ಜಮ್ಮು ಕಾಶ್ಮೀರದ ಸೇನಾ ನೆಲೆಯ ಮೇಲೆ ಉಗ್ರರ ದಾಳಿ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸುಂಜಾವನ್ ಪ್ರದೇಶದಲ್ಲಿ ಭಯೋತ್ಪಾದಕರು ದಾಳಿ ಮಾಡಿದ್ದಾರೆ. ಈ ವೇಳೆಯಲ್ಲಿ ಸೈನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸೇನಾ ಶಿಬಿರದ ಮೇಲೆ ದಾಳಿ ಮಾಡಿರುವ ಭಯೋತ್ಪಾದಕರು, ದಾಳಿಯಲ್ಲಿ ಮೂವರು ಭದ್ರತಾ ಸಿಬ್ಬಂಧಿ ಮತ್ತು ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಯ ಕುರಿತಾಗಿ ಪ್ರತಿಕ್ರಯಿಸಿರುವ ಜಮ್ಮು ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಐಜಿಪಿ) ಎಸ್.ಡಿ.ಸಿಂಗ್ ಜಾಮ್ವಾಲ್ "ಬೆಳಗ್ಗೆ 4:45 ಗಂಟೆಗೆ ಉಗ್ರಗಾಮಿಗಳು ಗೇಟ್ ಮೇಲೆ ಗುಂಡು ಹಾರಿಸಿದ್ದಾರೆ, ಈ ವೇಳೆ ಸೈನಿಕನ ಮಗಳು ಮತ್ತು ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಆದರೆ ಇದುವರೆಗೂ ಆ ಉಗ್ರರ ಸಂಖ್ಯೆ ಬಗ್ಗೆ ಯಾವುದೇ ಮಾಹಿತಿ ಇಲ್ಲ" ಎಂದು ಅವರು ತಿಳಿಸಿದ್ದಾರೆ.
ಗೃಹ ಸಚಿವ ರಾಜ್ ನಾಥ್ ಸಿಂಗ್ ರವರು ದಾಳಿಗೆ ಸಂಬಂಧಿಸಿದಂತೆ ಗೃಹ ಸಚಿವಾಲಯ ಮತ್ತು ಜಮ್ಮು ಮತ್ತು ಕಾಶ್ಮೀರದ ಡೈರೆಕ್ಟರ್ ಜನರಲ್ ಆಫ್ ಪೋಲಿಸ್ (ಡಿಜಿಪಿ) ಎಸ್ಪಿ ವೈದ ರವರಿಗೆ ತನಿಖೆ ಕೈಗೊಳ್ಳಲು ಆಗ್ರಹಿಸಿದ್ದಾರೆ. ಈಗಾಗಲೇ, ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದು ಉಗ್ರರ ಹುಡುಕಾಟಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.