2018ರ ವಿಧಾನಸಭೆ ಚುನಾವಣೆಯಲ್ಲಿ ಮತಪತ್ರಗಳನ್ನೇ ಬಳಸಲು ಚುನಾವಣಾ ಆಯೋಗಕ್ಕೆ ಪತ್ರ: ಸಿಎಂ
ವಿದ್ಯುನ್ಮಾನ ಮತಯಂತ್ರಗಳ ದುರ್ಬಳಕೆ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ತಾವು ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲು ಮತಪತ್ರಗಳನ್ನೇ ಬಳಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವ ತೀರ್ಮಾನ ಮಾಡಿರುವುದಾಗಿ ಸಿಎಂ ತಿಳಿಸಿದರು.
ಮಾನ್ವಿ (ರಾಯಚೂರು): 2018ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲು ಮತಪತ್ರಗಳನ್ನೇ ಬಳಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ರಾಯಚೂರಿನ ಮಾನ್ವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿದ್ಯುನ್ಮಾನ ಮತಯಂತ್ರಗಳ ದುರ್ಬಳಕೆ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ತಾವು ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲು ಮತಪತ್ರಗಳನ್ನೇ ಬಳಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವ ತೀರ್ಮಾನ ಮಾಡಿರುವುದಾಗಿ ತಿಳಿಸಿದರು.
ಅಧಿಕಾರ ಮತ್ತು ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಯಲ್ಲಿದೆ. ತಮಗೆ ಬೇಕಾದವರನ್ನು ಅವರು ಆಯೋಗದ ಮುಖ್ಯಸ್ಥರನ್ನಾಗಿ ನೇಮಕ ಮಾಡುತ್ತಾರೆ. ಹೀಗಾಗಿ ದುರ್ಬಳಕೆ ಮಾಡಿಕೊಳ್ಳುವ ಅವಕಾಶ ಇದೆ ಎಂದು ಇದೇ ಸಂದರ್ಭದಲ್ಲಿ ಆರೋಪ ಮಾಡಿದರು. ಅಲ್ಲದೆ, ಇದು ನಾನೊಬ್ಬ ಹೇಳುತ್ತಿರುವ ಮಾತಲ್ಲ. ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆದಾಗ ಮಾಯವತಿ, ಅಖಿಲೇಶ್ ಯಾದವ್, ಅಷ್ಟೇ ಅಲ್ಲ, ಆಡ್ವಾಣಿಯವರೂ ಈ ಮಾತನ್ನು ಹೇಳಿದ್ದಾರೆ ಎಂದು ಸಿಎಂ ಉಲ್ಲೇಖಿಸಿದರು.
ಹಳೆಯ ಪದ್ಧತಿಗೆ ಹೋಗಲು ಏನು ಕಷ್ಟ ?
ಅಮೆರಿಕ ಮತ್ತು ಜರ್ಮನಿಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಕೆ ಮಾಡಿದರು. ಆದರೆ, ಮತ್ತೆ ಮತ ಪತ್ರಗಳ ಮೊರೆ ಹೋದರು. ಹೀಗಾಗಿ ರಾಜ್ಯದಲ್ಲೂ ಮತಪತ್ರಗಳನ್ನೇ ಬಳಸುವುದು ಸೂಕ್ತ. ಈ ಕುರಿತು ನಾನು ತಜ್ಞರ ಜೊತೆಗೂ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದ ಸಿದ್ದರಾಮಯ್ಯ ಹಳೆಯ ಪದ್ಧತಿಗೆ ಹೋಗಲು ಏನು ಕಷ್ಟ ? ಎಂದು ಪ್ರಶ್ನಿಸಿದರು.