ಗದಗ : ಮಹದಾಯಿ ನದಿ ನೀರಿಗಾಗಿ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ರೈತರು ನಡೆಸುತ್ತಿರುವ ನಿರಂತರ ಧರಣಿ ಸತ್ಯಾಗ್ರಹ ಆರಂಭವಾಗಿ ಇಂದಿಗೆ (ಏ.10) ಸಾವಿರ ದಿನ ಪೂರ್ಣಗೊಳ್ಳಲಿದೆ. ಇದರ ಅಂಗವಾಗಿ ನರಗುಂದದಲ್ಲಿ ರೈತರು ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಪಟ್ಟಣದ ಮುಖ್ಯ ಭಾಗದಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ರೈತ ಸಂಘಟನೆಗಳು ಪ್ರತಿಭಟನಾ ಮೆರವಣಿಗೆಯನ್ನೂ ಹಮ್ಮಿಕೊಂಡಿವೆ. 


ಮಲಪ್ರಭ ನದಿ ಅಚ್ಚುಕಟ್ಟು ಪ್ರದೇಶದ 4 ಜಿಲ್ಲೆಗಳ 11 ತಾಲೂಕಿನ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು, ಕರ್ನಾಟಕ ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಮಹದಾಯಿ ಹೋರಾಟ ಮತ್ತಷ್ಟು ಮಹತ್ವ ಪಡೆದಿದೆ. ಅಲ್ಲದೆ, ಪ್ರತಿಭಟನೆಯ ನಂತರ ಮಹದಾಯಿ ಹೋರಾಟದ ಸಂಬಂಧ ತಮ್ಮ ಮುಂದಿನ ನಡೆಯ ಕುರಿತು ಹೋರಾಟಗಾರರು ಮಹತ್ವದ ನಿರ್ಣಯ ಪ್ರಕಟಿಸಲಿದ್ದಾರೆ.


ಮಹದಾಯಿ ನದಿ ನೀರಿಗಾಗಿ ರೈತ ಸೇನೆ ರಾಜ್ಯ ಘಟಕ ಅಧ್ಯಕ್ಷ ವೀರೇಶ ಸೊಬರದಮಠ ಹಾಗೂ ಶಂಕ್ರಣ್ಣ ಅಂಬಲಿ ಅವರ ನೇತೃತ್ವದಲ್ಲಿ ರೈತ ಹುತಾತ್ಮ ವೀರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲಿನ ಸಮೀಪ 2015ರ ಜುಲೈ 16ರಂದು ಧರಣಿ ಆರಂಭಿಸಿದರು. ನಂತರದ ದಿನಗಳಲ್ಲಿ ಇದು ಜನಾಂದೋಲನವಾಗಿ ಪರಿವರ್ತನೆಯಾಗಿ ಸಾಮಾನ್ಯ ರೈತರು, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರು, ಸಂಘಟನೆಗಳು, ಚಿತ್ರರಂಗದ ಪ್ರಮುಖರು, ಮಠಾಧೀಶರ ಬೆಂಬಲ ಪಡೆಯಿತು. ಮಹದಾಯಿ ನದಿ ನೀರು ವಿವಾದ ಆರಂಭವಾಗಿ ಹಲವು ವರ್ಷಗಳೇ ಕಳೆದರೂ ಇಂದಿಗೂ ಸಮಸ್ಯೆ ಬಗೆಹರಿದಿಲ್ಲದಿರುವುದು ವಿಷಾದಕರ ಸಂಗತಿ.