ಬೆಳಗಾವಿ: ಚಳಿಗಾಲದ ಎರಡನೇ ದಿನದ ಅಧಿವೇಶನದಲ್ಲಿ ಜಾರ್ಜ್ ರಾಜೀನಾಮೆಯ ಗದ್ದಲದ ನಡುವೆಯೂ ಸರ್ಕಾರ ಕೆಲವು ಪ್ರಮುಖ ವಿಧೇಯಕಗಳನ್ನು ಮಂಡನೆ ಮಾಡಿತು.


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ಕೆಲವು ಪ್ರದೇಶಗಳಲ್ಲಿ ಆಚರಿಸುತ್ತಿರುವ ಮೌಢ್ಯವನ್ನು ತೆಗೆದು ಹಾಕಲು ಅಮಾನವೀಯ ದುಷ್ಟ ಪದ್ಧತಿಗಳು ಮತ್ತು ವಾಮಾಚಾರ ಪ್ರತಿಬಂಧಕ ಮತ್ತು ನಿರ್ಮೂಲನೆ ವಿಧೇಯಕವನ್ನು ಮಂಡಿಸಲಾಯಿತು. ಇದು ವಾಮಾಚಾರಿಗಳ ದುರಾಚಾರಕ್ಕೆ ಬಲಿಯಾಗುವ ಜನರನ್ನು ರಕ್ಷಿಸಲು ಮಂಡಿಸಿದ ಹೊಸ ವಿಧೇಯಕ. ಈ ವಿಧೇಯಕದ ಪ್ರಕಾರ ದುಷ್ಟ ಪದ್ಧತಿಗಳು ಮತ್ತು ವಾಮಾಚಾರಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.


ಈ ವಿಧೇಯಕದ ಪ್ರಮುಖ ಅಂಶಗಳು-
* ವಾಮಾಚಾರ ಪ್ರಚಾರ ಮಾಡಬಾರದು, ಇದಕ್ಕೆ ಪ್ರೋತ್ಸಾಹ, ಇಲ್ಲವೇ ಪ್ರಸಾರ ಮಾಡುವ, ವಾಮಾಚಾರ ಎಸಗುವ ವ್ಯಕ್ತಿ ಇಲ್ಲವೇ ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು. 
* ದುಷ್ಟ ಆಚರಣೆಗಳನ್ನು ಮಾಡುವ ವ್ಯಕ್ತಿಯನ್ನು ಮೆಟ್ರೋ ಪಾಲಿಟನ್ ಮಟ್ಟದ ಕೋರ್ಟನಲ್ಲಿ ವಿಚಾರಣೆಯಾಗಬೇಕು. 
* ವಾಮಾಚಾರಕ್ಕೆ ಕಡಿವಾಣ ಹಾಕಲು ಜಾಗೃತ ಅಧಿಕಾರಿಗಳನ್ನು ನೇಮಕ ಮಾಡುವುದು. 
* ವಾಸ್ತುಶಾಸ್ತ್ರದ ಕುರಿತು ಸಲಹೆ, ಜ್ಯೋತಿಷ್ಯ ಮತ್ತು ಇತರ ಜ್ಯೋತಿಷಿಗಳಿಂದ ಸಲಹೆ ಪಡೆಯಬಹುದು. 
* ಜೈನ ಸಂಪ್ರದಾಯದಂತೆ ಕೇಶಲೋಚನೆಗೆ ವಿಧೇಯಕದಲ್ಲಿ ಅವಕಾಶ. ವಾಮಾಚಾರದ ನೆಪದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಮಾಡೋದು ನಿಷೇಧ. 
* ಬೆತ್ತಲೆ ಮೆರವಣಿಗೆ ಅಥವಾ ದೈನಂದಿನ ಚಟುವಟಿಕೆಗಳಿಗೆ ನಿಷೇಧ ಹಾಕುವುದಕ್ಕೆ ವಿಧೇಯಕದಲ್ಲಿ ಆಕ್ಷೇಪ.
* ಇಂದ್ರಿಯ ಶಕ್ತಿಯನ್ನು ಆಹ್ವಾನಿಸಲಾಗಿದೆ ಅಂತ ಭಯ ಮೂಡಿಸುವುದು ನಿಷೇಧ.
* ದೆವ್ವವನ್ನು ಉಚ್ಛಾಟನೆ ಮಾಡುವ ನೆಪದಲ್ಲಿ ಚಪ್ಪಲಿ ಅದ್ದಿದ ನೀರನ್ನು ಕುಡಿಸಬಾರದು.
* ಕೋಲು ಅಥವಾ ಚಾಟಿಯಿಂದ ವ್ಯಕ್ತಿಗೆ ಹೊಡೆದು ದೆವ್ವ ಬಿಡಿಸುತ್ತೇನೆ ಅನ್ನೋದು ನಿಷೇಧ.
* ಕೂದಲಿನಿಂದ ಕಟ್ಟಿ ವ್ಯಕ್ತಿಯನ್ನು ಛಾವಣಿಗೆ ನೇತು ಹಾಕುವುದು ನಿಷೇಧ.
* ದೇಹಕ್ಕೆ ಬಿಸಿ ಮಾಡಿದ ವಸ್ತುವನ್ನು ಮುಟ್ಟಿಸಿ ನೋವುಂಟು ಮಾಡುವುದು ನಿಷೇಧ.
* ವ್ಯಕ್ತಿಯ ಬಾಯಿಯಲ್ಲಿ ಬಲವಂತವಾಗಿ ಮೂತ್ರ, ಮಲವನ್ನು ಹಾಕುವುದು ನಿಷೇಧ.
* ವ್ಯಕ್ತಿಯನ್ನು ಸೈತಾನ ಅಥವಾ ಸೈತಾನನ ಅವತಾರ ಅಂತ ಘೋಷಣೆ ಮಾಡೋದು ತಪ್ಪು.
* ಶಸ್ತ್ರಚಿಕಿತ್ಸೆಯನ್ನು ಬೆರಳುಗಳ ಮೂಲಕ ಮಾಡುತ್ತೇನೆ ಅನ್ನೋದು ಅಪರಾಧ.
* ಅಲೌಕಿಕ ಶಕ್ತಿಯಿದೆ ಅಂತ ವ್ಯಕ್ತಿಯೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ನಿರತವಾಗುವುದು ನಿಷೇಧ.
* ಕೊಕ್ಕೆಯಿಂದ ನೇತು ಹಾಕುವುದು ಇಲ್ಲವೇ ದೇಹದೊಳಗೆ ತೂರಿಸುವುದು ಅಪರಾಧ.
* ಮಕ್ಕಳನ್ನು ಮುಳ್ಳುಗಳ ಮೇಲೆ ಎಸೆಯುವುದು ಇಲ್ಲವೇ ಅದಕ್ಕೆ ಅನುಕೂಲ ಕಲ್ಪಿಸುವುದು.
* ಋತುಮತಿಯಾದ ಮಹಿಳೆ ಇಲ್ಲವೇ ಗರ್ಭೀಣಿಯಾದ ಸ್ತ್ರೀಯನ್ನು ಗ್ರಾಮದಿಂದ ಹೊರಗಿಡುವುದು ಅಪರಾಧ.
* ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವಂತಹ ಕ್ರಮ ಅಮಾನವೀಯ.
* ಭಾನಾಮತಿ ಹೆಸರಿನಲ್ಲಿ ರಾತ್ರಿ ಅಥವಾ ಬೆಳಗಿನ ವೇಳೆಯಲ್ಲಿ ಕಲ್ಲುಗಳನ್ನು ಎಸೆಯುವುದು ಅಪರಾಧ.
ಈ ರೀತಿಯಲ್ಲಿ ರಾಜ್ಯದಲ್ಲಿ ಅನುಸರಿಸಲಾಗುತ್ತಿರುವ ಹಲವು ದುಷ್ಟ ಆಚರಣೆಗಳಿಗೆ ಸರ್ಕಾರ ತಡೆಯೊಡ್ಡಿದೆ. 


ಬಡ್ತಿ ಮೀಸಲಾತಿ ಗೊಂದಲ ಪರಿಹಾರಕ್ಕೆ ವಿಧೇಯಕ ಮಂಡನೆ-


ಕರ್ನಾಟಕ ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ವಿಧೇಯಕವನ್ನು ಮಂಡನೆ ಮಾಡಲಾಯಿತು. 


ಈ ವಿಧೇಯಕದಲ್ಲಿ ದಲಿತ ವರ್ಗದ ಅಧಿಕಾರಿಗಳ ಹಿತ ಕಾಪಾಡಲು ಮುಂದಾದ ಸರ್ಕಾರವು ಬಡ್ತಿ ಮೀಸಲಾತಿ ಮುಂದುವರಿಸುವುದರಿಂದ ಆಡಳಿತದ ದಕ್ಷತೆಗೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ವಿಧೇಯಕದಲ್ಲಿ ಪ್ರಸ್ತಾಪದಲ್ಲಿ ತಿಳಿಸಿದೆ.


ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯದ ಆಶಯವನ್ನು ಪರಿಗಣಿಸಿ  ಸರ್ಕಾರದ ಆಡಳಿತ ವಿಭಾಗಗಳಲ್ಲಿ ಶೋಷಿತ ಸಮುದಾಯಗಳ ಪ್ರಾತಿನಿದ್ಯತೆಯನ್ನು ಹೆಚ್ಚಿಸಲು ಮುಂದಾಗಿರುವ  ಸರ್ಕಾರ, ಅದಕ್ಕೆ ಶಾಶ್ವತ ಕಾನೂನಾತ್ಮಕ ನೆಲೆಗಟ್ಟಿನಲ್ಲಿ  ರೂಪುರೇಷೆಗಳನ್ನು ಸಿದ್ದಪಡಿಸುವುದರ ಮೊದಲ ಭಾಗವಾಗಿ ರಾಜ್ಯ ನಾಗರಿಕ ಸೇವಾ ಹುದ್ದೆಗಳಲ್ಲಿ ಸರ್ಕಾರಿ ನೌಕರರಿಗೆ  ಮೀಸಲಾತಿ ಆಧಾರದ ಮೇಲೆ ಬಡ್ತಿಗೆ ಇರುವ ಜೇಷ್ಠತೆಯನ್ನು ವಿಸ್ತರಿಸುವ  ಮತ್ತು ಅದರ ಕುರಿತು ಉಂಟಾಗಿರುವ ಗೊಂದಲಗಳಿಗೆ ಪರಿಹಾರ ಕೊಂಡುಕೊಳ್ಳುವ ನಿಟ್ಟಿನಲ್ಲಿ ಈ ಮಸೂದೆಯನ್ನು ಸರ್ಕಾರ ಮಂಡನೆ ಮಾಡಲು ಹೊರಟಿದೆ. ಈ ಮಸೂದೆಯು ಮುಖ್ಯವಾಗಿ  ಹಲವಾರು ಕಾನೂನು ತಜ್ಞರ ಸಲಹೆಗಳನ್ನು ಪರಿಗಣಿಸಿ ಮುಖ್ಯ ಕಾರ್ಯದರ್ಶಿಗಳು ಸಲ್ಲಿಸಿದ ವರದಿಯ ಆಧಾರದ ಮೇಲೆ ಈ ವಿಧೇಯಕವನ್ನು ಜಾರಿಗೆ ತರಲಾಗಿದೆ.