ಮಲ್ಲೇಶ್ವರಂನಲ್ಲಿ ಸದ್ಯದಲ್ಲೇ ನಾಲ್ವಡಿ ಪ್ರತಿಮೆ ಸ್ಥಾಪನೆ: ಅಶ್ವತ್ಥನಾರಾಯಣ
ನಾಡಿನ ಸರ್ವಾಂಗೀಣ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಿ, ಸರ್ವಸ್ವವನ್ನೂ ಧಾರೆ ಎರೆದಿರುವ ಮೈಸೂರು ಯದುವಂಶದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ಸದ್ಯದಲ್ಲೇ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರು: ನಾಡಿನ ಸರ್ವಾಂಗೀಣ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಿ, ಸರ್ವಸ್ವವನ್ನೂ ಧಾರೆ ಎರೆದಿರುವ ಮೈಸೂರು ಯದುವಂಶದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ಸದ್ಯದಲ್ಲೇ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. ಮಲ್ಲೇಶ್ವರಂನಲ್ಲಿರುವ ಬಿಎಚ್ಇಎಲ್ ಕೈಗಾರಿಕೆಯ ಇ.ಪಿ.ಡಿ. ವಿಭಾಗದ ಕರ್ನಾಟಕ ಸಂಘವು ಬುಧವಾರ ಆಯೋಜಿಸಿದ್ದ ಕನ್ನಡೋತ್ಸವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾರ್ಖಾನೆಯ ಆವರಣದಲ್ಲಿರುವ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಮಂಟಪದ ನವೀಕೃತ ಪಾರಂಪರಿಕ ಪ್ರಾಂಗಣವನ್ನು ಉದ್ಘಾಟಿಸಲಾಯಿತು.
ಇದನ್ನೂ ಓದಿ: Mandya BJP : ಬಿಜೆಪಿ ನಾಯಕರ ದಿಢೀರ್ ಸಭೆ : ಕಮಲ ಸೇರ್ತಾರಾ ಸಂಸದೆ ಸುಮಲತಾ?
ಮೈಸೂರಿನ ಮಹಾರಾಜರು ಇಡೀ ದೇಶದಲ್ಲಿ ಮಾದರಿ ಆಡಳಿತಕ್ಕೆ ಮೇಲ್ಪಂಕ್ತಿಯಾಗಿ, ರಾಜರ್ಷಿ ಎನಿಸಿಕೊಂಡಿದ್ದರು. ಮಹಾತ್ಮ ಗಾಂಧೀಜಿಯವರೇ ಮೈಸೂರು ಸಂಸ್ಥಾನದ ಆಡಳಿತವನ್ನು ಕೊಂಡಾಡಿದ್ದರು. ಬಿಎಚ್ಇಎಲ್ ಸೇರಿದಂತೆ ಸಾರ್ವಜನಿಕ ರಂಗದ ಹಲವು ಉದ್ಯಮಗಳ ಸ್ಥಾಪನೆಗೆ ಯದುವಂಶದವರ ಕೊಡುಗೆ ಅಪಾರವಾದುದು ಎಂದು ಅವರು ಬಣ್ಣಿಸಿದರು.
ನಾಲ್ವಡಿಯವರು ಸೇರಿದಂತೆ ಈ ವಂಶದ ಅನೇಕ ಅರಸರು ನಾಡಿನ ಜನರ ಒಳಿತಿಗಾಗಿ ವಿಶ್ವವಿದ್ಯಾಲಯ, ಬ್ಯಾಂಕ್, ಕೈಗಾರಿಕೆಗಳು, ಜಲಾಶಯಗಳು ಇತ್ಯಾದಿಗಳನ್ನು ಶಾಶ್ವತ ಕೊಡುಗೆಯಾಗಿ ನೀಡಿದ್ದಾರೆ. ಇಂದು ಆಡಳಿತ ನಡೆಸುವವರಿಗೂ ಅವರು ಆದರ್ಶವಾಗಿದ್ದಾರೆ. ಹೀಗಾಗಿ ಮೈಸೂರಿನ ಚರಿತ್ರೆ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಚರಿತ್ರೆ ಈಗಲೂ ಮುಂದುವರಿದಿದ್ದು, ಈಗ ಯದುವೀರ ಕೃಷ್ಣದತ್ತ ಒಡೆಯರ್ ಅವರು ಕನ್ನಡ ಶಾಲೆಗಳ ಸಬಲೀಕರಣವನ್ನು ಕೈಗೊಂಡಿದ್ದು, `ಸ್ವಚ್ಛ ಭಾರತ’ ಆಂದೋಲನಕ್ಕೆ ರಾಯಭಾರಿಗಳಾಗಿದ್ದಾರೆ. ಅಲ್ಲದೆ, ಸ್ವತಃ ತಾವೇ ಮೈಸೂರಿನಲ್ಲಿ ಸೈಬರ್ ಸೆಕ್ಯುರಿಟಿ ಉತ್ಕೃಷ್ಟತಾ ಕೇಂದ್ರವನ್ನು ತೆರೆದು, ಉದ್ಯಮಶೀಲತೆಯನ್ನು ಮುಂದುವರಿಸಿದ್ದಾರೆ ಎಂದು ಸಚಿವರು ಮೆಚ್ಚುಗೆ ಸೂಸಿದರು.
ಗುಣಮಟ್ಟದ ಶಿಕ್ಷಣ ಪೂರೈಕೆಗೆ ಸಂಕಲ್ಪ ಮಾಡಿರುವ ಸರಕಾರವು ಪಾಲಿಟೆಕ್ನಿಕ್ ಮತ್ತು ಡಿಪ್ಲೊಮಾ ಶಿಕ್ಷಣಗಳನ್ನು ಸಮಗ್ರವಾಗಿ ಪರಿಷ್ಕರಿಸಿ, ಸಮಕಾಲೀನಗೊಳಿಸಲಾಗಿದೆ. ಜತೆಗೆ ಜಿಟಿಟಿಸಿ, ಜಿಟಿಟಿಐ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಕೂಡ ರಾಜ್ಯದಲ್ಲಿ ತೆರೆಯಲಾಗಿದೆ. ಇದರಿಂದಾಗಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವೈಮಾಂತರಿಕ್ಷ, ಸೆಮಿ ಕಂಡಕ್ಟರ್ ಮುಂತಾದ ಕ್ಷೇತ್ರಗಳಲ್ಲಿ ರಾಜ್ಯವು ಮುಂಚೂಣಿಯಲ್ಲಿರುವುದು ಸಾಧ್ಯವಾಗಿದೆ ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು.
ಇದನ್ನೂ ಓದಿ:'ಬಿಜೆಪಿ ಸರ್ಕಾರವು ಪೊಲೀಸರು ತಮ್ಮ ಅಣತಿಯಂತೆ ನಡೆಯಬೇಕು ಎಂದು ಬಯಸುತ್ತಿದೆ'
ಕಾರ್ಯಕ್ರಮದಲ್ಲಿ ಮೈಸೂರು ರಾಜವಂಶದ ಪ್ರತಿನಿಧಿ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪದ್ಮಶ್ರೀ ಪುರಸ್ಕೃತ ಹಿರೇಕಳ ಹಾಜಬ್ಬ, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ, ಬಿಎಚ್ಇಎಲ್ ಉನ್ನತಾಧಿಕಾರಿ ಎಸ್.ಎನ್.ಭಾಗ್ಯಶ್ರೀ, ಸಂಘದ ಉಪಾಧ್ಯಕ್ಷ ಟಿ.ತಿಮ್ಮೇಶ್ ಮುಂತಾದವರು ಉಪಸ್ಥಿತರಿದ್ದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.