ಬೆಂಗಳೂರು : ಟಿ.ನರಸೀಪುರದ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಫೆಬ್ರವರಿ 17 ರಿಂದ ನಡೆಯುವ ಕುಂಭಮೇಳ ಕಾರ್ಯಕ್ರಮ ಕರ್ನಾಟಕದ ಘನತೆ ಹೆಚ್ಚಿಸುವಂತೆ ನಡೆಯಬೇಕೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.


COMMERCIAL BREAK
SCROLL TO CONTINUE READING

ಕುಂಭಮೇಳ ಕುರಿತು ಬುಧವಾರ ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಧಾರ್ಮಿಕ ಮುಖಂಡರು, ರಾಜಕೀಯ ಗಣ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು.



ಕಾವೇರಿ, ಕಪಿಲಾ, ಸ್ಫಟಿಕ ಸರೋವರಗಳ ತ್ರಿವೇಣಿ ಸಂಗಮದಲ್ಲಿ ನಡೆಯುವ ಕುಂಭಮೇಳ ಅತ್ಯಂತ ದೊಡ್ಡ ಮಟ್ಟದಲ್ಲಿ ನಡೆಯಬೇಕು. ನಮ್ಮ ಧಾರ್ಮಿಕ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಪ್ರತೀಕವಾಗಿ ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು.


ಮಳೆಗಾಲಕ್ಕೂ ಮುನ್ನಾ ದೇವರ ಆರ್ಶೀವಾದಬೇಕು. ಈ ವರ್ಷ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬರಗಾಲವಿದೆ. ಮುಂದಿನ ವರ್ಷ ಉತ್ತಮ ಮಳೆಯಾಗಿ ಜನ ನೆಮ್ಮದಿಯಿಂದ ಬದುಕಬೇಕು ಎಂದರು.


ಕುಂಭಮೇಳ ಆಯೋಜನೆಗೆ ಹಣದ ಕೊರತೆಇಲ್ಲ. ಸೋಪಾನಕಟ್ಟಿ, ರಸ್ತೆ ದುರಸ್ತಿ, ಶೌಚಾಲಯ, ಸ್ನಾನದ ವ್ಯವಸ್ಥೆ, ಕುಡಿಯುವ ನೀರು ಮುಂತಾದ ವ್ಯವಸ್ಥಿಗಳು ಅಚ್ಚುಕಟ್ಟಾಗಿ ಆಗಬೇಕು ಎಂದು ಸೂಚಿಸಿದರು.


ಸುತ್ತೂರಿನ ವೀರಾಸಿಂಹಾಸನ ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಬೆಂಗಳೂರಿನ ಕೈಲಾಸ ಆಶ್ರಮದ ವಿಜಯೇಂದ್ರಪುರಿ ಸ್ವಾಮೀಜಿ ಯವರ ಆಶಯದಂತೆ ಅವರ ಸಲಹೆ ಪಡೆದು ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.


ಈ ಕುಂಭಮೇಳಕ್ಕೆ ಹಲವಾರು ರಾಜ್ಯಗಳಿಂದ ಯತಿವರ್ಯರು ಆಗಮಿಸಲಿದ್ದಾರೆ. ಅವರಿಗೆ ಎಲ್ಲ ರೀತಿಯ ಸೌಕರ್ಯ ಮಾಡಿಕೊಡಬೇಕು. ಅವರು ಕರ್ನಾಟಕದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದರು.


ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಕುಂಭಮೇಳಕ್ಕೆ ಶಾಶ್ವತವಾದ ಮೂಲ ಸೌಕರ್ಯಗಳ ಒದಗಿಸಲು ಗಮನಹರಿಸಬೇಕು ಎಂದು ಅವರು ತಿಳಿಸಿದರು.


ಪ್ರವಾಸೋದ್ಯಮ ಇಲಾಖೆಯಿಂದ ಈ ಕ್ಷೇತ್ರದಲ್ಲಿ ಶಾಶ್ವತವಾದ ಅಭಿವೃದ್ಧಿ ಕೆಲಸ ಮಾಡಲು ನೀಲಿನಕ್ಷೆ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಇದೇ ಸಂದರ್ಭದಲ್ಲಿ ಸೂಚಿಸಿದರು. 


ಈ ಕುಂಭಮೇಳದ ಸಂದರ್ಭದಲ್ಲಿಯೂ ಸಹ ಸಾರ್ವಜನಿಕ ಕೆಲಸಗಳಿಗೆ ಅನಾನುಕೂಲ ಆಗಬಾರದು, ಸರ್ಕಾರದ ಕೆಲಸಗಳು ಸಹ ಆಗಬೇಕು. ಭತ್ತ ಖರೀದಿ ಕೇಂದ್ರಗಳು ಸರಿಯಾಗಿ ಕೆಲಸ ನಿರ್ವಹಿಸದೆ ಇರುವ ಬಗ್ಗೆ ದೂರುಗಳು ಬಂದಿದೆ. ಇದರ ಬಗ್ಗೆ ಗಮನಹರಿಸಬೇಕು ಎಂದರು.


ಸಮಾರೋಪಾದಿಯಲ್ಲಿ ಕೆಲಸ ಸಾಗಲಿ:
ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ ಅವರು ಮಾತನಾಡಿ ಮುಖ್ಯಮಂತ್ರಿಗಳ ಸೂಚನೆಯಂತೆ ಎಲ್ಲ ವ್ಯವಸ್ಥೆಗಳು ಅಟ್ಟುಕಟ್ಟಾಗಿ ನಡೆಯಬೇಕು. ಕೇವಲ 23 ದಿನಗಳು ಮಾತ್ರ ಉಳಿದಿದೆ. ಸಮಾರೋಪಾದಿಯಲ್ಲಿ ಕೆಲಸಗಳು ಆಗಬೇಕು ಎಂದು ತಿಳಿಸಿದರು.