ಮಂಗಳೂರು : ನಗರದ ಜನತೆಗೆ ಒಂದು ಸಿಹಿ ಸುದ್ದಿ. ದಶಕದ ಹಿಂದೆ ಸುಗಮ ಸಂಚಾರ ವ್ಯವಸ್ಥೆ ಕಲಿಸುವ ಉದ್ದೀಶದಿಂದ ಕೆಡವಲಾಗಿದ್ದ ನಗರದ ಸಾಂಪ್ರದಾಯಿಕ `ಕ್ಲಾಕ್ ಟವರ್' (ಗಡಿಯಾರ ಗೋಪುರ) ಇದೀಗ ಮರುಜೀವ ಪಡೆಯುತ್ತಿದೆ. 


COMMERCIAL BREAK
SCROLL TO CONTINUE READING

ಮಂಗಳೂರು ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಮಹತ್ಕಾರ್ಯಕ್ಕೆ ಮುಂದಾಗಿದೆ. ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಮಹಾಪೌರರಾದ ಕವಿತಾ ಸನಿಲ್, ಈ ಹಿಂದೆ ಯುನಿವರ್ಸಿಟಿ ಕಾಲೇಜು ಬಳಿಯಿದ್ದ ಸ್ಥಳದಲ್ಲಿಯೇ ಕ್ಲಾಕ್ ಟವರ್ ಅನ್ನು ಮರುಸ್ಥಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ. 


ಕ್ಲಾಕ್ ಟವರ್ ನಿರ್ಮಾಣವು ಸ್ಮಾರ್ಟ್ ಸಿಟಿ ಯೋಜನೆಯಡಿ ಬರದಿದ್ದರೂ ಮೇಯರ್ ಅವರ ಸೂಚನೆ ಮೇರೆಗೆ ಸೇರಿಸಲಾಗಿದೆ. ಮುಖ್ಯ ಕಟ್ಟಡ, ಪ್ರಾಂಗಣ, ಅಲ್ಯುಮಿನಿಯಂ ಏಣಿ, ಗಡಿಯಾರ ಅಳವಡಿಕೆ, ವಿದ್ಯುತ್ ಸಂಪರ್ಕ ಸೇರಿದಂತೆ ಗೋಪುರ ನಿರ್ಮಾಣಕ್ಕೆ ಸುಮಾರು 90 ಲಕ್ಷ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 


ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು ಮತ್ತು ಕಾಮಗಾರಿಗೆ ಕೂಡಲೇ ಟೆಂಡರ್ ಕರೆಯಲಾಗುವುದು ಎಂದು ಮೇಯರ್ ತಿಳಿಸಿದ್ದಾರೆ. 2018ರ ಜನವರಿ 15 ಕ್ಕೆ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. 


ಈ ಯೋಜನೆಯನ್ನು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸುವ ಉದ್ದೇಶ ಹೊಂದಿರುವ ಪಾಲಿಕೆಯು ಅಲ್ಪಾವಧಿ ಟೆಂಡರ್ ಕರೆಯಲು ಉದ್ದೇಶಿಸಿದೆ. 21ಮೀ. ಎತ್ತರದ ತ್ರಿಕೋನಾಕಾರದ ಈ ಕ್ಲಾಕ್ ಟವರ್ (ಗಡಿಯಾರ ಗೋಪುರ) ಈ ಹಿಂದೆ ನಗರದ ಹೆಗ್ಗುರುತಾಗಿದ್ದ ಗೋಪುರವನ್ನೇ ಹೋಲಲಿದೆ ಎಂದು ಮೇಯರ್ ತಿಳಿಸಿದ್ದಾರೆ.