ಬೆಂಗಳೂರು: ಲಿಂಗಾಯಿತ ಪ್ರತ್ಯೇಕ ಧರ್ಮದ ವಿಚಾರವಾಗಿ ನಡೆಯುತ್ತಿರುವ ಪರ-ವಿರೋಧ ಚರ್ಚೆಗಳಿಗೆ ಇಂದು ತೆರೆಬೀಳುವ ಸಾಧ್ಯತೆ ಇದೆ. ಇಂದು ಬೆಳಿಗ್ಗೆ ವಿಧಾನಸೌಧದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಲಿಂಗಾಯಿತ ಪ್ರತ್ಯೇಕ ಧರ್ಮದ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಕಳೆದ ಬಾರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಲಿಂಗಾಯಿತ ವಿಚಾರ ಬಹಳ ಗದ್ದಲಕ್ಕೆ ಕಾರಣವಾಗಿತ್ತು. ಕೆಲವು ಸಚಿವರು ರಾಜೀನಾಮೆ ನೀಡುವ ಹಂತಕ್ಕೂ ಸಭೆ ಸಾಗಿತ್ತು. ಹಾಗಾಗಿ ಸಿಎಂ ಸಚಿವ ಸಂಪುಟ ಸಭೆಯನ್ನು ಮುಂದೂಡಿದ್ದರು. 


'ಧರ್ಮ' ಸಂಕಟದಲ್ಲಿ ಸಿದ್ಧರಾಮಯ್ಯ
ನ್ಯಾಯಮೂರ್ತಿ ನಾಗಮೋಹನ್ ದಾಸ್ ನೀಡಿರುವ ವರದಿಯಲ್ಲಿ ಲಿಂಗಾಯಿತಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂದು ಹೇಳಲಾಗಿದೆ. ಇದನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.  ಹೀಗಾಗಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಶಿಫಾರಸ್ಸಿನ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. 


ಆದರೆ ಈ ಶಿಫಾರಸ್ಸೆ ಸಿದ್ಧರಾಮಯ್ಯ ಅವರನ್ನು ಧರ್ಮ ಸಂಕಟದಲ್ಲಿ ಸಿಲುಕಿಸಿದೆ. ಕಾರಣ ಈಗಾಗಲೇ ವೀರಶೈವ ಮಠಾಧೀಶರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ವರದಿಯನ್ನು ಶಿಫಾರಸ್ಸು ಮಾಡಬಾರದು ಎಂದು ತಿಳಿಸಿದ್ದಾರೆ. ಏತನ್ಮಧ್ಯೆ ಲಿಂಗಾಯಿತ ಸ್ವಾಮೀಜಿಗಳು ಸಹ ಸಿಎಂರನ್ನು ಭೇಟಿ ಮಾಡಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿದ್ದಾರೆ.


ಇದೀಗ ಇಂದಿನ ಸಭೆಯಲ್ಲಿ ಸಿಎಂ ಯಾರ ಪರವಾಗಿ ನಿರ್ಧಾರ ತೆಗೆದುಕೊಂಡರೂ ಮತ್ತೊಂದು ಗುಂಪು ಭುಗಿಲೇಳುವ ಸಾಧ್ಯತೆ ದಟ್ಟವಾಗಿದೆ. ಸಿಎಂ ಸಿದ್ದರಾಮಯ್ಯ ಈ ವಿಷಯವಾಗಿ ಯಾವ ರೀತಿಯ ನಿಲುವು ತಾಳುತ್ತಾರೆ. ಸಿಎಂ ಈ ಧರ್ಮ ಸಂಕಟದಿಂದ ಹೇಗೆ ಬಚಾವ್ ಆಗ್ತಾರೆ ಎಂಬುದನ್ನು ಕಾದುನೋಡಬೇಕಿದೆ.