ಲೋಕಸಭಾ ಚುನಾವಣೆ ಅಂದ್ರೆ ಪ್ರಜಾಪ್ರಭುತ್ವದ ಹಬ್ಬ. ದೇಶಕ್ಕೆ ಪ್ರಧಾನ ಮಂತ್ರಿಯನ್ನ ಆರಿಸೋಕೆ ಜನಪ್ರತಿನಿಧಿಗಳನ್ನು ಚುನಾಯಿಸಿ ಕಳುಹಿಸುವ ಗುರುತರವಾದ ಕೆಲಸ. ಕಾನೂನು, ಆಡಳಿತ ಮತ್ತು ಸಂವಿಧಾನಬದ್ಧ ಸಂಸದರ ಚುನಾವಣೆಯಲ್ಲಿ ಭಾಗಿಯಾಗುವುದು ಜವಾಬ್ದಾರಿ ಮತ್ತು ಹೊಣೆಗಾರಿಕೆ ಕೂಡ. ಸಂಸದರೆಂಬುದೇ ಮಹತ್ವದ ಗೌರವ ಮತ್ತು ತನ್ನದೇ ಆದ ಘನತೆಯನ್ನ ಉಳಿಸಿಕೊಂಡಿರುವ ಸಂವಿಧಾನಬದ್ಧ ಅಧಿಕಾರ. ಹೀಗಾಗಿ ಸಂಸದರನ್ನ ಆಯ್ಕೆ ಮಾಡಲು ಮತದಾರ ಪ್ರಭುಗಳು ಕೂಡ ಬಹು ಎಚ್ಚರಿಕೆಯಿಂದ ಸೈದ್ಧಾಂತಿಕ ಮತ್ತು ಅಭಿವೃದ್ಧಿಯ ಮಾನದಂಡಗಳನ್ನು ಬಳಸಿ ಹಕ್ಕನ್ನು ಚಲಾಯಿಸುತ್ತಾನೆ. ಅದೇ ರೀತಿ ಸಂಸತ್ ಪ್ರವೇಶ ಬಯಸಿ ರಾಜಕೀಯ ಪಕ್ಷಗಳ ಮುಖಂಡರು ಕೂಡ ನಾನಾ ರೀತಿಯ ಲೆಕ್ಕಚಾರ ನಡೆತ್ತಾರೆ. ತಮ್ಮದೇ ರೀತಿಯಲ್ಲಿ ಮತದಾರರನ್ನು ಮತದಾರ ಪ್ರಭುಗಳ ಚಿಂತನೆಗಳನ್ನ ಕೂಡಿಸಿ ಗುಣಿಸಿ ಭಾಗಾಕಾರ ಮಾಡ್ತಾರೆ. ಇಲ್ಲಿ ಒಮ್ಮೆ ಮತದಾರನ ನಾಡಿಮಿಡಿತ ಅರಿತ ವ್ಯಕ್ತಿ ದೆಹಲಿ ಪ್ರವೇಶಿಸಿ 5 ವರ್ಷ ಸಂಸದರಾಗಿ ಅಧಿಕಾರ ಚಲಾಯಿಸುತ್ತಾರೆ. ಈ ರೀತಿಯ ಸಂಸತ್‌ ಅಭ್ಯರ್ಥಿ, ಮತದಾರರ ಮನದಾಳ ಮತ್ತು ಕ್ಷೇತ್ರಗಳ ಲೆಕ್ಕಾಚಾರದ ಸಮಗ್ರ ಮಾಹಿತಿಯನ್ನು ವೀಕ್ಷಕರ ಮುಂದಿಡುವುದೇ ಲೋಕ ಲೆಕ್ಕಾಚಾರ, ಸಂಸದರ ರಿಪೋರ್ಟ್‌ ಕಾರ್ಡ್‌..  


COMMERCIAL BREAK
SCROLL TO CONTINUE READING

ಲೋಕಸಭೆ ಚುನಾವಣೆಗೆ ಕೆಲವು ದಿನಗಳು ಬಾಕಿ, ದಿನಾಂಕ ಘೋಷಣೆಗೆ ದಿನಗಳು ಸಮೀಪಿಸುತ್ತಿರುವಂತೆ ಕೋಲಾರ ಮೀಸಲು ಕ್ಷೇತ್ರಕ್ಕೆ  ಟಿಕೆಟ್‌ ಆಕಾಂಕ್ಷಿಗಳು ದಿನೇದಿನೇ ಹೆಚ್ಚುತ್ತಲೇ ಇದೆ, ಕಾಂಗ್ರೆಸ್,  ಜೆಡಿಎಸ್ , ಬಿಜೆಪಿ ಪಕ್ಷದ ಅಕಾಂಕ್ಷಿಗಳು ಟಿಕೆಟ್‌ ಪಡೆಯಲು ತೆರೆಮರೆಯಲ್ಲಿ ಭಾರಿ ಪೈಪೋಟಿಯೂ ನಡೆಸುತ್ತಿದ್ದಾರೆ. ಹಾಲು, ರೇಷ್ಮೆ ಮತ್ತು ತರಕಾರಿಗಳಿಗೆ ಪ್ರಸಿದ್ದಿ ಪಡೆದಿರುವ ಕ್ಷೇತ್ರ ಕೋಲಾರ. ಈ ಕ್ಷೇತ್ರದಲ್ಲಿ ಎಸ್ಪಿ,ಎಸ್ಟಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮೀಸಲು ಕ್ಷೇತ್ರವಾಗಿದೆ. ಕೋಲಾರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು ಮತ್ತು ಚಿಕ್ಕಬಳ್ಳಾಪುರದ 2 ಕ್ಷೇತ್ರಗಳು ಸೇರಿ ಒಟ್ಟು 8 ಕ್ಷೇತ್ರಗಳು ಲೋಕಸಭಾ ವ್ಯಾಪ್ತಿಗೆ ಬರಲಿದೆ. ಅಂದ್‌ ಹಾಗೆ ಕೋಲಾರ ಕ್ಷೇತ್ರವನ್ನು ಬಿಜೆಪಿ ಜೊತೆಗಿನ ಮೈತ್ರಿ ಕಾರಣಕ್ಕೆ ಜೆಡಿಎಸ್‌ ಬೇಡಿಕೆಯಿಟ್ಟಿದೆ. ಏಕೆಂದರೆ ಇಲ್ಲಿ ಒಕ್ಕಲಿಗರ ಮತಗಳು ಕೂಡ ನಿರ್ಣಾಯಕ.


ಕ್ಷೇತ್ರ : ಕೋಲಾರ
ಸಂಸದರು : ಮುನಿಸ್ವಾಮಿ, ಕಾಂಗ್ರೆಸ್
ಪಡೆದ ಮತಗಳು : 709,165    (%56.35)
ಸಮೀಪದ ಪ್ರತಿಸ್ಪರ್ಧಿ : KH ಮುನಿಯಪ್ಪ, INC
ಅಸೆಂಬ್ಲಿ ಕ್ಷೇತ್ರಗಳ ಸಂಖ್ಯೆ : 08
ಒಟ್ಟು ಮತದಾರರು : 12,59,093    


ಮುನಿಸ್ವಾಮಿ ಪಾಸಿಟಿವ್‌ 


1. ಸಂಸದರ ಮೇಲೆ ಸ್ವಪಕ್ಷೀಯರ ವಿರೋಧ
2. 8 ಅಸೆಂಬ್ಲಿ ಕ್ಷೇತ್ರದಲ್ಲಿ ಶೂನ್ಯ ಸಂಪಾದನೆ
3. ಪ್ರಧಾನಿ ನರೇಂದ್ರ ಮೋದಿ ಹವಾ 
4. ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು
5. ಕಾಂಗ್ರೆಸ್‌ ಪಕ್ಷದಲ್ಲಿ ಗುಂಪುಗಾರಿಕೆ 


ಮುನಿಸ್ವಾಮಿ ನೆಗೆಟಿವ್‌  


1. ಮುಂಗೋಪ, ವಿಪರೀತ ಮಾತು
2. ಸ್ಥಳೀಯ ಮಟ್ಟದದಲ್ಲಿ ರಾಜಕೀಯ
3. ಕ್ಷೇತ್ರದಲ್ಲಿ ಅತಿಯಾದ ಹಸ್ತಕ್ಷೇಪ
4. ಶಾಸಕರ ಜೊತೆ ಸಮನ್ವಯ ಕೊರತೆ
5. ಮತ ಹಿಡಿದಿಟ್ಟುಕೊಳ್ಳುವಲ್ಲಿ ವಿಫಲ
6. ರಾಷ್ಟ್ರ ನಾಯಕರ ಮೇಲೆ ಅವಲಂಬನೆ


ಈ ಬಾರಿಯ ರಣಕಣ 


1. ಕೆ.ಎಚ್ ಮುನಿಯಪ್ಪ, ಕಾಂಗ್ರೆಸ್
2. ಚಿಕ್ಕಪೆದ್ದಣ್ಣ, ಕಾಂಗ್ರೆಸ್
3. ಸಿ.ಎ.ಮುನಿಯಪ್ಪ, ಕಾಂಗ್ರೆಸ್‌
4. ಡಾ.ಬಿ.ಸಿ.ಮುದ್ದುಗಂಗಾಧರ್‌,ಕಾಂಗ್ರೆಸ್
5. ಮುನಿಸ್ವಾಮಿ, ಬಿಜೆಪಿ/ಜೆಡಿಎಸ್‌
5. B.V ಮಹೇಶ್‌, ಬಿಜೆಪಿ/ಜೆಡಿಎಸ್
6. ಓಂ ಚಲಪತಿ, ಬಿಜೆಪಿ/ಜೆಡಿಎಸ್


ಕೋಲಾರ ಲೋಕಸಭಾ ಕ್ಷೇತ್ರದ ಇತಿಹಾಸ :


ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 1984 ರಲ್ಲಿ ಡಾ.ವೆಂಕಟೇಶ್ ಜೆಡಿಎಸ್ ಪಕ್ಷದಿಂದ ಜಯಗೊಳಿಸಿದ ನಂತರ ಅಲ್ಲಿಂದ ಈ ಕ್ಷೇತ್ರ ಕಾಂಗ್ರೆಸ್ ಮಾಯವಾಗಿದೆ. 1989ರಿಂದ 8 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಕ್ಷೇತ್ರದಲ್ಲಿ 1984ರಲ್ಲಿ ಡಾ.ವೆಂಕಟೇಶ್ ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಗೊಂಡ ನಂತರ 1989ರಲ್ಲಿ ರಾಮಕೃಷ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದರು. ತದ ನಂತರ ಬಂದ ಉಪಚುನಾವಣೆಯಲ್ಲಿ ಅಂದರೆ 1991ರಲ್ಲಿ ಕೆ.ಎಚ್.ಮುನಿಯಪ್ಪ ಸ್ಪರ್ಧೆ ಸ್ಪರ್ಧಿಸಿ ಸತತವಾಗಿ 7 ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಕೋಲಾರವನ್ನ ಕಾಂಗ್ರೇಸ್ ನ ಭದ್ರಕೋಟೆಯನ್ನಾಗಿ ಮಾಡಿತ್ತು. ನಂತರ ಅವರು ಕಳೆದ 2019 ರ ಚುನಾವಣೆಯಲ್ಲಿ  ಬಿಜೆಪಿ ವಿರುದ್ದ ಸೋಲನ್ನ ಕಾಣುವ ಮೂಲಕ ಕಾಂಗ್ರೇಸ್ ನ ಭದ್ರಕೋಟೆಗೆ ಛಿತ್ರಿಸುವಂತೆ ಆಗಿತ್ತು.


ಇನ್ನು ಈ‌ ಬಾರಿಯೂ ಕೆ.ಎಚ್‌.ಮುನಿಯಪ್ಪ ಅವರಿಗೆ ಟಿಕೆಟ್‌ ನೀಡುವಂತೆ ಬೆಂಬಲಿಗರು, ಅಭಿಮಾನಿಗಳು ಒತ್ತಡ ಹೇರುತ್ತಿರುವ ಜೊತೆಗೆ ಹೈಕಮಾಂಡ್ ಸಹ ಕೆ.ಎಚ್.ಪರ ಒಲವು ತೋರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.ಕೆ.ಎಚ್.ಮುನಿಯಪ್ಪ ಜೊತೆಗೆ ಮುನಿಯಪ್ಪ ಅಳಿಯ ಕೆ.ಜಿ.ಚಿಕ್ಕಪೆದ್ದಣ್ಣ ಕೂಡ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಇವರಿಬ್ಬರ ಹೆಸರು ಮುನ್ನೆಲೆಯಲ್ಲಿದ್ದರೆ, ದಲಿತ ಹೊರಾಟಗಾರ ಸಿ.ಎ.ಮುನಿಯಪ್ಪ, ಡಾ.ಬಿ.ಸಿ.ಮುದ್ದು ಗಂಗಾಧರ್‌, ಕಲಾವಿದ ಮದನ್‌ ಪಟೇಲ್‌, ಸೇರಿದಂತೆ ಹಲವರು ಟಿಕೆಟ್‌ಗೆ ದುಂಬಾಲು ಬಿದಿದ್ದಾರೆ. ಇನ್ನು  1991ರಿಂದ ಸತತ ಏಳು ಸಲ ಗೆಲುವು ಸಾಧಿಸಿದ್ದ ಅವರು 2019ರ ಚುನಾವಣೆಯಲ್ಲಿ ಬಿಜೆಪಿಯ ಎಸ್‌.ಮುನಿಸ್ವಾಮಿ ಎದುರು ಮೊದಲ ಸೋಲು ಕಂಡಿದ್ದರು. ಇದಕ್ಕೆ ಎರಡು ಮುಖ್ಯ ಕಾರಣಗಳಿವೆ, ಒಂದು ಎಲ್ಲೆಡೆ ಇದ್ದಂತಹ ಮೋದಿ ಅವರ ಹವಾ, ಇದರೊಂದಿಗೆ ಜಿಲ್ಲೆಯ ಕಾಂಗ್ರೇಸ್ ನಾಯಕರುಗಳ ಅಸಮಧಾನ. ಈ ಹಿನ್ನಲೆ ಜಿಲ್ಲೆಯ ಕೆಲ ಕಾಂಗ್ರೇಸ್ ನಾಯಕರುಗಳು ಸೇರಿ ಘಟಬಂದನ್ ಟೀಂ ಒಂದನ್ನ ನಿರ್ಮಿಸಿಕೊಂಡು ಕೆ.ಎಚ್.ಮುನಿಯಪ್ಪ ವಿರುದ್ದ ಕೆಲಸ ಮಾಡಿದ್ರು. ಈ ಹಿನ್ನಲೆ ಕಾಂಗ್ರೇಸ್ ಭದ್ರಕೋಟೆಯಾಗಿದ್ದ ಕೋಲಾರ ಬಿಜೆಪಿ ಪಾಲಾಗಬೇಕಾಯಿತು. 


ಇನ್ನೂ ಹಾಲಿ ಶಾಸಕರು ಸಚಿವರು ಆಗಿರುವ ಕೆ.ಎಚ್.ಮುನಿಯಪ್ಪ ಅವತು ಈ ಬಾರಿಯೂ ಸಹ ಲೋಕಫೈಟ್ ನಲ್ಲಿ ಕಣಕ್ಕಿಳಿಯುವ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ‌ ಹೀಗಾಗಿ ಜಿಲ್ಲೆಯಲ್ಲಿ ದೇವಸ್ಥಾನ, ಮಸೀದಿ ಅಂತ ಟೆಂಪಲ್ ರನ್ ಶುರು ಮಾಡಿದ್ದಾರೆ‌. ಅಲ್ಲದೆ ಈ ಹಿಂದೆ ಸ್ವಪಕ್ಷೀಯರಿಂದಲೇ ಸೋಲನ್ನ ಕಂಡ  ಇವರು ಈ ಬಾರಿ ಘಟಬಂಧನ್ ನಾಯಕರಲ್ಲಿ ಕೆ.ಎಚ್.ಮುನಿಯಪ್ಪ ಪರ ಒಲವು ತೋರಿದ್ದಾರೆ. 


ಇನ್ನೂ ಇದರ ಮಧ್ಯೆ ಅವರ ಅಳಿಯ ಚಿಕ್ಕಪೆದ್ದಣ್ಣ ಟಿಕೆಟ್‌ ಕೋರಿ ಅರ್ಜಿ ಸಲ್ಲಿಸಿರುವುದು ಮತ್ತೊಂದು ಬೆಳವಣಿಗೆ. ಕೋಲಾರ ಲೋಕಸಭೆ ಕ್ಷೇತ್ರಕ್ಕೆ ಸೇರಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೋಡಿಗಲ್‌ ಗ್ರಾಮದ ಚಿಕ್ಕಪೆದ್ದಣ್ಣ ಕಂದಾಯ ಇಲಾಖೆಯ ಉದ್ಯೋಗಿ. ಹಿರಿಯ ಉಪನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುನಿಯಪ್ಪ ಅವರ ಪುತ್ರಿ ನಂದಿನಿ ಅವರನ್ನು ವಿವಾಹವಾಗಿದ್ದಾರೆ. ಮಾವನ ಜೊತೆ ರಾಜಕೀಯ ಒಡನಾಟ ಇಟ್ಟುಕೊಂಡಿರುವ ಅವರೀಗ ತೆರೆಮರೆಯಲ್ಲಿ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿರುವುದು ಗೊತ್ತಾಗಿದೆ.


‘ಒಂದೋ ಮುನಿಯಪ್ಪ ಅವರಿಗೆ ಟಿಕೆಟ್‌ ನೀಡಬೇಕು. ಇಲ್ಲವೇ ಅವರು ಸೂಚಿಸಿದವರನ್ನು ಅಭ್ಯರ್ಥಿ ಮಾಡಬೇಕು’ ಎಂಬುದು ಮುನಿಯಪ್ಪ ಬೆಂಬಲಿಗರ ಒತ್ತಾಯವೂ ಆಗಿದೆ. ಹೈಕಮಾಂಡ್‌ ಕೂಡ ಮುನಿಯಪ್ಪ ಅವರ ಅಭಿಪ್ರಾಯ ಕೋರಿರುವುದು ಗೊತ್ತಾಗಿದೆ. ಇನ್ನೂ ಘಟಬಂದನ್ ಟೀಂ ನಲ್ಲಿನ ಕೆಲವರು ತಮ್ಮದೇ ಆದ ಅಭ್ಯರ್ಥಿಯನ್ನ ಕಣಕ್ಕೆ ಇಳಿಸುವುದಕ್ಕೂ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇವರೊಂದಿಗೆ ಮುದ್ದುಗಂಗಾಧರ್ ಸೇರಿದಂತೆ ಸುಮಾರು 13 ಜನರ ಆಕಾಂಕ್ಷಿಗಳ ಪಟ್ಟಿ ಕಾಂಗ್ರೇಸ್ ಗೆ ಸೇರಿದೆ.  


ಇನ್ನು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಪಕ್ಷ ಕೋಲಾರ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕೇಳಿರುವುದು ಬಿಜೆಪಿ ಪಕ್ಷಕ್ಕೆ ತಲೆಬಿಸಿ ಮಾಡಿದೆ. ಸದ್ಯ ಹಾಲಿ ಸಂಸದ ಎಸ್.ಮುನಿಸ್ವಾಮಿ ಇದ್ದರೂ ಸಹ ಮತಗಳಿಕೆ ಆದಾರದ ಮೇಲೆ ಮತ್ತು ಶಾಸಕರುಗಳ ಸಂಖ್ಯೆಯ ಮೇಲೆ ಬಿಟ್ಟುಕೊಡುವಂತೆ ಬೇಡಿಕೆ ಇಟ್ಟಿದೆ. 


2023 ರ ಮೇನಲ್ಲಿ ನಡೆದಿದ್ದ ವಿಧಾನಸಭೆಯ ಚುನಾವಣೆಯಲ್ಲಿ ಲೋಕಸಭೆ ವ್ಯಾಪ್ತಿಯಲ್ಲಿನ ತನ್ನ ಸಾಧನೆ ಮುಂದಿಟ್ಟುಕೊಂಡು ಪಟ್ಟು ಹಿಡಿದಿದೆ. ಕ್ಷೇತ್ರದಲ್ಲಿ ಪರಿಶಿಷ್ಟರ ಬಳಿಕ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೆಚ್ಚಿರುವ ಅಂಶವನ್ನೂ ಹೇಳಿಕೊಳ್ಳುತ್ತಿದೆ. 
ಇನ್ನು ಅಭ್ಯರ್ಥಿ ಆಯ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠರು ಸಭೆ ನಡೆಸಿ ಕೋಲಾರ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಮುಖಂಡರಿಂದ ಸಲಹೆ ಸ್ವೀಕರಿಸಿದ್ದಾರೆ. 2023ರ ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದು, ಒಟ್ಟಾರೆ ಎಂಟು ಕ್ಷೇತ್ರಗಳಿಂದ 4.71 ಲಕ್ಷ ಮತ ಪಡೆದಿದೆ. ಐದು ಕ್ಷೇತ್ರಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಒಟ್ಟು 5.80 ಲಕ್ಷ ಮತ ಗಳಿಸಿದೆ. ಇನ್ನು  ಜೆಡಿಎಸ್‌ಗೆ ಈ ಬಾರಿ ಟಿಕೆಟ್‌ ಲಭಿಸಿದರೆ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್‌, ದೇವನಹಳ್ಳಿ ಕ್ಷೇತ್ರದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಬಂಗಾರಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಮಲ್ಲೇಶ್‌ ಬಾಬು ಕಣಕ್ಕಿಳಿಸಲು ಪಕ್ಷದ ವರಿಷ್ಠರು ಯೋಜನೆ ರೂಪಿಸುತ್ತಿದ್ದಾರೆ. ಇನ್ನು ಹಾಲಿ ಸಂಸದ ಮುನಿಸ್ವಾಮಿ ಸಹ ಟಿಕೆಟ್ ಸಿಗುವುದೆಂಬ ಅತ್ಮವಿಶ್ವಾಸದಲ್ಲಿದ್ದಾರೆ. ಸಂಸದರ ಜೊತೆ ಈ ಬಾರಿ ಬಂಗಾರಪೇಟೆಯ ಮಾಜಿ ಶಾಸಕ ಪುತ್ರ ಬಿ.ಪಿ.ವೆಂಕಟಮುನಿಯಪ್ಪ ಅವರ ಪುತ್ರ ಬಿ.ವಿ.ಮಹೇಶ್ ಸಹ ಟಿಕೆಟ್ ಕೇಳುತ್ತಿರುವುದು ಕುತೂಹಲ ಮೂಡಿಸಿದೆ.


ಒಟ್ಟಾರೆ ಕೋಲಾರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾವು ಹೆಚ್ಚುತ್ತಿದ್ದು,  ಟಿಕೆಟ್ ಪಡೆಯಲು ಆಕಾಂಕ್ಷಿಗಳು ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದು. ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ಕೊಡುಬೇಕೆಂಬ ಲೆಕ್ಕಚಾರದಲ್ಲಿದ್ದಾರೆ, ಜೆಡಿಎಸ್–ಬಿಜೆಪಿ ವರಿಷ್ಠರು ಯಾರಿಗೆ ಟಿಕೆಟ್ ಕೊಡುತ್ತಾರೆ ಎಂಬ ಕುತೂಹಲ ದಲ್ಲಿದ್ದು ಒಂದು ವೇಳೆ ಅಭ್ಯರ್ಥಿಗಳ ಆಯ್ಕೆ ಬಂತರ ಮತದಾರ ಪ್ರಭು ಈ ಬಾರಿ ಯಾರಿಗೆ ಆಶೀರ್ವಾದ ಮಾಡುತ್ತಾನೆ ಅನ್ನೋದು ಕಾದು ನೋಡಬೇಕಿದೆ. 


ಮೂರು ಪಕ್ಷಗಳ ಪ್ಲಸ್ ಅಂಡ್ ಮೈನಸ್: 


ಕಾಂಗ್ರೇಸ್:  ಪ್ಲಸ್: 


1.ಕೋಲಾರ ಕಾಂಗ್ರೇಸ್ ನ ಭದ್ರಕೋಟೆ.
2.ಎಸ್ಸಿ ಹಾಗೂ ಎಸ್ಟಿ ಮತಗಳು ಸೇರಿದಂತೆ ಅಲ್ಪಸಂಖ್ಯಾತರ ಮತಗಳು ಹೆಚ್ಚು ಇರುವ ಕ್ಷೇತ್ರ.
3.ಜಿಲ್ಲೆಯಲ್ಲಿ ಐದು ಜನ ಕಾಂಗ್ರೇಸ್ ಶಾಸಕರಿದ್ದಾರೆ. 
4.ಗುಂಪುಗಾರಿಕೆ ಶಮನವಾದರೆ ಕೆ.ಎಚ್.ಮುನಿಯಪ್ಪ ಅವರಿಗೆ ಗೆಲುವು ಸುಲಭ.


ಮೈನಸ್: 


1. ಕೆ.ಎಚ್.ಮುನಿಯಪ್ಪ ಅಭ್ಯರ್ಥಿ ಆದರೆ ಜಿಲ್ಲೆಯ ನಾಯಕರಲ್ಲಿ ಇರುವ ಅಸಮಧಾನ.
2. ಕಳೆದ ಚುನಾವಣೆಯಲ್ಲಿ ಘಟಬಂದನ್ ನಾಯಕರು ಕೆ.ಎಚ್.ಮುನಿಯಪ್ಪ ವಿರುದ್ದ ಕೆಲಸ ಮಾಡಿದ್ದು, ಅಸಮಧಾನದ ಹೊಗೆ ಈಗಲೂ ಇರುವುದು. 
3. ಹೊಸಬರಿಗೆ ಅವಕಾಶ ನೀಡಿದ್ದಲ್ಲೂ ಗುಂಪುಗಾರಿಕೆ ತಪ್ಪಿದ್ದಲ್ಲ. 
4. ರಮೇಶ್ ಕುಮಾರ್ ಹಾಗೂ ಕೆ.ಎಚ್.ಮುನಿಯಪ್ಪ ಎರಡು ಗುಂಪುಗಳಿಂದ ಬೇರೆ ಬೇರೆ ಪಟ್ಟಿ ಕಳಿಸಲಾಗಿದೆ. 
5. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕಾಂಗ್ರೇಸ್ ಗೆ ಸಂಕಷ್ಟ.


ಜೆಡಿಎಸ್: ಪ್ಲಸ್: 


1.ಎಸ್ಸಿ-ಎಸ್ಟಿ ಮತಗಳ ನಂತರ ವಕ್ಕಲಿಗರ ಪ್ರಾಬಲ್ಯ ಹೆಚ್ಚಾಗಿರುವ ಕ್ಷೇತ್ರ.
2. ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನ ಪಡೆದಿದೆ. ಜೊತೆಗೆ  ಕೆಲ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಗೆ ಬಿಗ್ ಫೈಟ್ ನೀಡಿದೆ. 
3. ಬಿಜೆಪಿಯೊಂದಿಗೆ ಮೈತ್ರಿ.
4.ಜೆಡಿಎಸ್ ನಿಂದ ಅಭ್ಯರ್ಥಿ ಆದರೆ ಬಿಜೆಪಿಯಲ್ಲಿ ಇರುವ ಗುಂಪುಗಾರಿಕೆ ಶಮನವಾಗಿ, ಜೆಡಿಎಸ್ ಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ. 


ಮೈನಸ್: 


1.ವಿಧಾನ ಸಭಾ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದ ಗೆಲುವು ಸಿಗದ ಕಾರಣ, ಕಾರ್ಯಕರ್ತರಲ್ಲಿ ಆತ್ಮವಿಶ್ವಾಸದ ಕೊರತೆ. 
2.ಜಿಲ್ಲೆಯಲ್ಲಿನ ಜೆಡಿಎಸ್ ಕಾರ್ಯಕರ್ತರನ್ನ ಒಗ್ಗೂಡಿಸಿಕೊಂಡು ಹೋಗುವ ನಾಯಕತ್ವದ ಕೊರತೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.