ಬೆಂಗಳೂರು:  ಮಂಡ್ಯಕ್ಕೆ ದೇಶ ಬದಲಾವಣೆ ಮಾಡುವ ಶಕ್ತಿ ಇದೆ. ಈ ಕ್ಷೇತ್ರದ ಜನ ಕೃಷಿ ಆಧರಿಸಿ ಬದುಕುತ್ತಿದ್ದಾರೆ. ರೈತನಿಗೆ ಲಂಚ, ಪಿಂಚಣಿ, ನಿವೃತ್ತಿ ಯಾವುದೂ ಇಲ್ಲ. ಈ ರೈತರು ಮಳೆ, ಭೂಮಿ, ಬೆಳೆ ಮೇಲೆ ಅವಲಂಬಿತವಾಗಿದ್ದಾರೆ. ಈ ರೈತರ ರಕ್ಷಣೆ ಮಾಡಬೇಕಿದೆ. ಈ ಸಂದರ್ಭದಲ್ಲಿ ಮೈಸೂರು ಮಹಾರಾಜರು ಹಾಗೂ ವಿಶ್ವೇಶ್ವರಯ್ಯ ಅವರು ನಮ್ಮ ಬದುಕಿಗೆ ದೊಡ್ಡ ಶಕ್ತಿ ನೀಡಿದ್ದು, ಅವರನ್ನು ಈಗಲೂ ಸ್ಮರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದರು.


COMMERCIAL BREAK
SCROLL TO CONTINUE READING

ಮದ್ದೂರಿನ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿಅವರು ಭಾಗವಹಿಸಿ ಮಾತನಾಡುತ್ತಿದ್ದರು


ಈ ಮಂಡ್ಯ ಜಿಲ್ಲೆ ಹಾಗೂ ಕ್ಷೇತ್ರದ ಇತಿಹಾಸವನ್ನು ನಾವು ಸ್ಮರಿಸಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಈ ಭೂಮಿ ಮಹತ್ವದ ಪಾತ್ರ ವಹಿಸಿತ್ತು ಎಂಬುದಕ್ಕೆ ಶಿವಪುರಸೌಧವೆ ಸಾಕ್ಷಿ. ಬ್ರಿಟೀಷರನ್ನು ಓಡಿಸಲು ಈ ಭಾಗದ ಹಿರಿಯರು ಮಾಡಿದ ಹೋರಾಟ, ತ್ಯಾಗ ಬಲಿದಾನಕ್ಕೆ ಈ ಸೌಧ ಸಂಕೇತವಾಗಿದೆ.


ಹೀರಣ್ಣ ಗೌಡರು, ಶಂಕರೇಗೌಡರು, ಮಾದೆಗೌಡರು, ಮಂಚೆಗೌಡರು, ಅಂಬರೀಷ್ ಹಾದಿಯಾಗಿ ಅನೇಕ ನಾಯಕರು ಈ ಭೂಮಿಗೆ ಸೇವೆ ಸಲ್ಲಿಸಿದ್ದಾರೆ. ಈ ಭೂಮಿಯಲ್ಲಿ ಹುಟ್ಟಿ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಎಸ್.ಎಂ. ಕೃಷ್ಣ ಅವರ ಸಾಧನೆ ಸ್ಮರಿಸಲು ಬಯಸುತ್ತೇನೆ.


ಇದನ್ನೂ ಓದಿ : ಜನವರಿ ತಿಂಗಳಲ್ಲಿ 6,085 ಕೋಟಿ ರೂ. GST ಸಂಗ್ರಹ: ಸಿಎಂ ಬಸವರಾಜ ಬೊಮ್ಮಾಯಿ


ಇಲ್ಲಿ ಸೇರಿರುವವರು ರೈತರು. ಇವರಿಗೆ ಕೃಷಿ ಬಿಟ್ಟರೆ ಬೇರೆ ಅವಕಾಶ ಇಲ್ಲ. ಇವರು ಸೂರ್ಯ, ಭೂಮಿ ಹಾಗೂ ನೀರನ್ನು ಅವಲಂಭಿಸಿದ್ದಾರೆ.


ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅವರದೇ ಆದ ಸಿದ್ಧಾಂತದ ಮೇಲೆ ಆಡಳಿತ ನಡೆಸುತ್ತಿದೆ. ಈ ಜಿಲ್ಲೆಯಲ್ಲಿ 7 ಜೆಡಿಎಸ್ ಶಾಸಕರನ್ನು ಕೊಟ್ಟಿದ್ದೀರಿ. ನಾವು 80 ಸೀಟು ಗೆದ್ದಿದ್ದರೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು 38 ಸ್ಥಾನ ಗೆದ್ದಿದ್ದ ಕುಮಾರಸ್ವಾಮಿ ಅವರಿಗೆ ಬೇಷರತ್ ಬೆಂಬಲ ನೀಡಿದ್ದೆವು. ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ನಾಯಕರಲ್ಲಿ ಹಲವು ಭಿನ್ನಾಭಿಪ್ರಾಯ ಇದ್ದರೂ ಕೂಡ ನಾನು ಹಾಗೂ ಕಾಂಗ್ರೆಸ್ ಪಕ್ಷ ಅವರ ಬೆಂಬಲಕ್ಕೆ ನಿಂತಿದ್ದೆವು. ರಾಜಕೀಯದಲ್ಲಿ ಭಿನ್ನ ಅಭಿಪ್ರಾಯ ಇದ್ದರೂ ಒಂದು ಸಿದ್ಧಾಂತಕ್ಕಾಗಿ ನಾನು ಅವರ ಬೆಂಬಲಕ್ಕೆ ನಿಂತೆ. ಕುಮಾರಸ್ವಾಮಿ ಅವರೇ ಶಿವಕುಮಾರ್ ನಮ್ಮ ಜತೆ ನಿಂತಿದ್ದಾರೆ, ನಾವು ಜೋಡೆತ್ತುಗಳು ಎಂದು ಹೇಳಿದ್ದರು.


ರಾಜಕಾರಣ ನಿಂತ ನೀರಲ್ಲ. ಯಾವುದೇ ಬದಲಾವಣೆ ಸಾಧ್ಯ. ಈ ಕ್ಷೇತ್ರದ ಶಾಸಕರಿಗೆ ಶಕ್ತಿ ಕೊಟ್ಟಿದ್ದು ಮಾದೆಗೌಡರು, ಎಸ್.ಎಂ ಕೃಷ್ಣ. ಅವರು ಕ್ಷೇತ್ರ ಬಿಟ್ಟು ಕೊಡದಿದ್ದರೆ ಈ ಸ್ಥಾನಕ್ಕೆ ಏರುತ್ತಿರಲಿಲ್ಲ. ನಮಗೆ ಸಹಾಯ ಮಾಡಿದವರನ್ನು ಸ್ಮರಿಸಬೇಕು. ಅವರಿಗೆ ಮೂರ್ನಾಲ್ಕು ಬಾರಿ ಅವಕಾಶ ನೀಡಿದ್ದೀರಿ.


ನಮ್ಮ ಪಕ್ಷ ದೇವೇಗೌಡರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿತ್ತು. ನಂತರ ಕುಮಾರಸ್ವಾಮಿ ಅವರು ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದರು. ಆದರೆ ನಾವು ಅವರಿಗೆ ಸಹಾಯ ಮಾಡಿದ್ದೇವೆ. ನಾವೆಲ್ಲರೂ ಸೇರಿ ಅವರಿಗೆ ಅವಕಾಶ ನೀಡಿದ್ದೇವೆ.ಈಗ ಕಾಲ ಬದಲಾಗುತ್ತಿದೆ. ರೈತರ ಬದುಕನ್ನು ಬದಲಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇದೆ. ನಾವು ಯಾರಿಗಾಗಿ ಮೇಕೆದಾಟು ಪಾದಯಾತ್ರೆ ಮಾಡಿದೆವು?


ಪ್ರತಿ ವರ್ಷ 400 ಟಿಎಂಸಿ ನೀರು ಸಮುದ್ರ ಪಾಲಾಗುತ್ತಿದೆ. ಅದನ್ನು ತಡೆಹಿಡಿದು, ನಿಮಗೆ ನೀರಿನ ಕೊರತೆ ಬಾರದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಹೀಗಾಗಿ ನಾವು ಮೇಕೆದಾಟು ಯೋಜನೆ ಮಾಡಿಯೇ ತೀರುತ್ತೇವೆ.ಡಿ.ಕೆ ಶಿವಕುಮಾರ್ ಬದ್ಧ. ಆಮೂಲಕ ಮಂಡ್ಯ ರೈತರ ಹಿತ ಹಾಗೂ ಸ್ವಾಭಿಮಾನ ರಕ್ಷಿಸುತ್ತೇವೆ.ಕೃಷ್ಣ ಅವರು ಮಂಡ್ಯ ಜನರಿಗಾಗಿ ಬೆಂಗಳೂರಿನಿಂದ ಮಂಡ್ಯವರೆಗೂ ಪಾದಯಾತ್ರೆ ಮಾಡಿದ್ದರು. ನಾವು ಮೇಕೆದಾಟು ಪಾದಯಾತ್ರೆ ಮಾಡಿದೆವು. ಈ ಹೋರಾಟಗಳು ನಿಮಗಾಗಿ.


ಇಂದು ಪ್ರಜಾಧ್ವನಿ ಯಾತ್ರೆ ಮಾಡುತ್ತಿರುವುದೇ ನಿಮ್ಮ ನೋವು, ಸಂಕಷ್ಟಕ್ಕೆ ಪರಿಹಾರ ನೀಡಲು. ಬೆಳಗಾವಿಯಿಂದ ಈ ಯಾತ್ರೆ ಆರಂಭಿಸಿದ್ದೇವೆ.  ಈ ರಾಜ್ಯದ ಬದಲಾವಣೆಗಾಗಿ, ಭ್ರಷ್ಟ ಆಡಳಿತ ತೆಗೆಯಲು ನೀವು ಪಣ ತೊಡಬೇಕು.ಚುನಾವಣೆಗೂ ಮುನ್ನ ಕೊಟ್ಟ ಯಾವುದೇ ಭರವಸೆ ಈಡೇರಿಸಿಲ್ಲ. ಮೋದಿ ಅವರು ಅಚ್ಛೇದಿನ ನೀಡುತ್ತೇವೆ ಎಂದರು, ನಿಮ್ಮ ಆದಾಯ ಡಬಲ್ ಮಾಡುತ್ತೇವೆ ಎಂದರು, ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು, ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು, ಈ ಭರವಸೆಗಳನ್ನು ಈಡೇರಿಸಿದ್ದಾರಾ?  ಅವರಿಂದ ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಆಯಿತಾ?


ಇದನ್ನೂ ಓದಿ: ಬಿಜೆಪಿ ಜಾತಿ ಆಧಾರದ ಮೇಲೆ ಸಿಎಂ ಆಯ್ಕೆ ಮಾಡಲ್ಲ: ಶಾಸಕ ರಘುಪತಿ ಭಟ್


ಬೆಲೆ ಏರಿಕೆಯಿಂದ ಎಲ್ಲಾ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ಆದಾಯ ಮಾತ್ರ ಡಬಲ್ ಆಗಲಿಲ್ಲ. ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಎರಡು ಗ್ಯಾರಂಟಿ ಯೋಜನೆ ಘೋಷಿಸಿದೆ. ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ವಿದ್ಯುತ್ ಉಚಿತ, ಆಮೂಲಕ ಇನ್ನು ಮುಂದೆ ನೀವು 200 ಯುನಿಟ್ ಒಳಗೆ ವಿದ್ಯುತ್ ಬಳಸಿದರೆ ಯಾರೂ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆ ಯಜಮಾನಿಗೆ 2000 ರೂ. ಪ್ರತಿ ತಿಂಗಳು ಕೊಡ್ತೇವೆ. ವರ್ಷಕ್ಕೆ ಒಟ್ಟು 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷ ಕೊಡ್ತೆವೆ. ಜತೆಗೆ 10 ಕೆಜಿ ಅಕ್ಕಿ. ನಾನು ಸಿದ್ದರಾಮಯ್ಯ ಸಹಿ ಹಾಕಿರೋ ಗ್ಯಾರಂಟಿ ಕಾರ್ಡ್ ನಿಮ್ಮ ಮನೆಗೆ ಬರ್ತದೆ. ಇನ್ನು ಪ್ರತಿ ಮನೆಗೆ ನೀಡಲಾಗುವ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿಗೆ ಏರಿಕೆ ಮಾಡುತ್ತೇವೆ. ಮೇ ತಿಂಗಳಲ್ಲಿ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ, ಜೂನ್ ತಿಂಗಳಿಂದ ಈ ಯೋಜನೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ನಾವು ಯೋಜನೆ ಜಾರಿ ಮಾಡದಿದ್ದರೆ ನಾನು ಮತ್ತೆ ಮತ ಕೇಳಲು ನಿಮ್ಮ ಮುಂದೆ ಬರುವುದಿಲ್ಲ.


ಇದು ಮಹಿಳಾ ನಾಯಕಿಯರನ್ನು ಆಯ್ಕೆ ಮಾಡಿರುವ ಜಿಲ್ಲೆ. ಇಲ್ಲಿ ಯಾರೇ ನಿಂತರು, ಡಿ.ಕೆ. ಶಿವಕುಮಾರ್ ಅಭ್ಯರ್ಥಿ. ನನಗೆ ಮಂಡ್ಯ, ರಾಮನಗರ ಹಾಗೂ ಕನಕಪುರ ಒಂದೇ.ಎಸ್.ಎಂ ಕೃಷ್ಣ ಅವರನ್ನು ಮುಖ್ಯಮಂತ್ರಿ ಮಾಡಿದ ಭೂಮಿ ಇದು. ಅವರ ಕಾಲದಲ್ಲಿ ಹಾಗೂ ಬಂಗಾರಪ್ಪ ಅವರ ಕಾಲದಲ್ಲಿ ನಾನು ಜಿಲ್ಲಾ ಮಂತ್ರಿ ಆಗಿದ್ದೆ. ನನಗೆ ಈ ಜಿಲ್ಲೆಯ ನಾಡಿ ಮಿಡಿತ ಗೊತ್ತಿದೆ. ನಾನು ಕೂಡ ಈ ಮಣ್ಣಿನ ಮಗ. ನನಗೆ ರಾಜಕೀಯವಾಗಿ ಶಕ್ತಿ ನೀಡಬೇಕು. ನನ್ನ ಕೈ ಬಲಪಡಿಸಬೇಕು. ನಿಮ್ಮ ಮಗನ ಆಡಳಿತ ನೋಡಬೇಕು ಎನ್ನುವುದಾದರೆ ನನಗೆ ಆಶೀರ್ವಾದ ಮಾಡಿ ಎಂದು ನಿಮಗೆ ಕೈ ಮುಗಿದು ಕೇಳುತ್ತೇನೆ ಎಂದು ಅವರು ಮನವಿ ಮಾಡಿದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.