Lokasabha Election 2024: ಕರಾವಳಿಯಲ್ಲಿ ಬಿಜೆಪಿಯ ಭದ್ರಕೋಟೆ ಭೇದಿಸುತ್ತಾ ಕೈ ಪಡೆ?
ಲೋಕಸಭಾ ಚುನಾವಣೆ ಅಂದ್ರೆ ಪ್ರಜಾಪ್ರಭುತ್ವದ ಹಬ್ಬ. ದೇಶಕ್ಕೆ ಪ್ರಧಾನ ಮಂತ್ರಿಯನ್ನ ಆಯ್ಕೆ ಮಾಡೋಕೇ ಜನಪ್ರತಿನಿಧಿಗಳನ್ನು ಚುನಾಯಿಸಿ ಕಳುಹಿಸುವ ಗುರುತರವಾದ ಕೆಲಸ. ಕಾನೂನು, ಆಡಳಿತ ಮತ್ತು ಸಂವಿಧಾನಬದ್ಧ ಸಂಸದರ ಚುನಾವಣೆಯಲ್ಲಿ ಭಾಗಿಯಾಗುವುದು ಜವಾಬ್ದಾರಿ ಮತ್ತು ಹೊಣೆಗಾರಿಕೆ ಕೂಡ. ಸಂಸದರೆಂಬುದೇ ಮಹತ್ವದ ಗೌರವ ಮತ್ತು ತನ್ನದೇ ಆದ ಘನತೆಯನ್ನ ಉಳಿಸಿಕೊಂಡಿರುವ ಸಂವಿಧಾನಬದ್ಧ ಅಧಿಕಾರ. ಹೀಗಾಗಿ ಸಂಸದರನ್ನ ಆಯ್ಕೆ ಮಾಡಲು ಮತದಾರ ಪ್ರಭುಗಳು ಕೂಡಾ ಬಹು ಎಚ್ಚರಿಕೆಯಿಂದ ಸೈದ್ಧಾಂತಿಕ ಮತ್ತು ಅಭಿವೃದ್ಧಿಯ ಮಾನದಂಡಗಳನ್ನು ಬಳಸಿ ಹಕ್ಕನ್ನು ಚಲಾಯಿಸುತ್ತಾನೆ. ಇಲ್ಲಿ ಒಮ್ಮೆ ಮತದಾರನ ನಾಡಿಮಿಡಿತ ಅರಿತ ವ್ಯಕ್ತಿ ದೆಹಲಿ ಪ್ರವೇಶಿಸಿ 5 ವರ್ಷ ಸಂಸದರಾಗಿ ಅಧಿಕಾರ ಚಲಾಯಿಸುತ್ತಾರೆ. ಈ ರೀತಿಯ ಸಂಸತ್ ಅಭ್ಯರ್ಥಿ, ಮತದಾರರ ಮನದಾಳ ಮತ್ತು ಕ್ಷೇತ್ರಗಳ ಲೆಕ್ಕಾಚಾರದ ಸಮಗ್ರ ಮಾಹಿತಿಯನ್ನು ವೀಕ್ಷಕರ ಮುಂದಿಡುವುದೇ ಲೋಕ ಲೆಕ್ಕಾಚಾರ, ಸಂಸದರ ರಿಪೋರ್ಟ್ ಕಾರ್ಡ್.
ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ದಿನಾಂಕ ಘೋಷಣೆಗೆ ದಿನಗಳು ಸಮೀಪಿಸುತ್ತಿರುವಂತೆ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಅರ್ಥಾತ್ ಮಂಗಳೂರು ಕ್ಷೇತ್ರವು ದೇಶದಲ್ಲೇ ಎಲ್ಲರ ಕುತೂಹಲದ ಕ್ಷೇತ್ರ. ಮೀನಿನನಗರಿ, ಕಡಲನಗರಿ ಎಂದೇ ಕರೆಯಲ್ಪಡುವ ಮಂಗಳೂರು, ಮೆಡಿಕಲ್ ಹಬ್, ಸಮುದ್ರದ ನಗರಿ ಜೊತೆಗೆ ಧಾರ್ಮಿಕವಾಗಿಯೂ ಈ ಕ್ಷೇತ್ರ ಸದ್ದು ಮಾಡುತ್ತಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವು ಬಿಜೆಪಿಯದ್ದು ದೊಡ್ಡ ಪ್ರಾಬಲ್ಯ. ಕಾಂಗ್ರೆಸ್ ಪಕ್ಷದಿಂದಲೂ ಅಷ್ಟೇ ಪೈಪೋಟಿಯಿದೆ. ಟೋಟಲಿಯಾಗಿ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆಯಿದೆ. ಹಿಂದೂತ್ವದ ಶಕ್ತಿ ಕೇಂದ್ರವಾಗಿರೋ ಮಂಗಳೂರು ತನ್ನ ಸಂಪತ್ತಿನಲ್ಲಿ ಎಷ್ಟು ಫೇಮಸೋ ಅಷ್ಟೇ ನಕಾರಾತ್ಮಕವಾಗಿ ಕೋಮುದಳ್ಳುರಿಗೆ ಕುಖ್ಯಾತವಾಗಿದೆ. ಈ ಸಲದ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿಯಲ್ಲಿ ಆಕಾಂಕ್ಷಿಗಳು ಟಿಕೆಟ್ ಪಡೆಯಲು ತೆರೆಮರೆಯಲ್ಲಿ ಭಾರಿ ಪೈಪೋಟಿಯೂ ನಡೆಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಬಿಲ್ಲವರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಮುಸ್ಲಿಂ ಮತದಾರರು ದ್ವಿತೀಯ ಸ್ಥಾನದಲ್ಲಿದ್ದಾರೆ. ಮಂಗಳೂರಿನ ಎಂಟು ಕ್ಷೇತ್ರಗಳು ಲೋಕಸಭಾ ವ್ಯಾಪ್ತಿಗೆ ಬರುತ್ತೆ. ಅಂದಹಾಗೇ ಮಂಗಳೂರು ಬಿಜೆಪಿ ಭದ್ರಕೋಟೆಯಾಗಿದ್ದು ಈ ಭದ್ರಕೋಟೆಯನ್ನು ಒಡೆಯಲು ಈ ಸಲ ಕಾಂಗ್ರೆಸ್ ಭಾರೀ ರಣತಂತ್ರ ಮಾಡಿಕೊಂಡಿದೆ.
ಮಂಗಳೂರಲ್ಲಿ ಬಿಜೆಪಿ ಭದ್ರವಾಗಿ ಬಲವೂರಲು ಕಾರಣ ಹಿಂದೂತ್ವದ ಶಕ್ತಿ. ಇದೇ ಶಕ್ತಿಯಿಂದಲೇ ಬಿಜೆಪಿ ಈವರೆಗೂ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಂದಿದೆ. ಹಾಲಿ ಸಂಸದ ನಳೀನ್ ಕುಮಾರ್ ಕಟೀಲ್ ಈ ಬಾರಿಯೂ ಟಿಕೆಟ್ ಗಳಿಸುವ ನಿರೀಕ್ಷೆಯಲ್ಲಿದ್ರೂ ಅದಕ್ಕಾಗಿ ಅನೇಕ ಮಂದಿ ತಿರುಗಿ ಬೀಳುವ ಸಾಧ್ಯತೆ ಇರೋದ್ರಿಂದ ನಳೀನ್ ಗೆ ಸ್ಪಲ್ಪ ಭಯ ಶುರುವಾಗಿದೆ. ಅತ್ತ ಕಾಂಗ್ರೆಸ್ ನಲ್ಲೂ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಟಿಕೆಟ್ ಈ ಸಲ ಯಾರಿಗೆ ಸಿಗುತ್ತೆ ಎಂಬ ಲೆಕ್ಕಾಚಾರ ಶುರುವಾಗಿದೆ.
* ಹಾಲಿ ಸಂಸದ: ನಳೀನ್ ಕುಮಾರ್ ಕಟೀಲ್
* ನಳೀನ್ ಕುಮಾರ್ ಕಟೀಲು, 13,45,039 (ಶೇ.79.6 %)
* ನಳೀನ್ ಗೆಲುವಿನ ಮಾರ್ಜಿನ್ 2,74,621 (ಶೇ.20.4%)
* ಬಿಲ್ಲವ, ಮುಸ್ಲಿಂ ಸಮುದಾಯದವರ ಸಂಖ್ಯೆ ಹೆಚ್ಚು
* 8 ಅಸೆಂಬ್ಲಿ ಕ್ಷೇತ್ರಗಳ ಲೋಕಸಭೆ
* ಒಟ್ಟು ಮತದಾರರ ಸಂಖ್ಯೆ- 18,97,417
* ಬಿಲ್ಲವ: 3.60, ಮುಸ್ಲಿಂ: 3.50 ಲಕ್ಷ
ಸಂಸದರ ಸಾಧನೆ
1. ಮಂಗಳೂರು-ಮಡಗಾಂವ್ ಮಧ್ಯೆ ವಂದೇಭಾರತ್ ರೈಲು ಆರಂಭ
2. ಕೇಂದ್ರ-ರಾಜ್ಯದೊಂದಿಗೆ ಸಮನ್ವಯ ಸಾಧಿಸಿ ಅಭಿವೃದ್ಧಿ ಯೋಜನೆ ಜಾರಿ
3. ಪ್ಲಾಸ್ಟಿಕ್ ಪಾರ್ಕ್‌ನ ಮೂಲಸೌಲಭ್ಯ ಅಭಿವೃದ್ಧಿ
4. CSR ಫಂಡ್ ಬಳಸಿ 55 ಕೋಟಿ ರೂ. ವೆಚ್ಚದಲ್ಲಿ ಆದರ್ಶ ಗ್ರಾಮ ಅಭಿವೃದ್ಧಿ
5. ಶಾಲಾ ಕಟ್ಟಡ, ಆರೋಗ್ಯ ಕೇಂದ್ರ, ಪಂಚಾಯತ್ ಕಟ್ಟಡಗಳ ನವೀಕರಣ
6. ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ, ಸ್ವಂತ ಮನೆಗಳು, ಕೆರೆಗಳ ಅಭಿವೃದ್ಧಿ
7. ಪ್ರತಿ ಮನೆಗೂ ಕುಡಿಯುವ ನೀರು, ಶೌಚಾಲಯ ನಿರ್ಮಾಣ
ಸಂಸದರ ಪ್ಲಸ್
* ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಣೆ
* ಕ್ಷೇತ್ರದಲ್ಲಿ ಆರು BJP ಶಾಸಕರು
* ಮಂಗಳೂರಿಗೆ ವಿಶೇಷ ವಂದೇ ಭಾರತ್ ರೈಲು
* ರಾಜ್ಯದ ಕಡಲನಗರಿ ಮಂಗಳೂರು
* ರಸ್ತೆ, ವಾಯು, ಜಲ ಸಾರಿಗೆ ರೈಲು ಸಾರಿಗೆಯ ರಾಜ್ಯದ ಏಕೈಕ ಜಿಲ್ಲೆ
* ವಿಶೇಷವಾಗಿ ದೈವಾರಾಧನೆ ಇರುವ ಜಿಲ್ಲೆ
* ಮೂರು ಬಾರಿ ನಳಿನ್ ಕುಮಾರ್ ಕಟೀಲು ಹ್ಯಾಟ್ರಿಕ್ ಜಯ
* ಬಿಜೆಪಿಯಿಂದ ಯಾರೇ ನಿಂತರೂ ಗೆಲುವೆನ್ನುವ ಕ್ಷೇತ್ರ
* ಬೂತ್ ಮಟ್ಟದಲ್ಲಿ ಹಿಂದೂತ್ವದ ಪ್ರಚಾರ
ಸಂಸದರ ಮೈನಸ್
* ಸರ್ವಧರ್ಮೀಯರ ನಂಬಿಕೆ ಗಳಿಸುವಲ್ಲಿ ವಿಫಲ
* ಪ್ರತಿ ತಾಲೂಕಲ್ಲೂ ಸಂಸದರ ಕಾರ್ಯ ಅಲ್ಪ
* ಕೋಮು ಪ್ರಚೋದನಕಾರಿ ಭಾಷಣಕ್ಕೆ ಕುಖ್ಯಾತಿ
* ವಿರೋಧಿ ಬಣದ ಮತಗಳು ಬಿಜೆಪಿಗೆ ವಿರುದ್ಧ ಸಾಧ್ಯತೆ
* ಕ್ಷೇತ್ರದಲ್ಲಿ ಯುಟಿ ಖಾದರ್ ಪರವಾದ ಅಲೆ ಸೃಷ್ಟಿ
* ಗ್ಯಾರಂಟಿ ಯೋಜನೆಯ ಜಾರಿ ಪರಿಣಾಮ ಸಾಧ್ಯತೆ
* ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಅವ್ಯವಸ್ಥೆ-ಜನಾಕ್ರೋಶ
ಮೋದಿ ಹೆಸ್ರಲ್ಲಿ ಈ ಸಲನೂ ಮಂಗಳೂರಲ್ಲಿ ಬಿಜೆಪಿ ಪಕ್ಷ ಲೋಕಸಭಾ ಚುನಾವಣೆ ಗೆಲ್ಲುವ ಉತ್ಸಾಹದಲ್ಲಿದೆ. ಆದರೆ ರಾಜ್ಯದಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಖುಷಿಯಲ್ಲಿರೋ
ಮಂಗಳೂರಿನ ಜನತೆ ಕೊನೆ ಹಂತದಲ್ಲಿ ಊಹೆಯನ್ನೇ ಬುಡಮೇಲು ಮಾಡಬಹುದು ಅಂತಿದೆ ಗ್ರೌಂಡ್ ರಿಪೋರ್ಟ್. ಈ ಮಧ್ಯೆ ಮೋದಿ ನಾಮಬಲ ಮತ್ತು ಅಯೋಧ್ಯೆಯ ಶ್ರೀರಾಮನ ಪ್ರಭಾವಳಿ ಹೆಚ್ಚಾಗಿ ಕಾಣಿಸುತ್ತಿದೆ.
ಬಿಜೆಪಿ ಪ್ಲಸ್
1. ಹಿಂದೂತ್ವದ ಭದ್ರ ಕೋಟೆ
2. ಮೋದಿ ಪರವಾದ ಅಲೆ
3.ಅಯೋಧ್ಯೆಯ ರಾಮ ಮಂದಿರ
4. ಹಿಂದೂ ಮತ ನಿರ್ಣಾಯಕ
5. ತಳಮಟ್ಟದ ಕಾರ್ಯಕರ್ತರ ಶ್ರಮ
ಬಿಜೆಪಿ ಮೈನಸ್
1. ಸಂಸದ ನಳಿನ್ ಕುಮಾರ್ ಬಗ್ಗೆ ಅಸಮಾಧಾನ
2. ನಳಿನ್ ಅಧಿಕಾರ ಅವಧಿಯಲ್ಲಿ ಗಮನಾರ್ಹ ಯೋಜನೆ ಇಲ್ಲ
3. ತಳಮಟ್ಟದ ಕಾರ್ಯಕರ್ತರಲ್ಲಿ ನಳಿನ್ ವಿರುದ್ಧ ಅಸಮಾಧಾನ
4. ಸಮರ್ಥ ಅಭ್ಯರ್ಥಿಗಾಗಿ ಕ್ಯಾಂಪೇನ್
5. ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಾಧನೆ
6. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಪರಿವಾರ ಟಿಕೆಟ್ ಬೇಡಿಕೆ
7. ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಬಣದಿಂದ ಟಿಕೆಟ್ ಬೇಡಿಕೆ
ಸಂಸದ ನಳಿನ್ ಕುಮಾರ್ ಕಟೀಲ್ ಸಾಧನೆಗಳು, ಕ್ಷೇತ್ರದಲ್ಲಿ ಭಾಜಪ ಪ್ಲಸ್ ಮತ್ತು ಮೈನಸ್ ನೋಡಿದ್ದಾಯಿತು. ಇವಾಗ ಕಾಂಗ್ರೆಸ್ ಪಕ್ಷದ ಕಡೆ ಕಣ್ಣು ಹಾಯಿಸೋಣ. ಕಾಂಗ್ರೆಸ್ ಪಕ್ಷಕ್ಕೂ ಕೂಡ ಪ್ರಬಲವಾದ
ನೆಲೆ ದಕ್ಷಿಣ ಕನ್ನಡ ಸಂಸತ್ ಕ್ಷೇತ್ರದಲ್ಲಿದೆ. ಹಾಗಾದ್ರೆ ವಿಷಯಗಳು ಏನೇನು ಅಂತ ಗ್ರಾಫಿಕ್ಸ್ ನೋಡೋಣ..
ಕಾಂಗ್ರೆಸ್ ಪ್ಲಸ್
1. ನಳಿನ್ ಕುಮಾರ್ ಬಗ್ಗೆ ವಿರೋಧ ಅಲೆಯು ಮತವಾಗಿ ಮಾರ್ಪಾಡು ನಿರೀಕ್ಷೆ
2. ಪಂಚ ಗ್ಯಾರಂಟಿ ಯೋಜನೆಗಳ ಲಾಭದ ನಿರೀಕ್ಷೆ
3. ಮುಸ್ಲಿಂ ಮತಗಳ ಕ್ರೋಢಿಕರಣ
4. ಹದಿನೈದು ವರ್ಷದಲ್ಲಿ ಅಭಿವೃದ್ಧಿ ಆಗದ ವಿಚಾರ ಚುನಾವಣಾ ಅಸ್ತ್ರ
5. ಸಾಫ್ಟ್ ಹಿಂದೂತ್ವ ಧೋರಣೆ
6. ಹೊಸ ಮುಖದ ನಿರೀಕ್ಷೆ
7. ಕಾಂಗ್ರೆಸ್‌ಗೂ ಒಂದು ಅವಕಾಶ ನೀಡುವ ಎಂಬ ಜನರ ಆಶಯ
ಕಾಂಗ್ರೆಸ್ ಮೈನಸ್
1. ಮೋದಿ ಹೆಸರಲ್ಲಿ ಲೋಕಸಭಾ ಚುನಾವಣೆ
2. ಅಭ್ಯರ್ಥಿ ಆಯ್ಕೆ ಬಗ್ಗೆ ಗೊಂದಲ
3. ಪ್ರಬಲ ಹಿಂದೂತ್ವದ ಅಲೆ
4. ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಗೆಲುವು
5. ಮೋದಿ ಅಲೆಯ ಎದುರು ಗೆಲ್ಲೋದು ಅಸಾಧ್ಯ ಎಂಬ ಭಾವನೆ
6. ಸಿದ್ದರಾಮಯ್ಯ, ಡಿಕೆಶಿ ಬಣದ ಆಕಾಂಕ್ಷಿಗಳ ಟಿಕೆಟ್ ಬೇಡಿಕೆ
7. ಕೆಲ ಕ್ಷೇತ್ರದಲ್ಲಿ ಒಗ್ಗಟ್ಟಿನ ಕೊರತೆ
ಹಾಗಾದ್ರೆ ಈ ಸಲ ಯಾರಿಗೆ ಟಿಕೆಟ್ ಸಿಗಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡರಲ್ಲೂ ತೀವ್ರವಾದ ಪೈಪೋಟಿ ಏರ್ಪಟ್ಟಿದೆ. ಕಡೆಗೆ ಹೈಕಮಾಂಡ್ ಶ್ರೀರಕ್ಷೆಯಿರೋ ವ್ಯಕ್ತಿ ಬಿಜೆಪಿಯಿಂದ ಸ್ಪರ್ಧಿಸಬಹುದು. ಆದ್ರೆ ರಾಜ್ಯ ಕಾಂಗ್ರೆಸ್ ಪರಿಸ್ಥಿತಿ ಕೊಂಚ
ಡಿಫರೆಂಟ್ ಇದೆ. ಇಲ್ಲಿ ಸಿದ್ದರಾಮಯ್ಯ ಬಣ ಮತ್ತು ಡಿಕೆಶಿವಕುಮಾರ್ ಬಣಗಳಿವೆ. ಕಡೆಗೆ ಯಾರ ಬಣದ ಕೈ ಮೇಲಾಗುತ್ತದೆ ಅನ್ನೋದು ಯಕ್ಷಪ್ರಶ್ನೆ.
ಇದನ್ನೂ ಓದಿ: Daily GK Quiz: ರಷ್ಯಾದಲ್ಲಿ ಯಾವ ಕರೆನ್ಸಿಯನ್ನು ಬಳಸಲಾಗುತ್ತದೆ?
ಬಿಜೆಪಿ ಟಿಕೆಟ್ ಆಕಾಂಕ್ಷಿಗಳು:
ನಳಿನ್ ಕುಮಾರ್ ಕಟೀಲ್
ಸತ್ಯಜಿತ್ ಸುರತ್ಕಲ್
ಅರುಣ್ ಕುಮಾರ್ ಪುತ್ತಿಲ
ಕ್ಯಾಪ್ಟನ್ ಬ್ರಿಜೇಶ್ ಚೌಟ
ರಾಮಚಂದ್ರ ಬೈಕಂಪಾಡಿ
ಕಾಂಗ್ರೆಸ್ ಆಕಾಂಕ್ಷಿಗಳು:
ಬಿ.ರಮಾನಾಥ ರೈ
ಪದ್ಮರಾಜ್ ಕುದ್ರೋಳಿ
ಬಿ.ಕೆ.ಹರಿಪ್ರಸಾದ್
ಮಿಥುನ್ ರೈ
ಇಫ್ತಿಕಾರ್ ಅಲಿ
ಇನಾಯತ್ ಅಲಿ
ಒಟ್ನಲ್ಲಿ ಮಂಗಳೂರು-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಬಿಜೆಪಿ ಮತದಾರ ಬೇಸರ ವ್ಯಕ್ತಪಡಿಸಿದ್ದಾನೆ. ಹೊಸ ಮುಖದ ನಿರೀಕ್ಷ ಕೂಡ ಹೆಚ್ಚಾಗಿದೆ. ಹೇಳಿ ಕೇಳಿ ಹಿಂದುತ್ವ ಬೀಡಿನಲ್ಲಿ ಹೊಸ ಮುಖಕ್ಕೆ ಮಣೆ ಹಾಕೋ
ಸಂಭವವೇ ಜಾಸ್ತಿಯಿದೆ. ಮೋದಿ ಅಲೆ, ಅಯೋಧ್ಯೆಯ ರಾಮಮಂದಿರವೇ ಪ್ರಧಾನ ವಿಚಾರವಾದರೂ ಅಚ್ಚರಿಪಡಬೇಕಿಲ್ಲ. ಆದೇ ರೀತಿ ಕಾಂಗ್ರೆಸ್ ಪಕ್ಷದ ತೀರ್ಮಾನ ಮೇಲೆ ಅಭ್ಯರ್ಥಿಯ ಗೆಲುವು-ಸೋಲು ನಿರ್ಧಾರವಾಗಲಿದೆ. ಯಾವುದಕ್ಕೂ ಇನ್ನೂ ಎಲೆಕ್ಷನ್
ದಿನಾಂಕ ಘೋಷಣೆಯಾಗಿಲ್ಲ. ಗುಪ್ತವಾಗಿ ನಡೀತಿರೋ ವಿವಿಧ ಲೆಕ್ಕಾಚಾರಗಳನ್ನ ಹಾಕಿಕೊಂಡಿರೋ ಪಕ್ಷಗಳು ಬಹಿರಂಗವಾಗಿ ಅಖಾಡಕ್ಕೆ ಇಳಿದಿಲ್ಲ. ಎಸ್‌ಡಿಪಿಐ ಕೂಡ ಇಲ್ಲಿ ಪ್ರಬಲವಾಗಿದ್ದು ತಮ್ಮದೇ ರೀತಿಯಲ್ಲಿ ಸಜ್ಜಾಗುತ್ತಿದೆ. ಎಲ್ಲದಕ್ಕೂ ಕೆಲವೇ ದಿನಗಳಲ್ಲಿ
ಉತ್ತರ ಸಿಗಲಿದೆ.
ದ.ಕ.ಜಿಲ್ಲೆಯಲ್ಲಿ ವಿಧಾನಸಭಾ ಕ್ಷೇತ್ರದ ಬಲಾಬಲ
ಮಂಗಳೂರು ದಕ್ಷಿಣ: ವೇದವ್ಯಾಸ ಕಾಮತ್ ( ಬಿಜೆಪಿ)
ಮಂಗಳೂರು ಉತ್ತರ: ಭರತ್ ಶೆಟ್ಟಿ (ಬಿಜೆಪಿ)
ಬಂಟ್ವಾಳ: ರಾಜೇಶ್ ನಾಯಕ್ ( ಬಿಜೆಪಿ)
ಬೆಳ್ತಂಗಡಡಿ: ಹರೀಶ್ ಪೂಂಜಾ ( ಬಿಜೆಪಿ)
ಸುಳ್ಯ: ಭಾಗೀರಥಿ ಮುರುಳ್ಯಾ (ಬಿಜೆಪಿ)
ಪುತ್ತೂರು: ಅಶೋಕ್ ರೈ (ಕಾಂಗ್ರೆಸ್)
ಉಳ್ಳಾಲ: ಯು. ಟಿ ಖಾದರ್ ( ಕಾಂಗ್ರೆಸ್)
2019ರಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಪಕ್ಷದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಭರ್ಜರಿ ಗೆಲುವು ದಾಖಲಿಸಿದ್ದರು. ಮಿಥುನ್ ರೈ ವಿರುದ್ಧ ಕಟೀಲ್ 2,74,621 ಲಕ್ಷ ಮತಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದ್ದರು.
ನಳಿನ್ ಕುಮಾರ್ ಕಟೀಲ್- 772754
ಮಿಥುನ್ ಎಂ.ರೈ- 499387
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಜಾತಿವಾರು ಲೆಕ್ಕಾಚಾರ
ಬಿಲ್ಲವ: 3.60 ಲಕ್ಷ
ಮುಸ್ಲಿಂ: 3.50 ಲಕ್ಷ
ಎಸ್ ಸಿ, ಎಸ್ ಟಿ: 2.80 ಲಕ್ಷ
ಗೌಡ: 2 ಲಕ್ಷ
ಬಂಟ್ಸ್: 1.25 ಲಕ್ಷ
ಕ್ರಿಶ್ಚಿಯನ್: 1 ಲಕ್ಷ
ಬ್ರಾಹ್ಮಣ: 1 ಲಕ್ಷ
ಕೊಂಕಣಿ: 1 ಲಕ್ಷ
ಇತರ: 3.50 ಲಕ್ಷ
ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿ ಯಾರು ಎಂಬ ಕುತೂಹಲ ಹೆಚ್ಚಾಗ್ತಿದೆ.
ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದರೂ, ಕಳೆದ ಮೂರು ದಶಕಗಳಿಂದ ಗೆಲ್ಲಲು ಸಾಧ್ಯವಾಗಿಲ್ಲ. ಕಳೆದ ಮೂರು ದಶಕಗಳಿಂದ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳೇ ಜಯ ಗಳಿಸುತ್ತಿದ್ದಾರೆ. 1989 ರಲ್ಲಿ ಚುನಾವಣೆಯಲ್ಲಿ ಗೆದ್ದ ಬಳಿಕ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದೇ ಇಲ್ಲ.
3 ದಶಕಗಳಿಂದ ಬಿಜೆಪಿಯದ್ದೇ ಪ್ರಾಬಲ್ಯ
* 1952 ರಿಂದ 1989ರ ತನಕ ಮಂಗಳೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು.
*1952ರಲ್ಲಿ ಕಾಂಗ್ರೆಸ್ ಪಕ್ಷದಿಂದ ಬೆನಗಲ್ ಶಿವರಾವ್ ಗೆದ್ದಿದ್ದರು.
* 1957ರಲ್ಲಿ ಕೆ ಆರ್ ಆಚಾರ್, 1962 ರಲ್ಲಿ ಅದೂರು ಶಂಕರ್ ಆಳ್ವ ಕಾಂಗ್ರೆಸ್ ನಿಂದ ಗೆದ್ದಿದ್ದರು
* 1967 ಸಿ ಮುತ್ತಣ್ಣ ಪುಣಚ, 1971ರಲ್ಲಿ ಕೆ ಕೆ ಶೆಟ್ಟಿ ಕಾಂಗ್ರೆಸ್ ನಿಂದ ಗೆದ್ದಿದ್ದರು.
* 1977, 1980, 1984, 1989 ರಲ್ಲಿ ಜನಾರ್ದನ ಪೂಜಾರಿ ಕಾಂಗ್ರೆಸ್ನಿಂದ ಜಯ ಸಾಧಿಸಿದ್ದರು.
* 1991ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಬಳಿಕ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲನ್ನು ಕಂಡಿತ್ತು.
ಆ ಬಳಿಕ ಯಾವ ಚುನಾವಣೆಯಲ್ಲಿಯೂ ಗೆಲುವು ಕಂಡಿಲ್ಲ.
* ಸತತ 8 ಬಾರಿ ಸೋಲನ್ನು ಅನುಭವಿಸಿರುವ ಕಾಂಗ್ರೆಸ್
* ಮತ್ತೆ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಲವು ಮುಖಂಡರ ಬಯಕೆ.
* ಮಾಜಿ ಸಚಿವರಾದ ಬಿ ರಮಾನಾಥ ರೈ, ವಿನಯಕುಮಾರ್ ಸೊರಕೆ, ಪದ್ಮರಾಜ್ ಪ್ರಬಲ ಆಕಾಂಕ್ಷಿಗಳು.
ಕಾಂಗ್ರೆಸ್ ನಿಂದ ಪ್ರಬಲ ಆಕಾಂಕ್ಷಿಗಳು ಯಾರು..?
ರಮಾನಾಥ ರೈ:
* ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ಮುಖಂಡ ಬಿ ರಮಾನಾಥ ರೈ ಕಾಂಗ್ರೆಸ್ ಪಕ್ಷದ ಕಟ್ಟಾಳು ನಾಯಕ.
* ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 9 ಬಾರಿ ಸ್ಪರ್ಧಿಸಿದ್ದಾರೆ.
* ಇಲ್ಲಿ ಗೆದ್ದು ಸಚಿವ ಕೂಡ ಆಗಿದ್ದರು.
* ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಸೋಲುಂಡಿದ್ದರು.
* ಇದೀಗ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. * ಮಂಗಳೂರು ಲೋಕಸಭಾ ಕ್ಷೇತ್ರದಿಂದ ತಮಗೆ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ.
* ಇವರು ಕರಾವಳಿಯ ಪ್ರಮುಖ ಸಮುದಾಯವಾಗಿರುವ ಬಂಟ ಸಮುದಾಯಕ್ಕೆ ಸೇರಿದವರು.
ವಿನಯಕುಮಾರ್ ಸೊರಕೆ:
* ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಸಕ್ತರಾಗಿದ್ದಾರೆ. * ವಿನಯಕುಮಾರ್ ಸೊರಕೆ ಮೂಲ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು.
* ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿದ್ದರು.
* ಅಲ್ಲಿನ ಸೋಲಿನ ಬಳಿಕ ಉಡುಪಿ ಜಿಲ್ಲೆಗೆ ಹೋಗಿ ಉಡುಪಿಯಲ್ಲಿ ಸಂಸದರಾಗಿದ್ದರು.
* ಸಚಿವರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
* ಆದರೆ ಈ ಬಾರಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಸಕ್ತರಾಗಿದ್ದಾರೆ.
* ಇವರು ಕರಾವಳಿಯ ಪ್ರಮುಖ ಸಮುದಾಯವಾಗಿರುವ ಬಿಲ್ಲವ ಸಮುದಾಯಕ್ಕೆ ಸೇರಿದವರು.
ಪದ್ಮರಾಜ್:
* ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ವಕೀಲ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆಸಕ್ತಿ.
* ಚುನಾವಣಾ ರಾಜಕೀಯಕ್ಕೆ ಅವರು ಹೊಸ ಮುಖ.
* ಕಳೆದ ವಿಧಾನಸಭಾ ಚುನಾವಣೆಯ ವೇಳೆ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಸಕ್ತರಾಗಿದ್ದರು.
* ಆದರೆ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ.
* ಇದೀಗ ಮತ್ತೆ ಲೋಕಸಭೆಗೆ ಸ್ಪರ್ಧಿಸಲು ಪ್ರಯತ್ನ.
* ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಆಪ್ತ.
* ಪದ್ಮರಾಜ್ ಕರಾವಳಿಯ ಪ್ರಮುಖ ಸಮುದಾಯವಾಗಿರುವ ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ಕುತೂಹಲ ಗರಿಗೆದರಿದೆ. ಕಮಲ ಪಕ್ಷ ಪ್ರಾಬಲ್ಯದ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿ ಯಾರು? ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.
* ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ಬಿಜೆಪಿ ಜಯ ಗಳಿಸುತ್ತಿದೆ.
* ಧನಂಜಯ ಕುಮಾರ್, ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳಾಗಿ ಗೆದ್ದಿದ್ದಾರೆ.
* 1991 ರಿಂದ ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸತತವಾಗಿ ಜಯಗಳಿಸುತ್ತ ಬಂದಿದ್ದಾರೆ.
* 1991 ರಿಂದ 1999ರ ವರೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ ಧನಂಜಯ ಕುಮಾರ್ ಗೆದ್ದಿದ್ದರು.
* 2004ಕ್ಕೆ ಡಿ ವಿ ಸದಾನಂದ ಗೌಡ, 2009 ರಿಂದ 2019ರ ವರೆಗೆ ನಳಿನ್ ಕುಮಾರ್ ಕಟೀಲ್ ಅಭ್ಯರ್ಥಿಯಾಗಿ ಜಯ .
* ಮೂರು ಬಾರಿ ಬಿಜೆಪಿಯಿಂದ ಗೆದ್ದಿರುವ ನಳಿನ್ ಕುಮಾರ್ ಕಟೀಲ್ ನಾಲ್ಕನೇ ಬಾರಿಗೆ ಸ್ಪರ್ಧಿಸಲು ಇಂಗಿತ.
ನಳಿನ್ ಕುಮಾರ್ ಕಟೀಲ್:
* ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು 3 ಬಾರಿ ವಿಜಯಿಯಾಗಿದ್ದಾರೆ.
* ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. *ನಾಲ್ಕನೇ ಬಾರಿಗೆ ಸ್ಪರ್ಧಿಸಲು ಉತ್ಸುಕರಾಗಿದ್ದು ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ.
ಕ್ಯಾ.ಬ್ರಜೇಶ್ ಚೌಟ:
* ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ.
* ಕ್ಯಾ. ಬ್ರಜೇಶ್ ಚೌಟ ಸದ್ಯ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಲ್ಲೊಬ್ಬರು.
* ಯಡಿಯೂರಪ್ಪ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಬ್ರಜೇಶ್ ಚೌಟ
* 2019ರಲ್ಲಿಯೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.
* ಈ ಬಾರಿ ನಳಿನ್ ಕುಮಾರ್ ಕಟೀಲ್ಗೆ ಬಿಜೆಪಿ ಟಿಕೆಟ್ ಕೈತಪ್ಪಿದರೆ ಬ್ರಜೇಶ್ ಚೌಟ ಅವರಿಗೆ ಸಿಗುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: ಲೋಕಸಭಾ ಚುನಾವಣೆ ಹೊತ್ತಲ್ಲಿಯೇ ಅಭಿವೃದ್ಧಿ ಜಟಾಪಟಿ
ಸತ್ಯಜಿತ್ ಸುರತ್ಕಲ್:
* ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಸತ್ಯಜಿತ್ ಸುರತ್ಕಲ್.
* 2019ರಲ್ಲಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದರು.
* ಕರಾವಳಿಯಲ್ಲಿ ಪ್ರಬಲ ಸಮುದಾಯವಾಗಿರುವ ಬಿಲ್ಲವ ಸಮುದಾಯದವರು
* ಸತ್ಯಜಿತ್ ಸುರತ್ಕಲ್ ಒಂದೊಮ್ಮೆ ಹಿಂದುತ್ವದ ಹೆಸರಿನಲ್ಲಿ ಪ್ರಬಲ ಹೋರಾಟ ಮಾಡಿದ್ದರು.
* ಈ ಬಾರಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಅರುಣ್ ಕುಮಾರ್ ಪುತ್ತಿಲ:
* ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.
* ಆದರೆ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಎರಡನೇ ಸ್ಥಾನಕ್ಕೆ ಬಂದಿದ್ದರು.
* ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.
* ಅವರು ಮತ್ತೆ ಬಿಜೆಪಿಗೆ ಬರಲು ಉತ್ಸುಕರಾಗಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಗಮನಾರ್ಹ ಮತಗಳನ್ನು ಪಡೆದಿದ್ದ SDPI ಅಭ್ಯರ್ಥಿಗಳು:
* 2019ರ ಲೋಕಸಭಾ ಚುನಾವಣೆಯಲ್ಲಿ SDPI ಅಭ್ಯರ್ಥಿ ಇಲಿಯಾಸ್ ತುಂಬೆ 46,839 ಮತಗಳನ್ನು ಪಡೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು.
* ಅದಕ್ಕಿಂತ ಹಿಂದಿನ ಚುನಾವಣೆಯಲ್ಲಿ ಹನೀಫ್ ಕೊಡಾಜೆ ಕೂಡಾ ಸುಮಾರು 27ಸಾವಿರಕ್ಕೂ ಹೆಚ್ಚಿನ ಮತವನ್ನು ಪಡೆದಿದ್ದರು.
* ಇಲ್ಲಿ ಗಮನಿಸಬೇಕಾದ ವಿಚಾರವೇನಂದರೆ, ಈ ಎಲ್ಲಾ ಮತಗಳು ಬಹುತೇಕ ಕಾಂಗ್ರೆಸ್ ಬುಟ್ಟಿಯಿಂದ ಬಂದಿರುವಂತದ್ದು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಎಚ್ಚರವಹಿಸ ಬೇಕಾಗಿರುವ ಪ್ಲ್ಯಾನ್ ಗಳಲ್ಲಿ ಇದೂ ಒಂದು.
2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯ ನಂತರ ಹುಟ್ಟಿಕೊಂಡಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 2009, 2014 ಮತ್ತು 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯೇ ಗೆಲುವು ಸಾಧಿಸುತ್ತಾ ಬಂದಿದೆ. ಕ್ಷೇತ್ರ ವಿಂಗಡಣೆಗೆ ಮುನ್ನ ಈ ವ್ಯಾಪ್ತಿಯ ಅಸೆಂಬ್ಲಿ ಕ್ಷೇತ್ರಗಳು ಚಿಕ್ಕಮಗಳೂರು ಮತ್ತು ಉಡುಪಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದವು.ಈಗ ಜಿಲ್ಲಾ ವ್ಯಾಪ್ತಿಯ ಎಲ್ಲಾ ಅಸೆಂಬ್ಲಿ ಕ್ಷೇತ್ರಗಳು ಮಂಗಳೂರು, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಮೂಡಬಿದರೆ, ಸುಳ್ಯ ) ಈಗ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಎಂಟು ಕ್ಷೇತ್ರಗಳಲ್ಲಿ ಪುತ್ತೂರು ಮತ್ತು ಮಂಗಳೂರು ಹೊರತು ಪಡಿಸಿ ಎಲ್ಲವೂ ಬಿಜೆಪಿಯ ತೆಕ್ಕೆಯಲ್ಲಿದೆ.
ಸಂಘ ಪರಿವಾರದ ಭದ್ರನೆಲೆ, ಶಿಸ್ತುಬದ್ದ ಪ್ರಚಾರ, ಬಿಜೆಪಿಯ ಶಾಸಕರೇ ಹೆಚ್ಚಿರುವ ಕಾರಣ ಈ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟಿಗಾಗಿ ತೀರ್ವ ಪೈಪೋಟಿ ನಡೆದ ಉದಾಹರಣೆಗಳು ಕಮ್ಮಿ. ಕಳೆದ ಮೂರು ಚುನಾವಣೆಯಲ್ಲಿ ಎರಡು ಬಾರಿ ಜನಾರ್ಧನ ಪೂಜಾರಿ ಮತ್ತು ಒಮ್ಮೆ ಮಿಥುನ್ ರೈ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿ ಸೋತಿದ್ದರು.ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಎಷ್ಟು ಪೈಪೋಟಿ ಇದೆಯೋ ಅದೇ ರೀತಿ ಕಾಂಗ್ರೆಸ್ಸಿನಲ್ಲೂ ಕಾಣುತ್ತಿದೆ. ಸತತ ಸೋಲಿನಿಂದ ಹೊರಬರಲು ಕಾಂಗ್ರೆಸ್ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ.
ಏನೇ ಆಗಲಿ. ದೇಶದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದು. ಕೇಸರಿ ಕೋಟೆಯನ್ನು ಒಡೆದು ಕೈ ಬಾವುಟ ಹಾರಿಸಲು ಹಸ್ತ ಪಡೆ ರೆಡಿಯಾಗುತ್ತಾ.? ಮತದಾರಪ್ರಭು ಕೆಲವೇ ದಿನಗಳಲ್ಲಿ ಉತ್ತರ ನೀಡಲಿದ್ದಾನೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.