ಬೆಂಗಳೂರು : ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಬಹಿರಂಗವಾಗಿ ಕರೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಅವರು ಪ್ರತ್ಯೇಕ ಲಿಂಗಾಯತ ಧರ್ಮ ಬೇಡಿಕೆಗೆ ಬಿಜೆಪಿ ಒಪ್ಪುವುದಿಲ್ಲ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ಚಾಲುಕ್ಯ ವೃತ್ತದಲ್ಲಿರುವ ಬಸವ ಮಂಟಪದಲ್ಲಿ ಅಖಿಲ ಭಾರತ ಲಿಂಗಾಯತ ಮಹಾಸಭಾ ಕರೆದಿದ್ದ ತುರ್ತು ಸಭೆ ನೇತೃತ್ವ ವಹಿಸಿದ್ದ ಮಾತೆ ಮಹಾದೇವಿ ಅವರು, ಲಿಂಗಾಯತ ಪ್ರತ್ಯೇಕ ಧರ್ಮದ ಕರೆಗೆ ಓಗೊಟ್ಟ ಸಿದ್ದರಾಮಯ್ಯ ಸರ್ಕಾರಕ್ಕೆ ಮತ ಚಲಾಯಿಸಿ ಎಂದು ತಮ್ಮ ಅನುಯಾಯಿಗಳಿಗೆ ಕರೆ ನೀಡಿದರು.


ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ನಡೆಗೆ ಪ್ರತಿಕ್ರಿಯಿಸಿದ ಮಾತೆ ಮಹದೇವಿ ಅವರು, ಅಮಿತ್ ಷಾ 'ಸುಳ್ಳು ಹೇಳುವ ಮತ್ತು ಜನತೆಯನ್ನು ದಾರಿತಪ್ಪಿಸುವ' ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಏ.18ರ ಬಸವ ಜಯಂತಿ ಆಚರಣೆ ಒಳಗೆ ಲಿಂಗಾಯತ ಪ್ರತ್ಯೇಕ ಧರ್ಮ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಅಲ್ಲದೆ ಕೇಂದ್ರ ಸರ್ಕಾರದ ಇತರ ಧೋರಣೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. 


ಈ ಮೂಲಕ ಇದೇ ಮೊದಲ ಬಾರಿಗೆ ಲಿಂಗಾಯತ ಧರ್ಮದ ಏಕೈಕ ಮಹಿಳಾ ಗುರು ಮಾತೆ ಮಹದೇವಿ ಅವರು ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡುವಂತೆ ಘೋಷಿಸಿದ್ದು, ಇದರಿಂದ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಈ ನಡುವೆ ಲಿಂಗಾಯತ ಮತಗಳು ಬಿಜೆಪಿಗಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷಕ್ಕೆ ಒಲಿಯುವ ಸಾಧ್ಯತೆ ಇದೆ. 


ಮುರುಘಾಮಠದ ಶ್ರೀಗಳು, ಜಯಮೃತ್ಯುಂಜಯ ಸ್ವಾಮಿಜಿ ಸೇರಿದಂತೆ ಬಹಳಷ್ಟು ಲಿಂಗಾಯತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.