Lokasabha Election 2024: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ಭಾರೀ ಹಣಾಹಣಿ
Bangalore North Lok Sabha constituency: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು.ಕೆ.ಆರ್ ಪುರಂ,ಬ್ಯಾಟರಾಯನಪುರ,ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್,ಮಲ್ಲೇಶ್ವರಂ,ಹೆಬ್ಬಾಳ,ಪುಲಕೇಶಿನಗರ ಕ್ಷೇತ್ರವನ್ನು ಒಳಗೊಂಡಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ಮಹಾನಗರದ ಮೂರು ಕ್ಷೇತ್ರಗಳು ಪ್ರಮುಖ ಹಾಗೂ ಮಹತ್ವದ್ದಾಗಿವೆ.ಅದರಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಕೂಡ ಒಂದು.ಅತಿ ಹೆಚ್ಚು ಮತದಾರರನ್ನ ಹೊಂದಿರುವ ಕ್ಷೇತ್ರವೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.ಈ ಕ್ಷೇತ್ರದಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿದ್ದು,ಮಾಜಿ ಸಿಎಂ ಹಾಗೂ ಮಾಜಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡರು ಕಳೆದ ಎರಡು ಭಾರಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಬಿಜೆಪಿಯ ಭದ್ರ ಕೋಟೆಯಾಗಿರುವ ಬೆಂ.ಉತ್ತರ ಲೋಕಸಭಾ ಕ್ಷೇತ್ರ,ವೈವಿಧ್ಯಮ ದಿಂದಲೇ ರಾಜಕೀಯದಲ್ಲಿ ಗುರ್ತಿಸಿಕೊಂಡಿದೆ.
ವಿಶಾಲ ಮತ್ತು ಬೃಹತ್ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು, ಅಭಿವೃದ್ಧಿಗೆ ಸವಾಲುಗಳು ಅಂತೆಯೇ ರಾಜಕೀಯ ಏಳು–ಬೀಳು ಗಳಿಂದಲು ತುಂಬಿದೆ.ಎರಡು ಭಾರಿ ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾಗಿ ಕೆಲಸ ನಿರ್ವಹಿಸಿರುವ ಗೌಡರಿಗೆ ಕ್ಷೇತ್ರದಲ್ಲಿ ಪ್ರಭಾವವಿದೆ.ಆದರೆ ಅವರ ಮೇಲೆ ಬಂದ ಕೆಲವು ಆರೋಪ ಗಳು,ಅಪವಾದಗಳು,ವಯೋ ಸಹಜ ಆರೋಗ್ಯ ಸಮಸ್ಯೆಗಳು ರಾಜಕೀಯ ಭವಿಷ್ಯದ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ.ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕ್ಷೇತ್ರದ ಜಿದ್ದಾ ಜಿದ್ದಿನ ರಣಕಣವಾಗಿ ಮಾರ್ಪಟ್ಟಿದೆ…ಉತ್ತರ ಕ್ಷೇತ್ರದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವವರು ಯಾರು..?
ಇದನ್ನೂ ಓದಿ: Chikkamagalur: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮುಗಿಯದ ರಾಜಕೀಯ ಶೀತಲ ಸಮರ
ಬೆಂ.ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆ
ನಗರದ ಜತೆಗೆ ಗ್ರಾಮೀಣ ಸೊಗಡು ಮೈಳೈಸಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವೈಶಿಷ್ಟತೆಯಿಂದ ಕೂಡಿದೆ.ಬೆಂ.ದಕ್ಷಿಣ, ಬೆಂ.ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಹೋಲಿಸಿದರೆ ಅಭಿವೃದ್ದಿಯಲ್ಲಿ ತೀವ್ರ ಹಿಂದೆಬಿದ್ದಿದೆ. ಗಾರ್ಮೇಟ್,ಗುಡಿ ಕೈಗಾರಿಕೆ,ಅರೆ ಕೈಗಾರಿಕೆ ಪ್ರದೇಶವಾಗಿದ್ದು ಹೆಚ್ಚಿನ ಸಂಖ್ಯೆಯ ಮತದಾರರು ಕಾರ್ಮಿಕರೇ ಆಗಿದ್ದಾರೆ.ಈ ಪ್ರದೇಶದಲ್ಲಿ ನಗರೀಕರಣ ಪ್ರಭಾವ ಆರಂಭದಿಂದಾಗಿ ಅಲ್ಲಿಲ್ಲಿ ಅಭಿವೃದ್ಧಿ ಚಟುವಟಿಕೆ ಕಂಡುಬರುತ್ತಿದೆ.ಅಪಾರ್ಟ ಮೆಂಟ್ಸ್, ಹಾಗೂ ವಸತಿ ಸೌಲಭ್ಯಗಳಿಗೆ ಹೆಚ್ಚಿನ ಭೂ ಭಾಗ ಬಳಕೆಯಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಬಂದ ಜನರು ಬದುಕು ಕಟ್ಟಿಕೊಂಡಿರೋ ಪ್ರದೇಶವೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಚಿತ್ರಣವಾಗಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು.ಕೆ.ಆರ್ ಪುರಂ,ಬ್ಯಾಟರಾಯನಪುರ,ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್,ಮಲ್ಲೇಶ್ವರಂ,ಹೆಬ್ಬಾಳ,ಪುಲಕೇಶಿನಗರ ಕ್ಷೇತ್ರವನ್ನು ಒಳಗೊಂಡಿದೆ.8 ವಿಧಾನ ಸಭಾ ಕ್ಷೇತ್ರಗಳಲ್ಲಿ 5ರಲ್ಲಿ ಬಿಜೆಪಿಯ ಶಾಸಕರಿದ್ರೆ,3ರಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ.ಕಳೆದೆರಡು ಎರಡು ದಶಕಗಳಿಂದ ಕ್ಷೇತ್ರದ ಮೇಲೆ ಬಿಜೆಪಿ ಹಿಡಿತ ಸಾಧಿಸಿದೆ.ವಿಚಿತ್ರ ಮತ್ತು ವಿಶೇಷವೆಂದರೆ ಕ್ಷೇತ್ರದಲ್ಲಿ ಸ್ಥಳೀಯರಲ್ಲದ ಹೊರಗಿನ ಅಭ್ಯರ್ಥಿಗಳೇ ಗೆಲುವು ಸಾಧಿಸಿರುವುದೇ ವಿಶೇಷ...!
ಕ್ಷೇತ್ರದ ಇತಿಹಾಸ : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಸ್ವಾತಂತ್ರ್ಯ ಬಂದಾಗನಿಂದಲೂ ಅಸ್ಥಿತ್ವದಲ್ಲಿದೆ.1951ರಲ್ಲಿ ಮೊದಲ ಬಾರಿಗೆ ಕೇಶವ ಐಯ್ಯಂಗಾರ್ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆ ಯಾಗಿದ್ರು.ಬಳಿಕ ವಿಧಾನಸೌಧ ನಿರ್ಮಾತೃ ದಿವಂಗತ ಕೆಂಗಲ್ ಹನುಮಂತಯ್ಯ ಪ್ರತಿನಿಧಿಸಿದ್ರು.17 ಬಾರಿ ಲೋಕಸಭಾ ಚುನಾವಣೆ ನಡೆದಿದ್ದು,12 ಬಾರಿ ಕಾಂಗ್ರೆಸ್ ಗೆಲುವನ್ನ ಸಾಧಿಸಿದೆ.ಒಂದು ಬಾರಿ ಜನತಾದಳ ಗೆದ್ದಿದ್ದು,ಸತತ ವಾಗಿ ನಾಲ್ಕು ಬಾರಿ ಬಿಜೆಪಿ ಗೆಲುವನ್ನ ಪಡೆದಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಏಳು ಬಾರಿ ದಿವಂಗತ ಸಿ.ಕೆ.ಜಾಫರ್ ಶರೀಫ್ ಗೆದ್ದು,ಇತಿಹಾಸ ದಾಖಲಿಸಿದ್ದಾರೆ.ಆದ್ರೆ, ಕಳೆದ ನಾಲ್ಕು ಬಾರಿ ಬಿಜೆಪಿ ಸತತವಾಗಿ ಗೆಲ್ಲುವ ತನ್ನ ಭದ್ರಕೋಟೆಯನ್ನಾಗಿಸಿಕೊಂಡಿದ್ದು,ಡಿ.ವಿ.ಸದಾನಂದ ಗೌಡರು ಎರಡು ಬಾರಿ ಗೆದ್ದು ಕ್ಷೇತ್ರದಲ್ಲಿ ಹಾಲಿ ಸಂಸದರಾಗಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರ ಶೇ.50 ರಷ್ಟು ಸಬ್ಸಿಡಿ ನೀಡುತ್ತಿದೆ. ಆದರೂ ಹೆಸರು ಮಾತ್ರ ಮೋದಿಯವರ ಸಬ್ಸಿಡಿ ಎನ್ನುತ್ತಾರೆ"
ಕೇಶವ ಐಯ್ಯಂಗಾರ್ 1952 ಹಾಗೂ 1957ರಲ್ಲಿ ಎರಡು ಬಾರಿ ಕಾಂಗ್ರೆಸ್ ಪಕ್ಷವನ್ನ ಪ್ರತನಿಧಿಸಿ ಗೆಲುವನ್ನ ಸಾಧಿಸಿದ್ರೆ.ರಾಜ್ಯದ ಎರಡನೇ ಮುಖ್ಯಮಂತ್ರಿ ಯಾಗಿದ್ದ ಕೆಂಗಲ್ ಹನುಮಂತಯ್ಯ 1962,1967 ಹಾಗೂ 1971ರಲ್ಲಿ ಮೂರು ಬಾರಿ ಸತತವಾಗಿ ಪ್ರತಿನಿಧಿಸಿ,ಸಂಸದರಾದರು.ಇದಕ್ಕೂ ಮೊದಲು ರಾಜ್ಯದ ಮುಖ್ಯ ಮಂತ್ರಿಯಾಗಿ ವಿಧಾನಸೌಧ ಕಟ್ಟಿಸಿದ ಕೀರ್ತಿ ಹನುಮಂತಯ್ಯ ಅವರದ್ದಾದ್ರೂ, ಸಂಸದರಾದ ಹಿನ್ನೆಲೆ ವಿಧಾನಸೌಧದಲ್ಲಿ ಶಾಸಕರಾಗಿ ಒಂದು ದಿನವೂ ಕೂರಲಾ ಗಲಿಲ್ಲ ಅನ್ನೋ ಬೇಸರ ಅವರಲ್ಲಿತ್ತು. ಅವರ ಬಳಿಕ ಸಿ.ಕೆ.ಜಾಫರ್ ಶರೀಫ್ 1977,1980,1984,1989, 1991ರಲ್ಲಿ ಸತತವಾಗಿ ಗೆದ್ದು ಜಾಫರ್ ಶರೀಫ್ ದಾಖಲೆ ನಿರ್ಮಿಸಿದರು.ಜನತಾದಳದ ಸಿ.ನಾರಾಯಣ ಸ್ವಾಮಿ ಎದುರು,1996ರಲ್ಲಿ ಸೋಲನ್ನಪ್ಪುತ್ತಾರೆ.ಬಳಿಕ ಮತ್ತೆ 1998 ಹಾಗೂ 1999ರಲ್ಲಿ ಮರು ಆಯ್ಕೆಯಾದ್ರು. ಶರೀಫ್ ಕೇಂದ್ರ ಸರ್ಕಾರದಲ್ಲಿ ವಿವಿಧ ಖಾತೆ ಸಚಿವರಾಗಿ ಹಲವು ಸೇವೆ ಸಲ್ಲಿಸಿರೋದು ಸ್ಮರಣೀಯ.ಬಳಿಕ ಆರಂಭ ವಾಗಿದ್ದೆ ಬಿಜೆಪಿ ಪರ್ವ.2004ರಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಟಿ ಸಾಂಗ್ಲಿ ಯಾನ,2009ರಲ್ಲಿ ಡಿ.ಬಿ ಚಂದ್ರೇಗೌಡ,ನಂತರ 2014,2019ರಲ್ಲಿ ಎರಡು ಬಾರಿ ಸದಾನಂದ ಗೌಡರು ಸ್ಪರ್ಧೆ ಮಾಡಿ ಗೆದ್ದ ದಾಖಲೆ ನಿರ್ಮಿಸಿದರು.ಕೇಂದ್ರದಲ್ಲಿ ವಿವಿಧ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕೇತ್ರದಲ್ಲಿ ಸದ್ಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ, ಐದರಲ್ಲಿ ಬಿಜೆಪಿ,ಮೂರರಲ್ಲಿ ಕಾಂಗ್ರೆಸ್ ಗೆಲುವನ್ನ ಪಡೆದಿದೆ.ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾದಾಗ ಆಪರೇಷನ್ ಕಮಲದ ಮೂಲಕ ಯಶವಂತಪುರ,ಮಹಾಲಕ್ಷ್ಮೀ ಲೇಔಟ್,ಕೆ.ಆರ್ ಪುರಂ ಕ್ಷೇತ್ರದ ಶಾಸಕರು ರಾಜೀನಾಮೆ ನೀಡಿ ಮರು ಆಯ್ಕೆಯಾಗಿ ಕಮಲ ಹಿಡಿದ ಮೂರು ಶಾಸಕರು ಮರು ಆಯ್ಕೆಯಾದರು.ಆದರೆ ಹೆಬ್ಭಾಳ ಕ್ಷೇತ್ರವನ್ನು ಬಿಜೆಪಿ ಎರಡು ಅವಧಿಯಲ್ಲಿ ಕಳೆದುಕೊಂಡಿದೆ.ಮಲ್ಲೇಶ್ವರಂ,ದಾಸರಹಳ್ಳಿ ಬಿಜೆಪಿ ಭದ್ರಕೋಟೆಯಾಗಿದ್ದು, ಬ್ಯಾಟರಾಯನಪುರದಲ್ಲಿ ಒಳಜಗಳದಿಂದ ಕ್ಷೇತ್ರ ಕಳೆದುಕೊಳ್ಳಲಾಗಿದೆ.ಪುಲಕೇಶಿ ನಗರದಲ್ಲಿ ಈವರೆಗೂ ಬಿಜೆಪಿ ಅಭ್ಯರ್ಥಿ ಗೆದ್ದಿಲ್ಲ.ಆದ್ರೆ ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರೋದೆ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ.
ಗೆಲುವಿಗಾಗಿ ಬಿಜೆಪಿ, ಕಾಂಗ್ರೆಸ್ ನಡುವೆ ಭಾರೀ ಹಣಾಹಣಿ
ಒಕ್ಕಲಿಗರ ಸಮುದಾಯದ ಮತದಾರರೇ ಹೆಚ್ಚಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ, ಈಗಲೂ ಒಕ್ಕಲಿಗ ಅಭ್ಯರ್ಥಿಯನ್ನ ಆಯ್ಕೆಮಾಡಿದ್ದಲ್ಲಿ ಮಾತ್ರವೇ ಗೆಲುವು ಸುಲಭ ಎನ್ನುವ ಲೆಕ್ಕಾಚಾರ ಇದೆ.ಹಾಗಾಗಿ ಕಾಂಗ್ರೆಸ್-ಬಿಜೆಪಿ ಪಕ್ಷಗಳಲ್ಲೂ ಕೂಡ ಜಾತಿ ಲೆಕ್ಕಾಚಾರಲ್ಲಿ,ಒಕ್ಕಲಿಗ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುತ್ತಾ ಬರಲಾಗಿದೆ.ಈ ಬಾರಿ ಜೆಡಿಎಸ್ ಜೊತೆಗಿನ ಮೈತ್ರಿಯಿಂದ, ಸತತವಾಗಿ ಗೆಲುವು ಸಾಧಿಸುತ್ತಾ ಬರ್ತಿರೋ ಬಿಜೆಪಿಗೆ ಮತ್ತಷ್ಟು ಹೆಚ್ಚಿನ ಮತ ಬೀಳುವ ನಿರೀಕ್ಷೆ ಇದೆ.ಆದ್ರೆ ಸದಾನಂದಗೌಡರ ನಿವೃತ್ತಿ ಮಾತುಗಳು ಕೇಳಿ ಬರುತ್ತಿವೆ.ಸದಾನಂದಗೌಡರೇ ಮತ್ತೆ ಕಣಕ್ಕಿಳಿಯುವ ಬಗ್ಗೆ ಆಸಕ್ತಿಯನ್ನು ವ್ಯಕ್ತಪಡಿಸಿ ದ್ದಾರೆ.ಈ ನಡುವೆ ಮಾಜಿ ಸಿಎಂ ಎಸ್.ಎಂ.ಕೃಷ್ಣಾ ಅವರ ತಂಗಿಯ ಮಗ ಡಾ.ನಿರಂತರ ಗಣೇಶ್ ಕ್ಷೇತ್ರದಲ್ಲಿ ಅದೃಷ್ಠ ಪರೀಕ್ಷೆಗೆ ಉತ್ಸುಕರಾಗಿದ್ದಾರೆ. ಕಳೆದೆರಡು ಭಾರಿ ಕೈಪಡೆ ಒಕ್ಕಲಿಗ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ರೂ,ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲಾಗಿಲ್ಲ.ಬಿಜೆಪಿಯ ಹೊಸ ಅಭ್ಯರ್ಥಿ ವಿರುದ್ಧ, ಕಾಂಗ್ರೆಸ್ ಸ್ಟ್ರಾಟರ್ಜಿ ಏನು ಅನ್ನೋದು ನೋಡಬೇಕಿದೆ.ಹಾಳಿ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸ್ತಾರೆಂಬ ಚೆರ್ಚೆ ನಡೆಯುತ್ತಿದೆ. ಕೊನೆಯ ಕ್ಷಣದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಬದಲಾದ್ರು ಅಚ್ಚರಿಯಿಲ್ಲ ಎನ್ನಲಾಗಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 29,01,399 ಮತದಾರರು
15,01,333 ಪುರುಷರು,
13,99,529 ಮಹಿಳೆಯರು,
537 ಇತರರಿದ್ದಾರೆ..
ಜಾತಿವಾರು ಲೆಕ್ಕಾಚಾರ ಹೀಗಿದೆ :
10 ಲಕ್ಷ ಒಕ್ಕಲಿಗ ಮತದಾರರು
7 ಲಕ್ಷ ಎಸ್ಸಿ, ಎಸ್ಟಿ ಮತದಾರರು
5 ಲಕ್ಷ ಕುರುಬ ಮತದಾರರು
4 ಲಕ್ಷ ಲಿಂಗಾಯತ ಮತದಾರರು
4 ಲಕ್ಷ ಇತರ ಮತದಾರರು
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಕಳೆದ ನಾಲ್ಕು ಅವಧಿಯಿಂದ ಬಿಜೆಪಿಯ ಭದ್ರಕೋಟೆಯಾಗಿದೆ.2014ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದತ್ತ ಮುಖ ಮಾಡಿದ ಹಾಲಿ ಸಂಸದ ಡಿ.ವಿ ಸದಾನಂದಗೌಡ ಎರಡು ಬಾರಿ ಗೆಲುವನ್ನ ಸಾಧಿಸಿದ್ದಾರೆ.ಜಾಫರ್ ಶರೀಫ್ ಅವರನ್ನ ಸೋಲಿಸಿ ಒಮ್ಮೆ ಜನತಾದಳದಿಂದ ಗೆದ್ದಿದ್ದ ಸಿ.ನಾರಾಯಣಸ್ವಾಮಿ ಅವರನ್ನ,ಕಾಂಗ್ರೆಸ್ ಕಣಕ್ಕಿಳಿಸಿ ಗೆಲುವಿನ ಪ್ರಯತ್ನಕ್ಕೆ ಕೈ ಹಾಕಿತು.ಆದ್ರೆ ಅಲ್ಲೂ ಕೂಡ ಕಾಂಗ್ರೆಸ್ ಫೇಲ್ಯೂರ್ ಆಗಿತ್ತು.2014ರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಿಂತು ಪರಾಜಿತರಾಗಿದ್ದ ಕೃಷ್ಣಾ ಬೈರೇಗೌಡರನ್ನ.2019ರಲ್ಲಿ ಸಚಿವರಾಗಿ ಸಾಕಷ್ಟು ಹೆಸರು ಮಾಡಿದ್ದ,ಕೃಷ್ಣಾ ಬೈರೇಗೌಡ ಅವರನ್ನ ಕಾಂಗ್ರೆಸ್ ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗಿಳಿಯಿತು.ಆದ್ರೆ,ಒಂದುವರೆ ಲಕ್ಷಕ್ಕೂ ಅಧಿಕ ಮತಗಳಿಂದ ಸದಾನಂದ ಗೌಡರು ಎರಡನೇ ಬಾರಿ ಅಭೂತಪೂರ್ವ ಗೆಲುವನ್ನ ಸಾಧಿಸಿದ್ರು.ಸಂಸದರಾಗಿ ಮತ್ತೊಮ್ಮೆ ಆಯ್ಕೆಯಾಗೋದ್ರ ಜೊತೆಯಲ್ಲಿ,ಮತ್ತೊಮ್ಮೆ ಬೆಂಗಳೂರು ಉತ್ತರವನ್ನ ಬಿಜೆಪಿ ಭದ್ರಕೋಟೆಯನ್ನಾಗಿ ಮಾಡಿಕೊಂಡಿತು.
ಸಂಸದರಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಲು ಅವಕಾಶ ವನ್ನು ಸದಾನಂದಗೌಡ ಬಳಸಿಕೊಂಡಿಲ್ಲವೆಂಬ ಮಾತುಗಳಿವೆ.ಈ ಅಪಾವದಗಳ ನಡುವೆಯೂ ಬಿಜೆಪಿ ಮತದಾರರು,ಪ್ರಮುಖ ನಾಯಕರು ಡಿವಿಎಸ್ ಬಗ್ಗೆ ಮೆಚ್ಚುಗೆ ಇದೆ.ಸರಳ ವ್ಯಕ್ತಿತ್ವದ ಸದಾನಂದಗೌಡರು,ನೇರವಾಗಿ ಮತದಾರರಿಗೆ ಲಭ್ಯರಾಗ್ತಾರೆ. ಆಗ ನಮ್ಮ ಕಷ್ಟಗಳನ್ನ ನೇರವಾಗಿ ಹೇಳಿಕೊಳ್ಳಲು ಸಾಧ್ಯ ಎಂಬ ಮಾತುಗಳು ಕೇಳಿ ಬಂದಿವೆ.ಇನ್ನೂ ಕೆಲವರು ಸಂಸದರಾಗಿ ಏನೂ ಮಾಡಲಿಲ್ಲ.ಕ್ಷೇತ್ರದಲ್ಲಿ ಯಾವುದೇ ರಸ್ತೆ,ಮೂಲಭೂತ ಸೌಕರ್ಯ ಒದಗಿಸಲಿಲ್ಲ ಎಂಬ ಬೇಸರ ಇದೆ.ಕೇಂದ್ರದಲ್ಲಿ ಸಚಿವರಾಗಿ ಕ್ಷೇತ್ರಕ್ಕೆ ಯಾವುದೇ ಮಹತ್ವದ ಯೋಜನೆ ತರಲಿಲ್ಲ.ಕುಡಿಯುವ ನೀರು,ಒಳಚರಂಡಿ,ರಸ್ತೆ, ಆಸ್ಪತ್ರೆ,ಹಾಗೂ ಕಾರ್ಮಿಕರ ಸಮುದಾಯಗಳ ಕಷ್ಟ ಸುಖ ಆಲಿಸಲು ಡಿ.ವಿ.ಎಸ್.ವಿಫಲಾದ್ರು ಎನ್ನಲಾಗಿದೆ.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ,ಒಂದು ಬಾರಿ ಮುಖ್ಯಮಂತ್ರಿಯಾಗಿ, ಕೇಂದ್ರ ಸರ್ಕಾರದ ವಿವಿಧ ಖಾತೆಯ ಸಚಿವರಾಗಿ ಅನುಭವಿಯಾಗಿರೋ ಸದಾನಂದಗೌಡರು.ಈಗಾಗಲೇ ತಮ್ಮ ರಾಜಕೀಯ ನಿವೃತ್ತಿಯನ್ನ ಘೋಷಣೆ ಮಾಡಿದ್ದಾರೆ.ಅನೇಕ ಬಾರಿ ಸಂಸದರಾಗಿ ತಮ್ಮ ಸುಧೀರ್ಘ ರಾಜಕಾರಣ ಕಂಡಿರೋ ಅವರು,ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದು,ಹಲವು ಕೆಲಸ ಮಾಡಿರೋ ತೃಪ್ತಿ ಎಂಬ ಭಾವನೆ ಅವರಲ್ಲಿದೆ.
ಕ್ಷೇತ್ರದಲ್ಲಿ ಸಾರ್ವಜನಿಕರ ಬಳಕೆಗಾಗಿ ಮಿಲಿಟರಿ ಜಾಗದ ಸಮಸ್ಯೆ ಬಗೆಹರಿಸಿದ್ದಾರೆ.ರಾಷ್ಟ್ರೀಯ ಹೆದ್ದಾರಿ,ಔಟರ್ ರಿಂಗ್ ರೋಡ್ ಕಾಮಗಾರಿ, ಬೆಂಗಳೂರು-ಮೈಸೂರು ಹೆದ್ದಾರಿ,ಹೆಚ್ಚು ಅಪಘಾತ ಆಗ್ತಿದ್ದ ಏರ್ಪೋರ್ಟ್ ರಸ್ತೆಯಲ್ಲಿ ಸ್ಕೈ ವಾಕ್ ನಿರ್ಮಾಣದ ಕಾಮಗಾರಿ ನಡೆಸಲಾಗಿದೆ.ಪ್ರಧಾನಮಂತ್ರಿ ಯೋಜನೆಗಳಾದ ಪಿಎಮ್ ಮುದ್ರಾ ಯೋಜನೆ,ಪಿಎ ಸ್ವಾನಿಧಿ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆಗೆ ಹೆಚ್ಚಿನ ಫಲಾನುಭವಿಗಳು ಉತ್ತರ ಕ್ಷೇತ್ರದಲ್ಲೇ ಪಡೆದುಕೊಂಡಿರುವುದು ಕಂಡು ಬಂದಿದೆ.
ಸಂಸದ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಯಶವಂತಪು ಹಾಗೂ ಬ್ಯಾಟರಾಯನಪುರದಲ್ಲಿ ಮೂರು ಹಳ್ಳಿಗಳನ್ನ ದತ್ತು ತೆಗೆದುಕೊಂಡು,ಅಭಿವೃದ್ಧಿ ಮಾಡಲಾಗಿದೆ.ರೈಲ್ವೇ, ರಸಗೊಬ್ಬರ ಸಚಿವರಾಗಿ ರಾಜ್ಯಕ್ಕೆ,ದೇಶಕ್ಕೆ ವಿವಿಧ ಸೇವೆ ನೀಡಿದ್ದು.ಕೊರೋನಾ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿ ಮೆಚ್ಚುಗೆ ಪಡೆದಿದ್ದಾರೆ.ಜನಪ್ರತಿನಿಧಿಯಾಗಿ ಅವರ ಅವಧಿಯಲ್ಲಿ ಕ್ಷೇತ್ರಕ್ಕೆ ತಂದಿರುವ ಯೋಜನೆಗಳು,ಕಾಮಗಾರಿಗಳು ಮಾತ್ರವೇ ಸಂಸದರ ಹೆಸರನ್ನು ಕೊನೆವರೆಗೂ ಉಳಿಸುತ್ತವೆ.
ಕಳೆದ ಬಾರಿ 25 ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡಿದ್ದ ಬಿಜೆಪಿಗೆ ಈ ಬಾರಿ ಸವಾಲು ಹೆಚ್ಚಿದೆ.ಉಚಿತ ಗ್ಯಾರಂಟಿ ಯೋಜನೆಗಳ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನ ಸಾಧಿಸಿರೋ ಕಾಂಗ್ರೆಸ್, ಲೋಕಸಭಾ ಕ್ಷೇತ್ರದಲ್ಲಿ ಶತಾಯಗತಾಯ ಗೆಲ್ಲಲು ಕಸರತ್ತು ನಡೆಸಿದೆ.ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಜಿದ್ದಾಜಿದ್ದಿ ನಡೆಯಲಿದೆ.
ಈ ಬಾರಿ ಅನೇಕರು ಸಂಸದರು ಸ್ಪರ್ಧೆಯಿಂದ ಹಿಂದೆ ಸರಿದು,ವಯೋ ಸಹಯ ನಿವೃತ್ತಿ ಘೋಷಿಸಿದ್ರು.ಅದರಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಸದಾನಂದ ಗೌಡರು ಈಗಾಗಲೇ ರಾಜಕೀಯ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಅನೇಕರ ಹೆಸರುಗಳು ಚಾಲ್ತಿಗೆ ಬಂದಿವೆ.ಬೆಂಗಳೂರು ಉತ್ತರಕ್ಕೆ ಮಾಜಿ ಸಚಿವ ಸಿ.ಟಿ ರವಿ,ಹಾಲಿ ಸಚಿವೆ ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ,ಮಂಡ್ಯ ಸಂಸದೆ ಸುಮಲತಾ,ಎಸ್.ಎಂ.ಕೃಷ್ಣಾ ಅವರ ಸಹೋದರಿ ಪುತ್ರ ಡಾ.ನಿರಂತರ ಗಣೇಶ್ ಹೆಸರು ಮುಂಚೂಣಿಯಲ್ಲಿವೆ.ಇದರ ಜೊತೆಗೆ ಕ್ಷೇತ್ರದವರೇ ಅದ ಮಾಜಿ ಶಾಸಕ ನಂದೀಶ್ ರೆಡ್ಡಿ,ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ನಾರಾಯಣ್ ಗೌಡ ಸೇರಿದಂತೆ ಹಲವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ.ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪ್ರತೀ ಕ್ಷೇತ್ರಕ್ಕೆ ಮೂವರು ಅಭ್ಯರ್ಥಿಗಳ ಹೆಸರು ಶಿಫಾರಸ್ಸು ಮಾಡಲಾಗಿದೆ.
ಮತ್ತೊಮ್ಮೆ ಮೋದಿ ಎನ್ನುವ ಘೋಷಾ ವಾಕ್ಯದೊಂದಿಗೆ ಬಿಜೆಪಿ ಚುನಾವಣಾ ಅಖಾಡಕ್ಕೆ ಧುಮುಕಿದೆ.ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಭಾಗ್ಯಗಳಿಂದ ಚುನಾವಣೆ ಗೆಲ್ಲುವ ಹುಮ್ಮಸ್ಸಿನಲ್ಲಿದೆ.ಉತ್ತರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಯಾರನ್ನ ಅಭ್ಯರ್ಥಿಯಾಗಿ ಘೋಷಿಸಲಿದೆ ಎಂಬುದು ರಹಸ್ಯವಾಗಿದೆ.ನಾಲ್ಕು ಬಾರಿ ಉತ್ತರದಲ್ಲಿ ಗೆದ್ದು ಬೀಗಿರೋ ಬಿಜೆಪಿ ಮತ್ತೊಮ್ಮೆ ಕಮಾಲ್ ಮಾಡುತ್ತಾ ಅಥವಾ ಕಾಂಗ್ರೆಸ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಯಲ್ಲಿ ಸಕ್ಸಸ್ ಆಗ್ತಾರಾ ಎಂಬುದನ್ನು ರಾಜ್ಯದ ಮತದಾರರು ನಿರ್ಧರಿಸಲಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.