ರಾಮನಗರ: ಕಾಂಗ್ರೆಸ್ ನಿಂದ Mekedatu ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕೈಗೊಂಡ ಪಾದಯಾತ್ರೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕನಕಪುರದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಪಾದಯಾತ್ರೆ ಘೋಷಣೆ ಮಾಡಿದ್ದು, ರಾಜ್ಯದ ಜನತೆ ನಮ್ಮ ನಿರ್ಧಾರ ಪ್ರಸ್ತುತವಾಗಿದೆ ಎಂದು ಬೆಂಬಲ ಸೂಚಿಸಿದ್ದಾರೆ. ಜನರ ಉತ್ಸಾಹ ತಾವೂ ಗಮನಿಸಿದ್ದೀರಿ ಎಂದರು.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ಪಕ್ಷದ ಸುಮಾರು 120 ನಾಯಕರು ಇಂದು ಅನೇಕ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಸರ್ಕಾರ ತೆಗೆದುಕೊಂಡಿರುವ ರಾಜಕೀಯ ನಿರ್ಧಾರದ ಆಗು-ಹೋಗುಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ರಾಜ್ಯದಲ್ಲಿ ನಮ್ಮ ಹೋರಾಟ ನಿಲ್ಲಿಸಲು, ಇಡೀ ರಾಜ್ಯದ ಜನರಿಗೆ ತೊಂದರೆ ನೀಡಲು ಸರಕಾರ ಕಾರ್ಯಕ್ರಮ ರೂಪಿಸಿರುವ ಬಗ್ಗೆ ಚರ್ಚೆ ಮಾಡಿದ್ದೇವೆ. 


ಇದನ್ನೂ ಓದಿ: ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನಲೆಯಲ್ಲಿ ಸರ್ವಪಕ್ಷಗಳ ಸಭೆ ಕರೆಯಲು ಆಗ್ರಹಿಸಿದ ಕಾಂಗ್ರೆಸ್


ಸರ್ಕಾರ ಹೇರಿರುವ ವೀಕೆಂಡ್ ಕರ್ಫ್ಯೂ ಜನರ ಬದುಕಿಗೆ ಆರ್ಥಿಕವಾದ ಸಂಕಟ, ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ಚರ್ಚಿಸಿ ಸರ್ಕಾರದ ನಿರ್ಧಾರವನ್ನು ಖಂಡಿಸುತ್ತಿದ್ದೇವೆ.ನಮ್ಮ ಜಿಲ್ಲೆಯಲ್ಲಿ ಯಾರೊಬ್ಬರೂ ಕೋವಿಡ್ ಸೋಂಕಿತರಾಗಿ ಐಸಿಯುನಲ್ಲಿ ದಾಖಲಾಗಿಲ್ಲ. ಒಂದು ಸಾವು ಆಗಿಲ್ಲ. ರಾಜ್ಯದ ಬೇರೆ ಜಿಲ್ಲೆಗಳಲ್ಲೂ ಐಸಿಯು ರೋಗಿಗಳಿಲ್ಲ. ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಹೆಚ್ಚಿನ ಪ್ರಕರಣದ ಸಂಖ್ಯೆ ತೋರುತ್ತಿದ್ದಾರೆ. ಆಮೂಲಕ ನಮ್ಮ ಪಾದಯಾತ್ರೆ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.


ನಮ್ಮ ಬಳಿ ಸರ್ಕಾರದ ದಾಖಲೆ ಇದ್ದು, ರಿಯಾಲಿಟಿ ಚೆಕ್ ಮಾಡಿದ್ದೇವೆ. ನಾಳೆ ನಡೆಯುವ ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಪಾಲನೆ ಮಾಡುತ್ತೇವೆ. ಸರ್ಕಾರ ಏನೇ ಮಾಡಿದರೂ ಪಾದಯಾತ್ರೆ ತಡೆಯಲು ಸಾಧ್ಯವಿಲ್ಲ. ಆದರೂ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತರಲು ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ.ಇಂದು ಕೆಲವು ಪತ್ರಿಕೆಗಳಲ್ಲಿ ಹೆಸರು, ದಿಕ್ಕು ದಿಸೆ ಇಲ್ಲದೆ 2 ಪುಟ ಜಾಹೀರಾತು ನೀಡಿದ್ದಾರೆ. ಆ ಮೂಲಕ ಸುಳ್ಳು ಮಾಹಿತಿ ನೀಡಿದ್ದಾರೆ. ಅದಕ್ಕೆ ನಾವೂ ಉತ್ತರ ನೀಡುತ್ತೇವೆ, ಜನರೂ ಉತ್ತರ ನೀಡುತ್ತಾರೆ.


ಅಧಿಕಾರಿಗಳ ಮೂಲಕ ಕಾನೂನು ವಿರುದ್ಧವಾದ ಆದೇಶ ಹೊರಡಿಸಿದ್ದಾರೆ. ಲಾಕ್ ಡೌನ್, ಕರ್ಫ್ಯೂ ತೀರ್ಮಾನ ತೆಗೆದುಕೊಳ್ಳಲು ಅದಕ್ಕೆ ಆದ ಮಾರ್ಗಸೂಚಿ ಇದೆ. ಇನ್ನು ಪ್ರತಿಭಟನೆಗೆ ಯಾವುದೇ ಕಾರಣಕ್ಕೂ 144 ಸೆಕ್ಷನ್ ಹಾಕಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಹೀಗಾಗಿ ನಾವು ಯಾವ ರೀತಿ ಮುಂಜಾಗ್ರತೆ ವಹಿಸಿಕೊಳ್ಳಬೇಕು, ಯಾವರೀತಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಯಾವರೀತಿ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು ಎಂದು ಚರ್ಚಿಸಿದ್ದೇವೆ.


ಇದನ್ನೂ ಓದಿ: ದೇಶದೆಲ್ಲೆಡೆ ಕೊರೊನಾ ಮೂರನೇ ಅಲೆ ಹಾವಳಿ? ದೆಹಲಿ, ಮುಂಬೈನಲ್ಲಿ 20 ಸಾವಿರಕ್ಕೂ ಅಧಿಕ ಪ್ರಕರಣ ದಾಖಲು


1 ಲಕ್ಷ ಮಾಸ್ಕ್ ಸಿದ್ಧಪಡಿಸಿದ್ದೇವೆ, ಕುಡಿಯಲು ಶುದ್ಧ ನೀರು, 100 ವೈದ್ಯರ ತಂಡ ನಮ್ಮ ಸೇವೆಗೆ ಸಿದ್ಧರಿದ್ದು, ಒಂದೂವರೆ ಸಾವಿರ ಕಾರ್ಯಕರ್ತರು ಊಟ, ವಸತಿ ಸೇವೆ ಮಾಡಲು ಬದ್ಧರಿದ್ದಾರೆ.ಹಳ್ಳಿಜನ ನಮ್ಮ ಸ್ವಾಗತಕ್ಕೆ ಕಾತುರರಾಗಿದ್ದೇವೆ. ಮೈಸೂರಿನಲ್ಲಿ ನಾನು ಹಾಗೂ ಸಿದ್ಧರಾಮಯ್ಯ ಅವರು ನಮ್ಮ ಅಚಲ ನಿರ್ಧಾರ ಪ್ರಕಟಿಸಿದ್ದು, ಅದಕ್ಕೆ ಬದ್ಧರಾಗಿ, ನೀರಿಗಾಗಿ ನಡಿಗೆ, ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆ ನಾಳೆ ಬೆಳಿಗ್ಗೆ 8.30ಕ್ಕೆ ಆರಂಭಿಸುತ್ತೇವೆ. ಈ ಹೋರಾಟ ರಾಜ್ಯದ ಜನ, ರೈತರ ಹಿತಕ್ಕಾಗಿ, ಬೆಂಗಳೂರು ಜನರ ಕುಡಿಯುವ ನೀರಿಗಾಗಿ. ಈ ಐತಿಹಾಸಿಕ ಹೋರಾಟದಲ್ಲಿ ನೀವೆಲ್ಲಾ ಕೋವಿಡ್ ನಿಯಮ ಪಾಲಿಸಿಕೊಂಡು ಭಾಗವಹಿಸಿ ಕಾರ್ಯಕ್ರಮ ಯಶಸ್ಸುಗೊಳಿಸಬೇಕು.


ಕಾರ್ಯಕರ್ತರು ಬೆಳಗ್ಗೆ 7.30ಕ್ಕೆ ಅಲ್ಲಿಗೆ ಆಗಮಿಸಿ. ಎಲ್ಲರೂ ಮಾಸ್ಕ್, ಸ್ಯಾನಿಟೈಸರ್ ಬಳಸಿ ಬರಬೇಕು. ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ನಾಳೆ ನಡೆಯುವ ಪಾದಯಾತ್ರೆ ಬಗ್ಗೆ ವಿವರಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.