ಟಿಕ್ ಟಾಕ್ ಹುಚ್ಚಿನಿಂದ ಪ್ರಾಣವನ್ನೇ ಕಳೆದುಕೊಂಡ!
ಜೂನ್ 19ರಂದು ಟಿಕ್ ಟಾಕ್ ವೀಡಿಯೋಗಾಗಿ ಸ್ಟಂಟ್ ಮಾಡಲು ಹೋಗಿ ಕತ್ತು ಮತ್ತು ಬೆನ್ನು ಮೂಳೆ ಮುರಿದುಕೊಂಡಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ತುಮಕೂರು: ಟಿಕ್ ಟಾಕ್ ಹುಚ್ಚಿಗೆ ಬಿದ್ದು ಸ್ಟಂಟ್ ಮಾಡಲು ಹೋಗಿ ಕುತ್ತಿಗೆ ಮುರಿದುಕೊಂಡಿದ್ದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯ ಯುವಕ ಕುಮಾರ್(22) ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಜೂನ್ 19ರಂದು ಟಿಕ್ ಟಾಕ್ ವೀಡಿಯೋಗಾಗಿ ಸ್ಟಂಟ್ ಮಾಡಲು ಹೋಗಿ ಕತ್ತು ಮತ್ತು ಬೆನ್ನು ಮೂಳೆ ಮುರಿದುಕೊಂಡಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆರ್ಕೆಸ್ಟ್ರಾದಲ್ಲಿ ಡ್ಯಾನ್ಸರ್ ಮತ್ತು ಸಿಂಗರ್ ಆಗಿದ್ದ ಕುಮಾರ್ ತುಮಕೂರು ಭಾಗದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದ ಎನ್ನಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಇದುವರೆಗೂ ಟಿಕ್ ಟಾಕ್ ಮೋಡಿಗೆ ಮರುಳಾಗಿ ಸಾಕಷ್ಟು ಸಾಹಸಮಯ ವೀಡಿಯೋಗಳನ್ನು ಮಾಡುವ ಯುವಜನತೆ ಇನ್ನಾದರೂ ಈ ಘಟನೆಯಿಂದ ಎಚ್ಚೆತ್ತುಕೊಳ್ಳಬೇಕಿದೆ.