`ನಾನು ಮನೆಗೆ ಹೋಗ್ಬೇಕು ನನ್ನ ಕರ್ಕೊಂಡು ಹೋಗಿ`, ಶಿಮ್ಲಾ ಆಸ್ಪತ್ರೆಯಲ್ಲಿ ಮೈಸೂರು ಮಹಿಳೆ
ಭಾಷೆಯ ಕಾರಣದಿಂದ ಬೇರೆಯವರೊಂದಿಗೆ ಸಂವಹನ ನಡೆಸಲು ಸಾಧ್ಯವಾಗದೆ ಶಿಮ್ಲಾದಲ್ಲಿರುವ ಹಿಮಾಚಲ ಹಾಸ್ಪಿಟಲ್ ಆಫ್ ಮೆಂಟಲ್ ಹೆಲ್ತ್ ಅಂಡ್ ರಿಹೆಬಿಲಿಟೇಶನ್ ನಲ್ಲಿ 2 ವರ್ಷ ಕಳೆದ ಮೈಸೂರು ಮಹಿಳೆ. ಶಿಮ್ಲಾ ಆಸ್ಪತ್ರೆಯಲ್ಲಿರುವ ಮೈಸೂರು ಮಹಿಳೆಯ ನೆರವಿಗೆ ನಿಂತ ಸಿಎಂ ಹೆಚ್.ಡಿ. ಕುಮಾರಸ್ವಾಮಿ
ಬೆಂಗಳೂರು: 'ನಾನು ಮನೆಗೆ ಹೋಗ್ಬೇಕು ನನ್ನ ಕರ್ಕೊಂಡು ಹೋಗಿ' ಇದು ಶಿಮ್ಲಾದಲ್ಲಿರುವ ಹಿಮಾಚಲ ಹಾಸ್ಪಿಟಲ್ ಆಫ್ ಮೆಂಟಲ್ ಹೆಲ್ತ್ ಅಂಡ್ ರಿಹೆಬಿಲಿಟೇಶನ್ (HHMHR) ನಲ್ಲಿ ಕಳೆದ ಎರಡು ವರ್ಷಗಳಿಂದ ಕೇಳಿಬರುತ್ತಿದ್ದ ಪದ್ಮ ಎಂಬ ಮಹಿಳೆಯ ಕೂಗು.
ಶಿಮ್ಲಾದಿಂದ 217 ಕಿ.ಮೀ. ದೂರದಲ್ಲಿರುವ ಕಂಗ್ರಾದಲ್ಲಿ ಸಿಕ್ಕಿಹಾಕಿಕೊಂಡಿದ್ದ ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೂಕಿನ ಮಾಕನಹಳ್ಳಿಪಾಳ್ಯ, ಕಂಪಲಾಪುರ ಗ್ರಾಮದ ಪದ್ಮ ಎಂಬ ಮಹಿಳೆಯನ್ನು ಕಾಂಗ್ರಾದಲ್ಲಿರುವ ಡಾ. ರಾಜೇಂದ್ರ ಪ್ರಸಾದ್ ಎಂಬುವವರು ರಕ್ಷಿಸಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು ನಂತರ ಜೂನ್ 2016 ರಲ್ಲಿ HHMHR ನಲ್ಲಿ ದಾಖಲಿಸಿದರು.
ಆಘಾತಗೊಂಡಿದ್ದರಿಂದ ಆ ಮಹಿಳೆ ಅಲ್ಲಿಗೆ ಹೇಗೆ ಬಂದರು ಎಂಬುದನ್ನು ಆಕೆಯಿಂದ ತಿಳಿದುಕೊಳ್ಳಲು ಸಾಧ್ಯವಾಗಿರಲಿಲ್ಲ. 'ನಾನು ಮನೆಗೆ ಹೋಗ್ಬೇಕು ನನ್ನ ಕರ್ಕೊಂಡು ಹೋಗಿ' ಎಂದು ಪದ್ಮ ಹೇಳುತ್ತಿದ್ದರು, ಆದರೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದ ಮಹಿಳೆ ಭಾಷೆಯ ಕಾರಣದಿಂದ ಬೇರೆಯವರೊಂದಿಗೆ ಸಂವಹನ ನಡೆಸಲು ಸಾಧ್ಯವಾಗದೆ ಶಿಮ್ಲಾದ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಈ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು.
ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದಾಗ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮಹಿಳೆಯ ಕುರಿತು ಮಾಹಿತಿ ಲಭ್ಯವಾಗಿದೆ. ಬಳಿಕ ಮೈಸೂರು ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ನಡೆಸಿರುವ ಸಿಎಂ, ಮಹಿಳೆಯನ್ನು ಸುರಕ್ಷಿತವಾಗಿ ಕರೆತಂದು, ಸೂಕ್ತ ಚಿಕಿತ್ಸೆ ಕೊಡಿಸಿ, ಆಶ್ರಯ ಒದಗಿಸುವಂತೆ ಸೂಚಿಸಿದ್ದಾರೆ.
ಮಹಿಳೆಯನ್ನು ರಾಜ್ಯಕ್ಕೆ ವಾಪಸ್ ಕರೆತರಲು ಮೈಸೂರು ಜಿಲ್ಲಾಧಿಕಾರಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಹಿಮಾಚಲ ಪ್ರದೇಶದ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಮಹಿಳೆಯ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಿದ್ದು, ಚಿಕಿತ್ಸೆಯ ನಂತರ ಆಕೆಗೆ ಆಶ್ರಯ ನೀಡಲು ಸೂಚಿಸಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.