ಬೆಂಗಳೂರು: ಈ ಬಾರಿ ಕರ್ನಾಟಕ ವಿಧಾನಸಭೆಯಲ್ಲಿ ಹಲವಾರು ಪ್ರಗತಿಪರ ಸಂಘಟನೆಗಳ ಒಕ್ಕೂಟವಾದ ಜನಾಂದೋಲನಗಳ ಮಹಾಮೈತ್ರಿ ಚುನಾವಣಾ ರಾಜಕೀಯಕ್ಕೆ ದಾಪುಗಾಲು ಇಡುವತ್ತ ಚಿಂತನೆ ನಡೆಸಿದೆ. 


COMMERCIAL BREAK
SCROLL TO CONTINUE READING

ಸಾಹಿತಿ ದೇವನೂರ ಮಹಾದೇವ, ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠರವರ ನೇತೃತ್ವದಲ್ಲಿ ಚಾಲನೆಗೆ ಬಂದಂತಹ ಈ ಒಕ್ಕೂಟ ಪ್ರಮುಖವಾಗಿ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೇಸ್,ಬಿಜೆಪಿ,ಮತ್ತು ಜೆಡಿಎಸ್ ಗೆ ಪರ್ಯಾಯವಾಗಿ ರಾಜಕೀಯ ಶಕ್ತಿಯನ್ನು ಕಟ್ಟುವ ಸಲುವಾಗಿ ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ಚಿಂತನೆಯನ್ನು ನಡೆಸಿದೆ.ಈ ಕುರಿತಾಗಿ ಬುಧವಾರದಂದು ನಡೆಯುವ ಸಭೆಯಲ್ಲಿ ಸಮಗ್ರವಾಗಿ ಒಕ್ಕೂಟ ಚರ್ಚಿಸಲಿದೆ ಎಂದು ಸಾಹಿತಿ ದೇವನೂರು ಮಹಾದೇವ ತಿಳಿಸಿದ್ದಾರೆ. ಜನಾಂದೋಲನಗಳ ಮಹಾಮೈತ್ರಿ ಒಕ್ಕೂಟದಲ್ಲಿ ದಲಿತಪರ ಸಂಘಟನೆಗಳು,ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಆಮ್ ಆದ್ಮಿ ಪಕ್ಷ, ಬಿಎಸ್ಪಿ, ಎಡಪಕ್ಷಗಳು. ಸಾಮಾನ್ಯ ಹಿತಾಸಕ್ತಿಗಳಿಗನುಗುಣವಾಗಿ ಪಾಲ್ಗೊಳ್ಳುತ್ತಿವೆ ಎಂದು ಹೇಳಲಾಗಿದೆ. 


ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಾಗಿ ಪರಿಕ್ರಯಿಸಿರುವ ಶಾಸಕ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ನಾಯಕ  ಕೆ.ಎಸ್.ಪುಟ್ಟಣಯ್ಯರವರು "ನಾವು ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕೆನ್ನುವುದರ ಕುರಿತಾಗಿ ಇನ್ನು ಹಲವು ಗೊಂದಲಗಳಿವೆ, ಅದರಲ್ಲಿ ನಾವು ಗೆಲ್ಲಬಹುದಾದ ಕ್ಷೇತ್ರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು ಕೆಲವರು ಕನಿಷ್ಠ ಪ್ರತಿ ಜಿಲ್ಲೆಗೊಂದರಂತೆ ಒಂದು ಕ್ಷೇತ್ರಕ್ಕೆ ಸ್ಪರ್ಧಿಸಬೇಕೆನ್ನುವ ಅಭಿಪ್ರಾಯವು ಇದೆ, ಆ ಮೂಲಕ ಮತದಾರರಿಗೆ ಪರಿಚಯವಾದ ಹಾಗೆ ಆಗುತ್ತದೆ ಎಂದು ಸಲಹೆ ನೀಡಿದ್ದಾರೆ. ಆದ್ದರಿಂದ ಈ ಕುರಿತಾಗಿ ಸಮಗ್ರವಾಗಿ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರುತ್ತೇವೆ ಎಂದು ಅವರು ತಿಳಿಸಿದ್ದಾರೆ.