ದಕ್ಷಿಣ ಕನ್ನಡ:  ಮಂಗಳೂರಿನ ಮಳಲಿ ಎಂಬಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ದೇವಸ್ಥಾನದ ಕುರುಹು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇಂದು ತಾಂಬೂಲ ಪ್ರಶ್ನೆಯನ್ನು ಇಡಲಾಗಿದೆ. ಮಸೀದಿಯಿಂದ ಒಂದು ಕಿ. ಮೀ ದೂರದಲ್ಲಿರುವ ಶ್ರೀರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆಯನ್ನು ಇಡಲಾಗಿದೆ. ಈ ಸಂದರ್ಭದಲ್ಲಿ ಮಸೀದಿ ಜಾಗದಲ್ಲಿ ದೈವ ಸಾನಿಧ್ಯ ಇರೋದು ಸ್ಪಷ್ಟವಾಗಿ ಗೋಚರವಾಗಿದೆ ಎಂದು ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲಿ ಅಭಿಷೇಕಕ್ಕೆ ಅನುಮತಿ ಕೋರಿ ಅರ್ಜಿ, ಜುಲೈ 1ಕ್ಕೆ ವಿಚಾರಣೆ


ತಾಂಬೂಲ ಪ್ರಶ್ನೆಗೆ ಪ್ರೇರಣಾ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ ಬಳಿಕ ಕಾರ್ಯ ಆರಂಭಿಸಲಾಗಿದೆ. "ತಿಳಿದು ತಿಳಿಯದೆ ಮಾಡಿದ ತಪ್ಪಿನ ಅರಿವು ಇವತ್ತು ಆಗಬೇಕು. ಇಂದು ಸತ್ಕಾರ್ಯ ಮಾಡುವ ಕಾಲ ಬಂದಿದೆ. ಸತ್ಯದ ನುಡಿ ದೈವಜ್ಞರ ಬಾಯಲ್ಲಿ ಬರಬೇಕು. ಮಳಲಿಯಲ್ಲಿರುವ ಸಾನಿಧ್ಯ ಯಾವುದು ಎಂಬುದಕ್ಕೆ ಕ್ಷಿಪ್ರ ಉತ್ತರ ಸಿಗಬೇಕು" ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ. 


ಪೊದುವಾಳ್ ಜಿ.ಪಿ ಗೋಪಾಲಕೃಷ್ಣ ಪಣಿಕ್ಕರ್ ಮಾತನಾಡಿದ್ದು, "ನಾನು ದೈವ ಸಾನಿಧ್ಯ ಇದೆಯೋ ಇಲ್ಲವೋ ಎಂದು ಹೇಳಬಲ್ಲೆ. ಆದರೆ ದೇವಸ್ಥಾನದ ಇತ್ಯಾದಿ ವಿಚಾರಗಳು ಅಷ್ಟಮಂಗಳ ಪ್ರಶ್ನೆ ಮೂಲಕವೇ ಗೊತ್ತಾಗಬೇಕು. ಪ್ರಾರ್ಥಿಸಿ ಇಟ್ಟ ರಾಶಿಯಲ್ಲಿ ಪೂರ್ಣವಾದ ಚೈತನ್ಯ ಇದ್ದು, ಪೂರ್ವದಲ್ಲಿ ಇದೊಂದು‌ ಮಠದ ರೂಪದಲ್ಲಿ ಇತ್ತು ಎಂದು ಕಂಡು ಬರುತ್ತಿದೆ. ಇದು ದೈವ ಸಾನಿಧ್ಯ ಇದ್ದ ಸ್ಥಳ" ಎಂದು ಸ್ಪಷ್ಟನೆ ನೀಡಿದ್ದಾರೆ. 


"ಮಸೀದಿ ಜಾಗದಲ್ಲಿ ದೈವ ಸಾನಿಧ್ಯ ಇರೋದು ಸ್ಪಷ್ಟ. ತಾಂಬೂಲಾರೂಢ ರಾಶಿ ಸ್ಥಿರ ಬಂದಾಗ ಅದು ಪೂರ್ಣ ಸ್ಥಳದ ಬಗ್ಗೆ ಮಾಹಿತಿ ಕೊಡುತ್ತದೆ. ಆ ಜಾಗದವರು ಕೂಡ ದೇವ ಸಾನಿಧ್ಯದ ಅಭಿವೃದ್ಧಿಗೆ‌ ಮುಂದಾಗಬೇಕು. ಜಾಗದ ಪತ್ತೆ ಪ್ರಯತ್ನಕ್ಕೆ ದೈವಾನುಗ್ರಹ ಪೂರ್ಣವಿದೆ" ಎಂದು ಮಾಹಿತಿ ನೀಡಿದರು. 


ಕಳೆದ ಕೆಲ ದಿನಗಳಿಂದ ದೇಶದಲ್ಲಿ ರಾಜರ ಕಾಲದಲ್ಲಿ ದೇವಸ್ಥಾನಗಳನ್ನು ಒಡೆದು ಅಲ್ಲಿ ಮಸೀದಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ಕುರುಹು ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಉತ್ತರಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಜೊತೆಗೆ ಮಥುರಾದ ಈದ್ಗಾ ಮಸೀದಿಯೂ ಶ್ರೀ ಕೃಷ್ಣನಿಗೆ ಸಂಬಂಧಿಸಿದ್ದು ಎಂಬೆಲ್ಲಾ ವಿವಾದಗಳು ಇದೀಗ ಮುನ್ನೆಲೆಗೆ ಬರುತ್ತಿದೆ. ಅಂತೆಯೇ ಕರ್ನಾಟಕದ ಮಂಗಳೂರಿನ ಮಳಲಿ ಎಂಬಲ್ಲಿರುವ ಮಸೀದಿಯಲ್ಲಿ ದೇವಸ್ಥಾನದ ಕುರುಹು ಇದೆ ಎಂದು ಆರೋಪಿಸಿ ಇಂದು ಹಿಂದೂ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ತಾಂಬೂಲ ಪ್ರಶ್ನೆಯನ್ನು ಇಡಲಾಗುತ್ತಿದೆ. 


ಕೇರಳದ ಗೋಪಾಲಕೃಷ್ಣ ಪೊದುವಾಳ್ ಮತ್ತು ಒಬ್ಬರು ಜ್ಯೋತಿಷಿಗಳಿಂದ ಪ್ರಶ್ನಾ ಚಿಂತನೆ ನೆರವೇರುತ್ತಿದೆ. ತಾಂಬೂಲ ಪ್ರಶ್ನೆ ಎಂಬುದು ವೀಳ್ಯದೆಲೆಯ ಮೂಲಕ ರೇಖೆ, ಕಾಲ ಮತ್ತು ಗ್ರಹಗತಿಗಳನ್ನು ನೋಡಿ ಉತ್ತರ ಕಂಡುಕೊಳ್ಳುವುದಾಗಿದೆ. 


ಸದ್ಯ ಮಂಗಳೂರಿನ ಮಳಲಿ ಬಳಿಯಿರುವ ರಾಮಾಂಜನೇಯ ಭಜನಾ ಮಂದಿರದ ಬಳಿಕ ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಎರಡು ಎಸಿಪಿ, ಏಳು ಇನ್ಸ್‌ಪೆಕ್ಟರ್, ಹನ್ನೆರಡು ಪಿಎಸ್ಐ, ಹತ್ತು ಎಎಸ್‌ಐ, 120 ಸಿವಿಲ್ ಸ್ಟಾಪ್‌ಗಳನ್ನು ನಿಯೋಜನೆ ಮಾಡಲಾಗಿದೆ. ಮಸೀದಿಯ 500 ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. 


ಇದನ್ನು ಓದಿ: ಮಂಗಳೂರಿನ ಮಸೀದಿಯಲ್ಲಿ ದೇವಸ್ಥಾನದ ಕುರುಹು ಪತ್ತೆ: ತಾಂಬೂಲ ಪ್ರಶ್ನೆ ಮೂಲಕ ಸಿಗಲಿದೆ ಉತ್ತರ


ಮಂಗಳೂರು ನಗರ ಹೊರವಲಯದ ಮಳಲಿ ಪೇಟೆ ಜುಮ್ಮಾ ಮಸೀದಿಯ ಪುನ‌ರ್ ನಿರ್ಮಾಣದ ವೇಳೆ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸಂಘ ಪರಿವಾರದ ಸಂಘಟನೆಗಳು ತಾಂಬೂಲ ಪ್ರಶ್ನೆ ಕಾರ್ಯಕ್ರಮ ನಡೆಸುತ್ತಿವೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.