ಮಂಗಳೂರು: ಇತ್ತೀಚೆಗೆ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆಗೆ ಪ್ರತಿಕಾರವಾಗಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಇಂದು ಬೆಳಿಗ್ಗೆ ಮೃತಪಟ್ಟಿದ್ದ ವ್ಯಾಪಾರಿ ಬಶೀರ್ ಕುಟುಂಬಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಮದ್ಯೆ ಬಶೀರ್ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದ್ದು, ಬಶೀರ್ ಪುತ್ರ ವಿದೇಶದಿಂದ ಆಗಮಿಸಿದ ನಂತರ ರಾತ್ರಿ 7 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಗುವುದು. ಪುತ್ರ ಬರುವುದು ತಡವಾದರೆ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಮೃತದೇಹದ ಮೆರವಣಿಗೆಗೆ ಅವಕಾಶ ಇರುವುದಿಲ್ಲ. ಮೃತದೇಹವನ್ನು ಮೊದಲು ಆಕಾಶಭವನದ ನಿವಾಸಕ್ಕೆ ಕೊಂಡೊಯ್ಯಲಾಗುವುದು. ನಂತರ ಕುಳೂರು ಜುಮ್ಮಾ ಮಸೀದಿಯಲ್ಲಿ ಅಂತಿಮ ದರ್ಶನವಾದ ನಂತರ  ಜುಮ್ಮಾ ಮಸೀದಿಯಲ್ಲಿ ದಫನ್ ಮಾಡಲಾಗುವುದು ಎಂದು ಶಾಸಕ ಮೊಯಿದ್ದೀನ್ ಬಾಬಾ ತಿಳಿಸಿದ್ದಾರೆ.


ಸಿಎಂ ಪ್ರತಿಕ್ರಿಯೆ : ಇನ್ನು, ದೀಪಕ್ ಮತ್ತು ಬಶೀರ್ ಹತ್ಯೆಗೆ ಸಂಬಂಧಿಸಿದಂತೆ ವ್ಯಾಪಕ ಟೀಕೆ, ಆರೋಪಗಳು, ರಾಜಕೀಯ ಹೇಳಿಕೆಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ 'ಯಾರೂ ಕೂಡ ಶವದ ಮೇಲೆ ರಾಜಕಾರಣ ಮಾಡಬಾರದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಮನವಿ ಮಾಡಿದ್ದಾರೆ.


ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ದಾಳಿಗೊಳಗಾಗಿ ಬಶೀರ್‌ ಅವರು ಸಾವನ್ನಪ್ಪಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ 'ಧಾರ್ಮಿಕ ಭಾವನೆಗಳನ್ನು ಕೆರಳಿಸುವುದರಿಂದ ಸಮಾಜಕ್ಕೆ ಹಾನಿಯಾಗುತ್ತದೆ, ಅದರಿಂದ ಲಾಭ ಯಾರಿಗೂ ಇಲ್ಲ' ಎಂದರು. 


"ಬಿಜೆಪಿಯವರು ಒಬ್ಬರು ಸತ್ತ ತಕ್ಷಣ ಪ್ರತಿಭಟನೆ ಮಾಡುತ್ತಾರೆ. ಅವರಿಗೆ ಮನುಷತ್ವ ಇದ್ದರೆ ಈಗಲೂ ಪ್ರತಿಭಟನೆ ಹಮ್ಮಿಕೊಳ್ಳಬೇಕಲ್ಲ, ಮುಸ್ಲಿಂ ಸತ್ತರೆ ಯಾಕೆ ಪ್ರತಿಭಟನೆ ನಡೆಸುವುದಿಲ್ಲ' ಎಂದು ಕಿಡಿ ಕಾರಿದರು. 


ಈ ಮಧ್ಯೆ ನಗರದಲ್ಲಿ ಯಾವುದೇ ಕೋಮುಗಲಭೆಗೆ ಅವಕಾಶ ನೀಡದಂತೆ, ಶಾಂತಿ ಸುವ್ಯವಸ್ಥೆ ಕಾಪಾಡಲು ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜ.3 ರಂದು ಹತ್ಯೆಯಾದ ದೀಪಕ್ ರಾವ್ ಹಾಗೂ ಇಂದು ನಿಧನರಾದ ಬಶೀರ್ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಭೇಟಿ ನೀಡಿ ಸಾಂತ್ವನ ಹೇಳುವ ಸಾಧ್ಯತೆಯಿದೆ.