2021ರ ಒಳಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಗೊಳ್ಳಲಿದೆ ಮೆಟ್ರೋ
ನಾಗವಾರದಿಂದ ಕೆಂಪೇಗೌಡ ವಿಮಾನ ನಿಲ್ದಾಣದ ನಡುವೆ ಏಳು ಮೆಟ್ರೋ ನಿಲ್ದಾಣಗಳು.
ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆಗೆ ರಾಜ್ಯ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ. 2021ರ ಒಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
ಕ್ಯಾಬಿನೇಟ್ ಸಭೆಯ ನಂತರ ಸುದ್ದಿರಾರೊಂದಿಗೆ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಸುಮಾರು 5,950 ಕೋಟಿ ವೆಚ್ಚದಲ್ಲಿ 29.8 ಕಿ.ಮೀ. ಉದ್ದದ ನಾಗವಾರದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸೇವೆ ಕಲ್ಪಿಸುವ ಯೋಜನೆಗೆ ಸಂಪುಟದ ಒಪ್ಪಿಗೆ ದೊರೆತಿದೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು 2021ರ ಒಳಗೆ ಈ ಯೋಜನೆ ಪೂರ್ಣಗೊಳಿಸುವಂತೆ ಸಮಯ ನಿಗದಿಗೊಳಿಸಲಾಗಿದೆ. ನಾಗವಾರದಿಂದ ಕೆಂಪೇಗೌಡ ವಿಮಾನ ನಿಲ್ದಾಣದ ನಡುವೆ ಏಳು ಮೆಟ್ರೋ ನಿಲ್ದಾಣಗಳು ಬರಲಿವೆ ಎಂದು ಜಯಚಂದ್ರ ತಿಳಿಸಿದರು.
ನಮ್ಮ ಮೆಟ್ರೋ ಯೋಜನೆಯನ್ನು ನಗರದ ನಾಗವಾರದಿಂದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಸ್ತರಿಸುವ ಮಹತ್ವಾಕಾಂಕ್ಷಿ ಯೋಜನೆ ಸೇರಿದಂತೆ ಹಲವು ಪ್ರಮುಖ ನಿರ್ಣಯ ಕೈಗೊಳ್ಳಲಾಯಿತು ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.