lok sabha election 2024: ರಾಮನಗರ, ಏಪ್ರಿಲ್ 17:  “ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಬಿಜೆಪಿಯು ಐಟಿ, ಇಡಿ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ಪ್ರಯೋಗಿಸುತ್ತಿದೆ. ಈ ಪ್ರಯೋಗಗಳು ಪ್ರತಿ ಚುನಾವಣೆಯಲ್ಲೂ ನಡೆಯುತ್ತಿದ್ದು, ನಮಗೆ ಇದು ಹೊಸತಲ್ಲ” ಎಂದು ಸಂಸದರು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ತಿಳಿಸಿದರು.


COMMERCIAL BREAK
SCROLL TO CONTINUE READING

ರಾಮನಗರದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಭೈರೇಗೌಡರು, ಜೆಡಿಎಸ್ ಮುಖಂಡರಾದ ರಾಜಶೇಖರ್ ಅವರ ಪಕ್ಷ ಸೇರ್ಪಡೆ ನಂತರ ಮಾಧ್ಯಮಗೋಷ್ಠಿ ಉದ್ದೇಶಿಸಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಅವರು ಮಾತನಾಡಿದರು.


ಕಳೆದ ಮೂರ್ನಾಲ್ಕು ದಿನಗಳಿಂದ ನಿಮ್ಮ ಆಪ್ತರ ಮೇಲೆ ಐಟಿ ದಾಳಿ ನಡೆಯುತ್ತಿದೆ ಎಂದು ಮಾಧ್ಯಮಗಳು ಕೇಳಿದಾಗ, ಅವರು ಉತ್ತರಿಸಿದ್ದು ಹೀಗೆ;


ಇದನ್ನೂ ಓದಿಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್’ಗೆ ಬಹಿರಂಗ ಸವಾಲ್


“ಬಿಜೆಪಿ ಅವರ ಬಳಿ ಇರುವ ಅಸ್ತ್ರ ಅದೊಂದೆ. ಅವರಿಗೆ ಸೋಲಿನ ಭೀತಿ ಕಾಡುತ್ತಿದ್ದು, ಐಟಿ, ಇಡಿ, ಸಿಬಿಐ ಬಿಟ್ಟು ಅವರಿಗೆ ಬೇರೆ ಗೊತ್ತಿಲ್ಲ. ಪ್ರಧಾನಮಂತ್ರಿಗಳಿಗೆ, ಬಿಜೆಪಿ ನಾಯಕರಿಗೆ ಬೆಲೆ ಏರಿಕೆ ಬಗ್ಗೆ ಮಾತನಾಡಲು ಹೇಳಿ. ಪ್ರಧಾನಮಂತ್ರಿಗಳು 10 ವರ್ಷಗಳ ಹಿಂದೆ ಹೇಳಿರುವ ಹೇಳಿಕೆ, ಕೊಟ್ಟಿರುವ ವಚನಗಳ ಬಗ್ಗೆ ಇಂದು ಅವರು ಏನು ಹೇಳುತ್ತಾರೆ ಕೇಳಿ. ಅವರಿಂದ ಶ್ರೀರಾಮನವಮಿ ದಿನ ಈ ವಿಚಾರವಾಗಿ ಸತ್ಯ ಹೇಳಿಸಿ” ಎಂದರು.


ಡಿ.ಕೆ ಸುರೇಶ್ ಅವರ ಗುರಿಯೇ ಎಂಬ ಪ್ರಶ್ನೆಗೆ, “ಅವರು ಏನಾದರೂ ಮಾಡಿ ನಮ್ಮ ನಾಯಕರನ್ನು ಕುಗ್ಗಿಸಬೇಕು ಎನ್ನುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನಗಳು ಯಾವುದೂ ಯಶಸ್ಸಾಗುವುದಿಲ್ಲ. ಐಟಿ, ಇಡಿ, ಸಿಬಿಐ ಅಧಿಕಾರಿಗಳು ಬಿಜೆಪಿಯ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷ ಕಟ್ಟಿಹಾಕಿ ಸೋಲಿಸಲು ಬಂದಿದ್ದಾರೆ. ಇದು ನಮಗೆ ಹೊಸತಲ್ಲ. ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಇದೇ ತಂತ್ರ ಅನುಸರಿಸುತ್ತಿದೆ” ಎಂದರು.


ರಾಮದೇವರ ಬೆಟ್ಟ ಅಭಿವೃದ್ಧಿಗೆ ಕನಿಷ್ಠ ಪಕ್ಷ ಅರಣ್ಯ ಇಲಾಖೆಗೆ ಅರ್ಜಿಯಾದ್ರೂ ಹಾಕಿದ್ದಾರಾ?:


ಬಿಜೆಪಿ ನಾಯಕರು ರಾಮದೇವರ ಬೆಟ್ಟವನ್ನು ನಾವೇ ಅಭಿವೃದ್ಧಿ ಮಾಡುತ್ತೇವೆ ಎಂದು ಬಿಜೆಪಿಯ ಅಶ್ವತ್ಥ್ ನಾರಾಯಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಯಾವಾಗ ಅಭಿವೃದ್ಧಿ ಮಾಡುತ್ತಾರೆ? ಅವರು ನಾಲ್ಕು ವರ್ಷಗಳ ಕಾಲ ಇದೇ ಜಿಲ್ಲೆಯಲ್ಲಿ ಅಧಿಕಾರದಲ್ಲಿದ್ದರಲ್ಲವೇ? ಜಿಲ್ಲೆಯಲ್ಲಿ ಕಸ ಗುಡಿಸಿ ಕ್ಲೀನ್ ಮಾಡುತ್ತೇನೆ ಎಂದಿದ್ದರು. ಅವರು ಕ್ಲೀನ್ ಮಾಡಿದರಾ? ರಾಮ ದೇವರ ಬೆಟ್ಟ ಅಭಿವೃದ್ಧಿಗೆ ಬಜೆಟ್ ನಲ್ಲಿ ಎಷ್ಟು ಅನುದಾನ ಇಟ್ಟಿದ್ದಾರೆ? ಎಷ್ಟು ಬಿಡುಗಡೆ ಮಾಡಿದ್ದಾರೆ? ರಣಹದ್ದು ಸಂರಕ್ಷಣಾ ಇಲಾಖೆ ಅನುಮತಿ ಪಡೆದಿದ್ದಾರಾ? ಚುನಾವಣೆಗಾಗಿ ಇಂದು ಬೆಟ್ಟ ಹತ್ತಿದ್ದಾರೆ. ಇದು ಚುನಾವಣಾ ತಂತ್ರ. ರಾಮ ನಮ್ಮ ಊರಿನಲ್ಲೂ ಇದ್ದಾನೆ. ನಾನೂ ದೇವಾಲಯ ಕಟ್ಟಿದ್ದೇವೆ, ಪೂಜೆ ಮಾಡುತ್ತಿದ್ದೇವೆ. ನಮ್ಮವರೂ ರಸ್ತೆಯಲ್ಲಿ ಪಾನಕ, ಮಜ್ಜಿಗೆ ಹಂಚುತ್ತಿದ್ದಾರೆ. ಬಿಜೆಪಿ ಬಾವುಟ, ಕೇಸರಿ ಶಾಲು ಹಾಕಿಕೊಂಡು ರಾಮನ ಬೆಟ್ಟಕ್ಕೆ ಹತ್ತಿದರೆ ರಾಮನ ಭಕ್ತರಾಗುವುದಿಲ್ಲ. ಅವರು ಚುನಾವಣೆಗೆ ಮಾತ್ರ ರಾಮನ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ರಾಮದೇವರ ಬೆಟ್ಟದಲ್ಲಿ ದೇವಾಲಯ ಕಟ್ಟಿ ಎಂದು ನಾನು ಕೇಳುತ್ತಿಲ್ಲ. ಆ ಜಾಗ ಅಭಿವೃದ್ಧಿಗೆ ರಣಹದ್ದು ಸಂರಕ್ಷಣಾ ಇಲಾಖೆಯ ಅನುಮತಿ ಪಡೆಯಲು ಅರ್ಜಿ ಹಾಕಿದ್ದಾರಾ? ಹಾಕಿದ್ದರೆ ಆ ಅರ್ಜಿಯನ್ನು ತೋರಿಸಲಿ ಸಾಕು. ಡಿಪಿಆರ್ ಮಾಡುವ ಮುನ್ನ ಅನುಮತಿ ಬೇಕಲ್ಲವೇ? ಚುನಾವಣೆ ಸಮಯದಲ್ಲಿ ಅನುಮತಿ ಸಿಗುತ್ತದಾ? ರಾಮದೇವರ ಬೆಟ್ಟಕ್ಕೆ ಅವರಬ್ಬರೇ ಅಲ್ಲ, ರಾಮನ ನೋಡಲು, ಪೂಜಿಸಲು ಸಾವಿರಾರು ಮಂದಿ ಹೋಗುತ್ತಿದ್ದಾರೆ” ಎಂದರು.


ರಾಜಕೀಯಕ್ಕಾಗಿ ರಾಮನ ಹೆಸರು ಜಪ:


ರಾಮಮಂದಿರ ಉದ್ಘಾಟನೆಗೆ ಹೋಗದವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ ಎಂಬ ಅಶ್ವತ್ಥ್ ನಾರಾಯಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾವು ರಾಮನನ್ನು ನಮ್ಮ ಊರಿನಲ್ಲೇ ನೋಡುತ್ತಿದ್ದೇವೆ. ಅಯೋಧ್ಯೇಗೆ ಯಾಕೆ ಹೋಗಬೇಕು? ನಮ್ಮ ಊರು, ತಾಲೂಕಿನಲ್ಲಿ ದೇವಾಲಯ ಕಟ್ಟಿ ಅಲ್ಲೇ ಪೂಜೆ ಮಾಡುತ್ತೇವೆ. ನಿಮಗೆ ರಾಮ ಎಂದರೆ ನನಗೆ ಹನುಮಂತ, ವೆಂಕಟರಮಣಸ್ವಾಮಿ, ಕೆಂಕೇರಮ್ಮ, ಕಬ್ಬಾಳಮ್ಮ, ತಾಯಿ ಚಾಮುಂಡಿ. ನೀವು ರಾಜಕೀಯಕ್ಕೋಸ್ಕರ ರಾಮನ ಹೆಸರು ಹೇಳುತ್ತಿದ್ದೀರಿ. ನಿಮ್ಮ ಉದ್ದೇಶ ರಾಜಕೀಯವೇ ಹೊರತು, ಆತನ ಕೃಪೆಗಾಗಿ ಅಲ್ಲ. ಬಿಜೆಪಿಯ ಈ ಸುಳ್ಳನ್ನು ಮಾಧ್ಯಮಗಳು ಪ್ರಚಾರ ಮಾಡಬಾರದು ಎಂದು ಮನವಿ ಮಾಡುತ್ತೇನೆ. ಅವರು ರಾಮನಗರ ಕ್ಲೀನ್ ಮಾಡುತ್ತೇವೆ ಎಂದಿದ್ದರು ಮಾಡಿದ್ದಾರಾ ಕೇಳಿ. ಅವರು ರಾಮದೇವರ ಬೆಟ್ಟದಲ್ಲಿ ದೇವಾಲಯ ಕಟ್ಟುತ್ತೇವೆ ಎಂದಿದ್ದರು. ಕಟ್ಟಿದ್ದಾರಾ ತೋರಿಸಲಿ. ನಾನು ಅರಣ್ಯಾಧಿಕಾರಿಗಳ ಹಾಗೂ ರಣಹದ್ದು ಸಂರಕ್ಷಣಾ ಇಲಾಖೆ ಅಧಿಕಾರಿಗಳ ಸಭೆ ಮಾಡಿದ್ದೇನೆ. ಚುನಾವಣೆ ಸಮಯದಲ್ಲಿ ಮಾಧ್ಯಮಗಳು ಅವರ ಹಿಂದೆ ಹೋಗುತ್ತಾರೆ ಎಂದು ಪ್ರಚಾರಕ್ಕೆ ಸುಳ್ಳು ಹೇಳಿದರೆ, ಅದಕ್ಕೆ ನಾನು ಉತ್ತರ ನೀಡಲು ಸಾಧ್ಯವೇ? ಈ ಸುಳ್ಳುಗಾರರಿಗೆ ಹೆಚ್ಚಿನ ಆದ್ಯತೆ ನೀಡಬೇಕಿ ಎಂದು ಮನವಿ ಮಾಡುತ್ತೇನೆ” ಎಂದು ವಾಗ್ದಾಳಿ ನಡೆಸಿದರು. 


ಆಮ್ ಆದ್ಮಿ ಪಕ್ಷ ದೇಶದಲ್ಲಿ ಇಂಡಿಯಾ ಮೈತ್ರಿಕೂಟದಲ್ಲಿ ಕೆಲಸ ಮಾಡುತ್ತಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಾಕ್ಷರಾದ ಭೈರೇಗೌಡರ ನೇತೃತ್ವದಲ್ಲಿ ಎಲ್ಲಾ ಮುಖಂಡರು ನಮಗೆ ಬೆಂಬಲ ಘೋಷಿಸಿದ್ದಾರೆ. ಹೀಗಾಗಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ನಾಯಕರುಗಳಿಗೆ ಅಭಿನಂದನೆ ತಿಳಿಸುತ್ತೇನೆ. 


ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಕೇಂಜ್ರಿವಾಲ್ ಅವರು ಪ್ರತಿ ಹಂತದಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಾ ದೆಹಲಿ ಹಾಗೂ ಪಂಜಾಬ್ ನಲ್ಲಿ ಜನಪರ ಕಾರ್ಯಕ್ರಮಗಳನ್ನು ನೀಡಿ ಉತ್ತಮ ಆಡಳಿತ ಸರ್ಕಾರ ನಡೆಸುತ್ತಿದ್ದಾರೆ. ಆಮೂಲಕ ಜನಮನ್ನಣೆ ಗಳಿಸಿದ್ದಾರೆ. ಅವರು ಎಲ್ಲಿ ತಮ್ಮ ಪ್ರಾಬಲ್ಯ ವಿಸ್ತರಿಸುತ್ತಾರೋ ಎಂಬ ಕಾರಣಕ್ಕೆ ಅವರ ವಿರುದ್ಧ ಇಡಿ, ಸಿಬಿಐ ತನಿಖಾ ಸಂಸ್ಥೆಗಳ ಮೂಲಕ ಅವರನ್ನು ವಶಕ್ಕೆ ಪಡೆದು ಜೈಲಿಗೆ ಕಳಿಸಿದ್ದಾರೆ.


ಆಮ್ ಆದ್ಮಿ, ಜೆಡಿಎಸ್ ಮುಖಂಡರ ಪಕ್ಷ ಸೇರ್ಪಡೆ 


ಬಿಜೆಪಿ ಆಡಳಿತದಲ್ಲಿ ಇಂತಹ ಬೆಳವಣಿಗೆ ಹೊಸತಲ್ಲ. ಬಲಿಷ್ಠ ವಿರೋಧ ಪಕ್ಷಗಳ ನಾಯಕರನ್ನು ಆಗಿಂದಾಗೆ ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಗೆ ಪ್ರಮುಖ ಅಸ್ತ್ರವಾಗಿ ಇಡಿ, ಐಟಿ, ಸಿಬಿಐ ಬಳಕೆಯಾಗುತ್ತಿವೆ. ಆಮೂಲಕ ಚುನಾವಣೆ ಗೆಲ್ಲುವ ಕುತಂತ್ರ ನಡೆಯುತ್ತಿದೆ. ಬಿಜೆಪಿ ಚುನಾವಣೆ ಸಮಯದಲ್ಲಿ ಅವರು ಕೊಟ್ಟ ಮಾತು, ಭರವಸೆಗಳನ್ನು ಈಡೇರಿಸಿರುವ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಬೇರೆ ವಿಚಾರ ತಿರುಚುತ್ತಿದ್ದಾರೆ.


ಇಂದು ಶ್ರೀರಾಮನವಮಿ. ಇಂದು ನಾವೆಲ್ಲರೂ ರಾಮನವಮಿ ಆಚರಿಸುತ್ತಿದ್ದಾರೆ. ರಾಮ ಕೇವಲ ಬಿಜೆಪಿಯ ಸ್ವತ್ತಲ್ಲ. ನಾವು ಸೀತಾ, ರಾಮ, ಲಕ್ಷ್ಮಣ, ಆಂಜನೇಯ ಎಳ್ಲಾ ದೇವರನ್ನು ಪೂಜೆ ಮಾಡುತ್ತೇವೆ. ನಾವು ರಾಜಕೀಯಕ್ಕಾಗಿ ದೇವರನ್ನು ಬಳಸಿಕೊಳ್ಳುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಉಲಿಸಲು ಆಮ್ ಆದ್ಮಿ ಪಕ್ಷ ನಮ್ಮ ಜತೆ ಕೈ ಜೋಡಿಸಿದ್ದಾರೆ. ಈ ಬಾರಿ ದೇಶದಲ್ಲಿ ಇಂಡಿಯಾ ಒಕ್ಕೂಟ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ವಿಶ್ವಾಸವಿದೆ.


ಇದನ್ನೂ ಓದಿ: ಧಾರವಾಡ ಡಿಸಿ ಕಚೇರಿಗೆ ಬಂದ ವಿನೋದ್ ಅಸೂಟಿ


ಇವರ ಜತೆಗೆ ರಾಮನಗರದ ಜೆಡಿಎಸ್ ಮುಖಂಡರಾದ ರಾಜಶೇಖರ್ ಅವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ, ನಾಯಕತ್ವ ಒಪ್ಪಿ ನಮ್ಮ ಪಕ್ಷ ಸೇರಿದ್ದು, ಅವರನ್ನು ಸ್ವಾಗತಿಸುತ್ತೇನೆ. ಈ ಜಿಲ್ಲೆಯ ಅಭಿವೃದ್ಧಿ ಹಾಗೂ ತಾಲೂಕಿನ ಅಭಿವೃದ್ಧಿಗೆ, ನಿಮ್ಮ ನಾಯಕತ್ವದ ಗುಣಗಳು ಒಂದು ಕುಟುಂಬಕ್ಕೆ ಸೀಮಿತವಾಗಿದೆ. ಹೀಗಾಗಿ ನಿಮ್ಮ ನಾಯಕತ್ವ ಗುಣ ಉಳಿಸಿಕೊಳ್ಳಲು ನಮ್ಮ ಜತೆ ಕೈ ಜೋಡಿಸಿ ಎಂದು ಜೆಡಿಎಸ್  ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. ನಾನು ನಿಮ್ಮ ಸಹೋದರನಾಗಿ ನಿಮ್ಮ ಶಕ್ತಿ ಗುರುತಿಸಿ ಈ ಜಿಲ್ಲೆಯ ಅಭಿವೃದ್ಧಿ ಮಾಡುತ್ತೇನೆ. ನೀವೆಲ್ಲರೂ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು. ಸಮಾನ ಮನಸ್ಕರಿಗೆ ಈ ಮೂಲಕ ಮುಕ್ತ ಆಹ್ವಾನ ನೀಡುತ್ತೇನೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.