ಬೆಂಗಳೂರು: ‘ನಮ್ಮ ಪಾಲಿಗೆ ಭಗವದ್ಗೀತೆ, ರಾಮಾಯಣ, ಬೈಬಲ್, ಖುರಾನ್ ಎಲ್ಲವೂ ಆಗಿರುವ ಸಂವಿಧಾನ, ನಮ್ಮ ಸಂಸ್ಕೃತಿ ಉಳಿಸಿಕೊಳ್ಳಲು ಹೋರಾಟ ಮಾಡುವಂತಹ ಕಾಲ ಬಂದಿದೆ. ಎಲ್ಲರೂ ಎದ್ದೇಳಿ, ಹಳ್ಳಿ ಹಳ್ಳಿಗೆ ಹೆಜ್ಜೆ ಹಾಕಿ ಹೋರಾಟ ಮಾಡಿ. ಇಂತಹ ಕೆಟ್ಟ ಸಂಪ್ರದಾಯವನ್ನು ಕಿತ್ತೊಗೆಯೋಣ. ನಾನು ಸದಾ ನಿಮ್ಮ ಜತೆ ಇರುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಪರಿಷ್ಕೃತ ಪಠ್ಯ ಪುಸ್ತಕ ವಿರೋಧಿಸಿ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನಾ ಸಭೆಯಲ್ಲಿ ಶನಿವಾರ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. ಅವರು ಇದೇ ಸಂದರ್ಭದಲ್ಲಿ ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿದ್ಧ ಪಠ್ಯ ಪುಸ್ತಕ ಪ್ರತಿಯನ್ನು ಹರಿದು ಬಿಸಾಡಿದರು.
ಅವರು ಒಟ್ಟಾರೆ ಹೇಳಿದ್ದಿಷ್ಟು:


‘ರಾಜಕಾರಣಿಗಳು ಮಾತನಾಡುವ ವೇದಿಕೆ ಇದಲ್ಲ. ನಾವು ವಿಧಾನಸೌಧದಲ್ಲಿ ಮಾತನಾಡಬೇಕು ಎಂದು ಜನ ನಮ್ಮನ್ನು ವಿಧಾನಸೌಧಕ್ಕೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಆ ಸಂದರ್ಭ ಇನ್ನು ಬಂದಿಲ್ಲ. ಹೀಗಾಗಿ ನೀವು ಸಂಘಟನೆ ಮಾಡಿರುವ ಹೋರಾಟಕ್ಕೆ ಬಂದು, ನಿಮ್ಮ ಜತೆ ನಾವಿದ್ದೇವೆ ಎಂದು ಹೇಳುತ್ತಿದ್ದೇನೆ.


ನಾನು ಇಲ್ಲಿಗೆ ಡಿ.ಕೆ. ಶಿವಕುಮಾರ್ ಆಗಿ ಬಂದಿಲ್ಲ. ದೇಶಕ್ಕೆ ಸ್ವಾತಂತ್ರ್ಯ, ರಾಷ್ಟ್ರಧ್ವಜ, ಸಂವಿಧಾನವನ್ನು ತಂದುಕೊಟ್ಟ ಪಕ್ಷದ ಅಧ್ಯಕ್ಷನಾಗಿ ಬಂದಿದ್ದೇನೆ. ನಿಮ್ಮ ಹೋರಾಟಕ್ಕೆ ಈ ಪಕ್ಷದ ಸಂಪೂರ್ಣ ಬೆಂಬಲವಿದೆ. ಈ ಸುತ್ತೋಲೆ ಹಿಂಪಡೆಯುವವರೆಗೂ ನಿಮ್ಮ ಈ ಹೋರಾಟದ ಜತೆ ನಾವು ನಿಲ್ಲುತ್ತೇವೆ ಎಂದು ಹೇಳಲು ಬಂದಿದ್ದೇವೆ. ಇಲ್ಲಿ ಎಷ್ಟೋ ವಿಭಿನ್ನ ಪಕ್ಷಗಳು, ಧರ್ಮ, ಜಾತಿ ಇದ್ದರೂ ನಾವೆಲ್ಲರೂ ಇಂದು ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜದೊಂದಿಗೆ ಒಟ್ಟಾಗಿ ಸೇರಿದ್ದೇವೆ. 


ಇದನ್ನೂ ಓದಿ: ಫೋನ್ ನಂಬರ್‌ ಸೇವ್‌ ಮಾಡದೆ WhatsApp ಸಂದೇಶ ಕಳುಹಿಸುವುದು ಹೇಗೆ?


ಈ ಸಮಾರಂಭ ನೋಡಿ ನನಗೆ ಪುರಂದರದಾಸರ ನೆನಪು ಬರುತ್ತಿದೆ. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ’ ಎಂದು ಅವರು ಹೇಳಿದ್ದಾರೆ. ಅದೇ ರೀತಿ ಇಂದು ಇಂತಹ ಪವಿತ್ರವಾದ ಸಭೆಯಲ್ಲಿ ನಾವು ಪಾಲ್ಗೋಂಡಿರುವುದು ನಮ್ಮ ಭಾಗ್ಯ ಎಂದು ಭಾವಿಸಿದ್ದೇನೆ.


ಈ ಹೋರಾಟಕ್ಕೆ ಯಾರೆಲ್ಲಾ ಬುನಾದಿ, ಹೆಜ್ಜೆ, ಸಂಘಟನೆ ಮಾಡಿದ್ದೀರಿ ಅವರಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸುತ್ತೇನೆ. ನೀವು ಈ ಹೋರಾಟವನ್ನು ಎಂತಹ ಗಳಿಗೆಯಲ್ಲಿ ಪ್ರಾರಂಭಿಸಿದ್ದೀರಿ ಎಂದರೆ, ಬುದ್ಧ ಬಸವನು ಮನೆ ಬಿಟ್ಟ ಗಳಿಗೆಯಲ್ಲಿ, ಏಸುಕ್ರಿಸ್ತನು ಶಿಲುಬೆಗೇರಿದ ಗಳಿಗೆಯಲ್ಲಿ, ಪೈಗಂಬರ್ ದಿವ್ಯವಾಣಿ ಕೇಳಿದ ಗಳಿಗೆಯಲ್ಲಿ, ಭೀಮಾ ಭಾಯಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಜನ್ಮ ಕೊಟ್ಟ ಗಳಿಗೆಯಲ್ಲಿ, ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿದ ಗಳಿಗೆಯಲ್ಲಿ, ಕೆಂಪೇಗೌಡರು ಬೆಂಗಳೂರು ಕಟ್ಟಿದ ಗಳಿಗೆಯಲ್ಲಿ, ಕುವೆಂಪು ಅವರು ರಾಷ್ಟ್ರಕವಿಯಾಗಿ ನಮಗೆ ವಿಶ್ವ ಮಾನವ ಸಂದೇಶ ಕೊಟ್ಟ ಗಳಿಗೆಯಲ್ಲಿ ಈ ಹೋರಾಟ ಆರಂಭಿಸಿದ್ದೀರಿ. ಇದು ನಮ್ಮ ನಿಮ್ಮ ಆಚಾರ ವಿಚಾರ. ಬರಗೂರು ರಾಮಚಂದ್ರಪ್ಪನವರು ಪರಿಷ್ಕರಿಸಿದ್ದ ಪಠ್ಯ ಪುಸ್ತಕ ಅವರ ಸ್ವತ್ತಾಗಿರಲಿಲ್ಲ. ಈ ರಾಜ್ಯ ಒಪ್ಪಿದ ಸ್ವತ್ತಾಗಿತ್ತು. ಆ ಪಠ್ಯವನ್ನು ತಂದಾಗ ಯಾವುದೇ ಒಬ್ಬ ನಾಯಕರು ಅದರ ವಿರುದ್ಧ ಧ್ವನಿ ಎತ್ತಲಿಲ್ಲ.


ಕರ್ನಾಟಕ, ಕುವೆಂಪು ಅವರ ಕರ್ನಾಟಕ ಆಗಬೇಕು. ಎಲ್ಲ ಧರ್ಮ, ಎಲ್ಲಾ ಜಾತಿಯವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಇಂದು ಈ ಪಠ್ಯಪುಸ್ತಕದ ಬಗ್ಗೆ ನಾನು ವ್ಯಾಖ್ಯಾನ ಮಾಡಲು ನಿಂತಿಲ್ಲ. ನಾರಾಯಣ ಗುರುಗಳಿಂದ ಪ್ರತಿಯೊಬ್ಬ ಮಹನೀಯರಿಗೂ ಈ ಪಠ್ಯದಲ್ಲಿ ಅಪಮಾನವಾಗಿದೆ. ಇದನ್ನು ಸಹಿಸಿಕೊಂಡಿರಲು ಹೇಗೆ ಸಾಧ್ಯ? ಈ ನಾಡಿನ ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗ ಸಹಿಸಲು ಸಾಧ್ಯವಿಲ್ಲ. ನಾವು ರಾಜಕಾರಣಿಗಳು ಈ ವಿಚಾರವನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತೇವೆ. ಆದರೆ ಸಾಹಿತಿಗಳು, ಇತಿಹಾಸಕಾರರು ಹಾಗೂ ಇಲ್ಲಿರುವ ಪ್ರತಿಯೊಬ್ಬರು ಈ ದೇಶ ಹಾಗೂ ರಾಜ್ಯದ ಸಂಸ್ಕೃತಿ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೀರಿ.


ಇದನ್ನೂ ಓದಿ: 'ವಿದ್ಯಾಸಿರಿ ಯೋಜನೆಗೆ ಬಿಜೆಪಿ ಸರ್ಕಾರ ಕಲ್ಲು ಹಾಕುತ್ತಿದೆ'


ನಂಜಾವಧೂತ ಸ್ವಾಮೀಜಿಗಳು ಬಂದಾಗ ನನ್ನ ಮೇಲಿದ್ದ ಕನ್ನಡ ಬಾವುಟವನ್ನು ಅವರಿಗೆ ಹಾಕಿದೆ. ಇಲ್ಲಿರುವ ಎಲ್ಲ ಧರ್ಮ ಪೀಠದ ಸ್ವಾಮಿಗಳಿಗೆ ಈ ಧ್ವಜ ಹಾಕಿಸಿದೆ. ಆಗ ನನಗೆ ನೆನಪಿಗೆ ಬಂದಿದ್ದು ಕೆಲವು ಸ್ವಾಮೀಜಿಗಳು ಮೈಗೆ ಎಣ್ಣೆ ಹಚ್ಚಿಕೊಂಡು ಕೂತಿದ್ದಾರೆ ಎಂಬುದು. 


ಇಲ್ಲಿರುವ ಅನೇಕರು ನನ್ನ ಈ ಮಾತಿಗೆ ನಗುತ್ತಿದ್ದಾರೆ. ನನಗೆ ಮಹಾಭಾರತದ ಘಟನೆ ನೆನಪಿಗೆ ಬಂತು. ಹೀಗಾಗಿ ಈ ಮಾತು ಹೇಳಿದೆ. ಮಹಾಭಾರತದಲ್ಲಿ ದ್ರೌಪದಿ ವಸ್ತ್ರಾಪಹರಣ ಆಗುತ್ತಿರುವಾಗ ಮಹಾಮಹಿಮ ಭೀಷ್ಮ, ಮಹಾಗುರು ದ್ರೋಣಾಚಾರ್ಯರು ಕೈಕಟ್ಟಿಕೊಂಡು ಕೂತಿದ್ದರು. ರಾಜ್ಯದಲ್ಲಿ ಸುಮಾರು ವಿವಿಧ ಸಮುದಾಯಗಳ 3 ಸಾವಿರಕ್ಕೂ ಹೆಚ್ಚು ಸ್ವಾಮೀಜಿಗಳಿದ್ದು, ಇಂದು ಎಲ್ಲ ಧರ್ಮ ಪೀಠಗಳಿಗೂ ಅಪಮಾನವಾಗಿದ್ದು, ಅವರಾರೂ ಸುಮ್ಮನೆ ಕೂರಬಾರದು ಎಂದು ಕನ್ನಡ ಧ್ವಜವನ್ನು ಹಾಕಿದ್ದೇನೆ. ಸ್ವಾಮೀಜಿಗಳು ರಾಜಕಾರಣಕ್ಕೆ ಬೆಂಬಲ ನೀಡದಿದ್ದರೂ ಈ ದೇಶದ ಸಮಗ್ರತೆ, ಈ ದೇಶದ ಐಕ್ಯತೆ, ದೇಶದ ಧರ್ಮ ಹಾಗೂ ಸಂಸ್ಕೃತಿ ಉಳಿಸಲು ಬೆಂಬಲದ ಅಗತ್ಯವಿದೆ. ಇವುಗಳ ರಕ್ಷಣೆಗಾಗಿ ನೀವು ಎಲ್ಲವನ್ನು ತ್ಯಾಗ ಮಾಡಿ ಸಮಾಜ ಸೇವೆಗೆ ಬಂದಿದ್ದೀರಿ. ಅಧರ್ಮದ ವಿರುದ್ಧ ಧ್ವನಿ ಎತ್ತಿ ಎಂದು ಅವರು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.