ಮಹದಾಯಿ ವಿವಾದ : ಏ.25ರಂದು ರೈತ ಸೇನೆಯಿಂದ ದೆಹಲಿ ಚಲೋ
ಏ.25ರಂದು ರೈತ ಸೇನೆಯಿಂದ ದೆಹಲಿ ಚಲೋ ಹಮ್ಮಿಕೊಳ್ಳುತ್ತಿರುವುದಾಗಿ ಸೇನೆ ಅಧ್ಯಕ್ಷ ವೀರೇಶ ಸೊಬರದಮಠ ತಿಳಿಸಿದ್ದಾರೆ.
ಹುಬ್ಬಳ್ಳಿ : ಮಹದಾಯಿ ಕುಡಿಯುವ ನೀರಿನ ಹೋರಾಟಕ್ಕೆ ರಾಜಕೀಯ ಪಕ್ಷಗಳು ಸಹಕರಿಸದ ಹಿನ್ನೆಲೆಯಲ್ಲಿ ಏ.25ರಂದು ರೈತ ಸೇನೆಯಿಂದ ದೆಹಲಿ ಚಲೋ ಹಮ್ಮಿಕೊಳ್ಳುತ್ತಿರುವುದಾಗಿ ಸೇನೆ ಅಧ್ಯಕ್ಷ ವೀರೇಶ ಸೊಬರದಮಠ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ವೀರೇಶ್ ಅವರು, ಮಹದಾಯಿ ಕುಡಿಯುವ ನೀರು ಹೋರಾಟ ಆರಂಭವಾಗಿ ಸಾವಿರ ದಿನಗಳು ಕಳೆದರೂ ಯಾವುದೇ ಪರಿಹಾರ ದೊರೆತಿಲ್ಲ. ಸರ್ಕಾರಗಳು ರೈತರ ಜೀವನದಲ್ಲಿ ಚೆಲ್ಲಾಟವಾಡುತ್ತಿವೆ. ಇದರಿಂದ ರೈತರಿಗೆ ಬೇಸರವಾಗಿದೆ. ಹೀಗಾಗಿ ಏ.25ರಂದು ದೆಹಲಿ ಚಲೋ ಹಮ್ಮಿಕೊಂಡಿದ್ದು, ರಾಷ್ಟ್ರಪತಿ ಮಧ್ಯಪ್ರವೇಶ ಮಾಡಿ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದು ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುವುದು. ಇಲ್ಲವಾದರೆ ಸರ್ಕಾರದ ಬೇಜವಾಬ್ದಾರಿ ಖಂಡಿಸಿ ದಯಾ ಮರಣಕ್ಕೆ ಅಂದೇ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಹುಬ್ಬಳ್ಳಿಯ ಮೂರು ಸಾವಿರ ಮಠದಿಂದ ದೆಹಲಿ ಚಲೋ ಆರಂಭಿಸಲಿದ್ದು, ಸುಮಾರು 400 ರೈತ ಹೋರಾಟಗಾರರಿಂದ ದಯಾ ಮರಣಕ್ಕೆ ಅರ್ಜಿ ನಿರ್ಧಾರ ಮಾಡಲಾಗಿದೆ ಎಂದರಲ್ಲದೆ, ಚುನಾವಣೆಯಲ್ಲಿ ಮತದಾನ ಮಾಡಬೇಕೇ, ಬೇಡವೇ ಎಂಬುದರ ಬಗ್ಗೆ ಮೇ 5 ರಂದು ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.