ಬೆಂಗಳೂರು: ಆರ್.ರಮೇಶ್ ಕುಮಾರ್ ಅವರು ಸಭಾಧ್ಯಕ್ಷರಾಗಿ ಕಾರ್ಯನಿರ್ವಹಣೆಯಲ್ಲಿ ತೋರಿದ ನಿಷ್ಠೆ, ಬದ್ಧತೆ ಅನುಕರಣೀಯ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಸಭಾಧ್ಯಕ್ಷ ಸ್ಥಾನಕ್ಕೆ ರಮೇಶ್ ಕುಮಾರ್ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ ಅವರು, ಮಾನ್ಯ ರಮೇಶ್ ಕುಮಾರ್ ಅವರು ಸಭಾಧ್ಯಕ್ಷರಾಗಿ ಕಾರ್ಯನಿರ್ವಹಣೆಯಲ್ಲಿ ತೋರಿದ ನಿಷ್ಠೆ, ನಿಷ್ಪಕ್ಷಪಾತತನ ಮತ್ತು ಸಂವಿಧಾನ, ಪ್ರಜಾಪ್ರಭುತ್ವದ ಕಡೆಗೆ ಅವರು ತೋರಿದ ಬದ್ಧತೆ ಅನುಕರಣೀಯವಾದುದು ಎಂದಿದ್ದಾರೆ.


ಅಲ್ಲದೆ, ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಂವಿಧಾನದ ಆಶಯಗಳಿಗೆ ಚ್ಯುತಿ ಬಾರದಂತೆ ರಮೇಶ್ ಕುಮಾರ್ ಅವರು ಕರ್ತವ್ಯ‌ ನಿರ್ವಹಿಸಿದ ರೀತಿ ಪ್ರಶಂಸನೀಯ. ಅವರಿಗೆ ಕಾಂಗ್ರೆಸ್ ಪಕ್ಷದ ಪರವಾದ ಹಾಗೂ ವೈಯಕ್ತಿಕವಾದ ಅಭಿನಂದನೆಗಳು ಮತ್ತು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದಾರೆ.

ವಿಧಾನಸಭೆ ಕಲಾಪದಲ್ಲಿಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದ ಬಳಿಕ ಸ್ಪೀಕರ್ ರಮೇಶ್ ಕುಮಾರ್ ಅವರು ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಆಡಳಿತ ಪಕ್ಷದ ಎಲ್ಲಾ ಸದಸ್ಯರೂ ನನ್ನನ್ನು ವಿಧಾನಸಭಾಧ್ಯಕ್ಷನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದರು. ನಾನು ಕಳೆದ 14 ತಿಂಗಳಿನಿಂದ ಈ ಸ್ಥಾನವನ್ನು ಜವಾಬ್ದಾರಿಯಿಂದ ನಿಭಾಯಿಸಿದ್ದೇನೆ. ಇದುವರೆಗೆ ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ರಮೇಶ್ ಕುಮಾರ್ ಹೇಳಿದ್ದರು.