ನವ ದೆಹಲಿ: ಕಾವೇರಿ ಜಲವಿವಾದದ ವಿಚಾರಣೆ ಕೊನೆಯಾಗಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಗೆ ಸಲ್ಲಿಸಬೀಕಾಗಿರುವ 'ಮಾಸ್ಟರ್ ನೋಟ್ಸ್' (ಪ್ರಮುಖಾಂಶಗಳ) ಕುರಿತು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಸೋಮವಾರ ರಾಜ್ಯದ ಜಲವಿವಾದಗಳ ವಕೀಲರ  ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳ ಜೊತೆ ಮಹತ್ವದ ಮಾತುಕತೆ ನಡೆಸಿದರು. 


COMMERCIAL BREAK
SCROLL TO CONTINUE READING

ನವದೆಹಲಿಯ ಕರ್ನಾಟಕ ಭವನದಲ್ಲಿ ಸುಮಾರು ಒಂದು ಗಂಟೆ ಚರ್ಚೆ ನಡೆಸಿದ ಎಂ.ಬಿ. ಪಾಟೀಲ್, ನಂತರ ರಾಜ್ಯದ ಜಲವಿವಾದಗಳ ವಕೀಲರ ತಂಡದ ನಾಯಕ ಹಿರಿಯ ನ್ಯಾಯವಾದಿ ಫಾಲಿ ಎಸ್. ನಾರೀಮನ್ ಅವರೊಂದಿಗೆ ಸಮಾಲೋಚನೆ ನಡೆಸಿದರು. 


ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ  ಸಚಿವ ಎಂ.ಬಿ ಪಾಟೀಲ್,  ಸುಪ್ರೀಂ ಕೊರ್ಟ್ ನಲ್ಲಿ ಈಗ ಕಾವೇರಿ ಜಲವಿವಾದದ ವಿಚಾರಣೆ ಕೊನೆಯಾಗಿದೆ. ನ್ಯಾಯಾಲಯಕ್ಕೆ ಲಿಖಿತ ದಾಖಲೆಗಳನ್ನು ಸಲ್ಲಿಸಬೇಕಾಗಿದೆ. ಒಂಭತ್ತು ಅಂಶಗಳನ್ನು ಸಲ್ಲಿಸಲು ನಿರ್ಧರಿಸಲಾಗಿದೆ. ಲಿಖಿತ ದಾಖಲೆಗಳಲ್ಲಿ ಯಾವ ಅಂಶಗಳು ಇರಬೇಕು ಎಂಬುದನ್ನೂ ಚರ್ಚಿಸಿದ್ದೇವೆ. ಈ ಬಗ್ಗೆ ವಕೀಲರ ತಂಡದ ಜೊತೆ ಗೌಪ್ಯ ಮಾತುಕತೆಯಾಗಿದೆ. ಹಿರಿಯ ವಕೀಲ ನಾರಿಮನ್ ಜೊತೆ ಮಾತುಕತೆ ನಡೆಸಿ ಅಂತಿಮ ತಿರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.


ಮಹದಾಯಿ ನದಿ ನೀರು ಹಂಚಿಕೆ ವಿಚಾರವನ್ನು ಪ್ರಸ್ತಾಪಿಸಿದ ಎಂ.ಬಿ. ಪಾಟೀಲ್, ಕರ್ನಾಟಕ ಮತ್ತು ಗೋವಾಕ್ಕೆ 25 ಪ್ರಶ್ನೆಗಳನ್ನು ಸಲ್ಲಿಸಲು ನ್ಯಾಯಧಿಕರಣ ಹೇಳಿದೆ‌. ಆ ಬಗ್ಗೆಯೂ ನಾರಿಮನ್ ನಿರ್ಧಾರ ಮಾಡುತ್ತಾರೆ. ಈ ಸೂಕ್ಷ್ಮ ವಿಚಾರಗಳ ಬಗ್ಗೆ ಮಾಧ್ಯಮಕ್ಕೆ ತಿಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.