ಮಂತ್ರಿಗಿರಿಗಾಗಿ ಶಾಸಕರಿಂದ ದೆಹಲಿಯಲ್ಲಿ ಲಾಬಿ
ನವದೆಹಲಿ: ವಿಶ್ವಾಸ ಮತದ ಲೆಕ್ಕಾಚಾರ ಮುಗಿದ ನಂತರ ಶಾಸಕರು ಈಗ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.
ಈಗಾಗಲೇ ಪ್ರಮುಖ ರಾಜ್ಯ ನಾಯಕರು ದೆಹಲಿಗೆ ಆಗಮಿಸುವ ಮುನ್ನವೇ ಹಲವು ಶಾಸಕರು ರಾಷ್ಟ್ರ ರಾಜಧಾನಿಗೆ ಆಗಮಿಸಿ ಲಾಬಿ ನಡೆಸಿದ್ದಾರೆ.ಕಾಂಗ್ರೆಸ್ ಪಕ್ಷದಿಂದ ಯಾರ್ಯಾರು ಮಂತ್ರಿಗಳಾಗಬೇಕು ಎನ್ನುವುದರ ಕುರಿತು ಹೈಕಮಾಂಡ್ ಜೊತೆ ಚರ್ಚಿಸಿಸಲು ಇಂದು ಸಂಜೆ ದೆಹಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಡಿ.ಕೆ. ಶಿವಕುಮಾರ್ ಮತ್ತು ದಿನೇಶ್ ಗುಂಡೂರಾವ್ ಆಗಮಿಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಈಗಾಗಲೇ ಹಲವು ಕಾಂಗ್ರೆಸ್ ನಾಯಕರು ಮತ್ತು ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಗೆ ಬಂದಿದ್ದಾರೆ. ಅದರಲ್ಲಿ ಪ್ರಮುಖವಾಗಿ ಶಿವಶಂಕರ ರೆಡ್ಡಿ, ಆರ್.ವಿ. ದೇಶಪಾಂಡೆ, ರೋಷನ್ ಬೇಗ್, ಎಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್ ಅವರು ರಾಜ್ಯ ನಾಯಕರ ಆಗಮನಕ್ಕೆ ನಿರೀಕ್ಷಿಸುತ್ತಿದ್ದು ಅವರು ಬಂದ ಕೂಡಲೇ ಸಚಿವ ಸ್ಥಾನದ ವಿಚಾರವಾಗಿ ಚರ್ಚೆ ನಡೆಯಲಿದೆ ಎನ್ನಲಾಗಿದೆ.