಧಿಕಾರ ಸ್ವೀಕರಿಸಿದ್ದ ಕುಮಾರಸ್ವಾಮಿಯವರು ಇಂದು ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆಯೇ ವಿಶ್ವಾಸಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾದರು.ಸದನದಲ್ಲಿ ವಿಶ್ವಾಸ ಒಟ್ಟು 111 ಸದಸ್ಯರ ಸಂಖ್ಯೆ ಬಲ ಅಗತ್ಯವಿತ್ತು. ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ 115 ರ ಸಂಖ್ಯಾಬಲ ಹೊಂದಿದ್ದರಿಂದ ಸುಲಭವಾಗಿ ವಿಶ್ವಾಸಮತ ಸಾಬೀತುಪಡಿಸಿತು.
ವಿಶ್ವಾಸಮತಕ್ಕೂ ಮೊದಲು ಭಾಷಣ ಮಾಡಿದ ಯಡಿಯೂರಪ್ಪ "ಜಮೀರ್ಗೆ ಕೈ ಕೊಟ್ರಿ, ಬಾಲಚಂದ್ರ, ಚೆಲುವರಾಯಸ್ವಾಮಿಗೆ ಕೈ ಕೊಟ್ರಿ. ಅಧಿಕಾರಕ್ಕೆ ನೀವು ಏನು ಬೇಕಾದ್ರೂ ಮಾಡುತ್ತೀರಿ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಡಿ.ಕೆ. ಶಿವಕುಮಾರ್ ಉದ್ದೇಶಿಸಿ ನೀವು ತುಂಬಾ ತಪ್ಪು ಮಾಡಿದ್ದೀರಿ, ನೀವು ಅನರ್ಹ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಮಾಡಿದ್ದೀರಿ. ನೀವು ಮುಂದೆ ಪಶ್ಚಾತಾಪ ಪಡುತ್ತೀರಿ ಎಂದರು.
ಅಲ್ಲದೆ ಇದೇ ವೇಳೆ ಜೆಡಿಎಸ್ ಪಕ್ಷವು 121 ಕಡೆ ಜೆಡಿಎಸ್ ಠೇವಣಿ ಕಳೆದುಕೊಂಡಿದ್ದನ್ನು ಪ್ರಸ್ತಾಪಿಸುತ್ತಾ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಟಾಂಗ್ ನೀಡಿದರು. ಅಂತಿಮವಾಗಿ ತಮ್ಮ ಭಾಷಣದಲ್ಲಿ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡದಿದ್ದರೆ, ಸೋಮವಾರ ಸ್ವಯಂ ಘೋಷಿತ ಬಂದ್ ಆಚರಿಸುತ್ತೇವೆ ಎಂದು ಹೇಳಿ ವಿಧಾನಸಭೆ ಕಲಾಪದಿಂದ ಹೊರನಡೆದರು.