ಅಂಬಿ ಹೃದಯ ಸ್ತಂಬನಕ್ಕೆ ಕಾರಣವಾಯ್ತೇ ಮಂಡ್ಯ ಬಸ್ ದುರಂತ?
ಮಂಡ್ಯ ಬಸ್ ದುರಂತವೂ ಅಂಬರೀಶ್ ಸಾವಿಗೆ ಕಾರಣವಾಗಿರಬಹುದು ಎಂಬ ಮಾತು ಅಭಿಮಾನಿ ಬಳಗದಲ್ಲಿ ಕೇಳಿ ಬರುತ್ತಿದೆ.
ಬೆಂಗಳೂರು: ಕನ್ನಡ ಚಿತ್ರ ರಂಗದ ಹಿರಿಯ ನಟ, ಮಾಜಿ ಕೇಂದ್ರ ಸಚಿವ ಅಂಬರೀಶ್ ಅವರ ಸಾವಿಗೆ ಮಂಡ್ಯ ಬಸ್ ದುರಂತವೂ ಒಂದು ಮುಖ್ಯ ಕಾರಣ ಎನ್ನಲಾಗುತ್ತಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿಯ ವಿಸಿ ನಾಳೆಗೆ ಖಾಸಗಿ ಬಸ್ ಉರುಳಿಬಿದ್ದ ಘಟನೆ ಶನಿವಾರ ಮಧ್ಯಾಹ್ನ ನಡೆದಿತ್ತು. ಈ ಘಟನೆಯಲ್ಲಿ ಒಂದೇ ಕುಟುಂಬದ 5 ಸೇರಿ ಒಟ್ಟು 30 ಮಂದಿ ಸಾವನ್ನಪ್ಪಿದ್ದರು. ಚಾಲಕನ ನಿರ್ಲಕ್ಷ್ಯದಿಂದಾಗಿ ಬಸ್ ನಾಲೆಗೆ ಉರುಳಿತ್ತು. ಈ ಘಟನೆಯಿಂದ ಅಂಬರೀಶ್ ತೀವ್ರ ನೊಂದಿದ್ದರು ಎಂದು ಮೂಲಗಳು ತಿಳಿಸಿವೆ.
ಮಂಡ್ಯ ಬಳಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಖಾಸಗಿ ಚಾನಲ್ಗೆ ಮಾತನಾಡುವ ಮೂಲಕ ಅಂಬರೀಶ್ ಸಾಂತ್ವನ ಹೇಳಿದ್ದರು. ಸಾಮಾನ್ಯವಾಗಿ ಚಾಲಕರು ಅದೇ ಮಾರ್ಗವಾಗಿ ನಿತ್ಯವೂ ಬಸ್ ಚಾಲನೆ ಮಾಡುತ್ತಾರೆ. ಹೀಗಿರುವಾಗ ಅಪಾಯದ ಸ್ಥಳ ಅರಿತು ಚಾಲನೆ ಮಾಡಬೇಕಿತ್ತು ಎಂದು ಹೇಳಿದ್ದರಲ್ಲದೆ, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿ, ಮುಂದೆ ಇಂತಹ ಅನಾಹುತಗಳು ಆಗದಂತೆ ಎಚ್ಚರವಹಿಸಬೇಕು ಎಂದು ಅಂಬರೀಷ್ ಸಲಹೆ ನೀಡಿದ್ದರು.
ಈ ಘಟನೆ ನಂತರ ಸಂಜೆ 4.30ರವರೆಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಭಾ.ಮ.ಹರೀಶ್ ಅವರ ಜತೆ ತಮ್ಮ ನಿವಾಸದಲ್ಲಿ ಮಾತನಾಡುತ್ತಾ ಕುಳಿತಿದ್ದ ಅಂಬರೀಶ್ ಅವರ ಆರೋಗ್ಯ ಸಂಜೆ 5 ಗಂಟೆ ವೇಳೆಗೆ ಏರುಪೇರಾಗಿದೆ. ತೀವ್ರ ಎದೆನೋವು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಕೂಡಲೇ ಕುಟುಂಬದ ಸದಸ್ಯರು ಮತ್ತು ಆತ್ಮೀಯರು ವಿಕ್ರಂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಡಾ.ಸತೀಶ್ ಮತ್ತು ತಂಡ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಆರಂಭಿಸಿದರಾದರೂ ರಾತ್ರಿ 11 ಗಂಟೆ ಸುಮಾರಿಗೆ ಅಂಬರೀಶ್ ಕೊನೆಯುಸಿರೆಳೆದಿದ್ದಾರೆ.
ಈ ಹಿಂದೆಯೂ ಸಾಕಷ್ಟು ಬಾರಿ ಅಂಬರೀಶ್ ಅವರು ಅರೋಗ್ಯ ಸಮಸ್ಯೆಯಿಂದಾಗಿ ದಾಖಲಾಗಿದ್ದರು. ಕಿಡ್ನಿ ಸಮಸ್ಯೆಯಿಂದಲೂ ಅಂಬರೀಶ್ ಬಳಲುತ್ತಿದ್ದರು. ಆದರೆ, ಕೆಲವೊಮ್ಮೆ ತೀವ್ರ ಸಂತಸ, ಆಘಾತವೂ ಕೂಡ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಮಂಡ್ಯ ಬಸ್ ದುರಂತವೂ ಅಂಬರೀಶ್ ಸಾವಿಗೆ ಕಾರಣವಾಗಿರಬಹುದು ಎಂಬ ಮಾತು ಅಭಿಮಾನಿ ಬಳಗದಲ್ಲಿ ಕೇಳಿ ಬರುತ್ತಿದೆ.